- ಕೆಎಲ್‌ಇ ಸಂಸ್ಥೆಯ ಜಿಎಚ್ ಕಾಲೇಜ್‌ನಲ್ಲಿ ಡಿ.3ರಿಂದ ಡಿ.9ರವರೆಗೆ
- ‘ವಿಚಾರ ಪ್ರಣೀತ’ ರಾಜ್ಯ ಮಟ್ಟದ ಎನ್‌ಎಸ್‌ಎಸ್ ನಾಯಕತ್ವ ತರಬೇತಿ ಶಿಬಿರ
- ಜಿ.ಎಚ್. ಮಹಾವಿದ್ಯಾಲಯದ ಪ್ರಾಚಾರ್ಯ ಮಂಜುನಾಥ ಹೊಳ್ಳಿಯವರ
ಹಾವೇರಿ: ನಗರದ ಕೆಎಲ್‌ಇ ಸಂಸ್ಥೆಯ ಜಿಎಚ್ ಕಾಲೇಜ್‌ನಲ್ಲಿ ಡಿ.3ರಿಂದ ಡಿ.9ರವರೆಗೆ ‘ವಿಚಾರ ಪ್ರಣೀತ’ ರಾಜ್ಯ ಮಟ್ಟದ ಎನ್‌ಎಸ್‌ಎಸ್ ನಾಯಕತ್ವ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಜಿ.ಎಚ್. ಮಹಾವಿದ್ಯಾಲಯದ ಪ್ರಾಚಾರ್ಯ ಮಂಜುನಾಥ ಹೊಳ್ಳಿಯವರ ಹೇಳಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಕರ್ನಾಟಕ ಗಾಂಧೀ ಸ್ಮಾರಕ ನಿಧಿ ಮತ್ತು ಹಾವೇರಿ ಕೆ.ಎಲ್.ಇ. ಸಂಸ್ಥೆಯ ಗುದ್ದೆಪ್ಪ ಹಳ್ಳಿಕೇರಿ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜ್‌ನ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ಘಟಕಗಳ ಸಹಯೋಗದಲ್ಲಿ ಏಳು ದಿನಗಳ ಶಿಬಿರ ಹಮ್ಮಿಕೊಳ್ಳಲಾಗಿದೆ. ರಾಜ್ಯದ ವಿವಿಧ ಭಾಗಗಳಿಂದ 150ಕ್ಕೂ ಹೆಚ್ಚು ಸ್ವಯಂಸೇವಕರು ಆಗಮಿಸುವ ನಿರೀಕ್ಷೆ ಇದೆ. ಶಿಬಿರದಲ್ಲಿ ಗಾಂಧಿ ತತ್ವ, ಸಮಾಜಸೇವೆ, ವ್ಯಕ್ತಿತ್ವ ವಿಕಸನ, ಸಂವಾದ, ಅನುಭವ ಹಂಚಿಕೆ, ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರ ಮತ್ತು ನಾಯಕತ್ವ ಗುಣಗಳ ಕುರಿತು ತರಬೇತಿ ನೀಡಲಾಗುವುದು ಎಂದರು.
ಕರ್ನಾಟಕ ಗಾಂಧೀ ಸ್ಮಾರಕ ನಿಧಿಯ ಅಧ್ಯಕ್ಷ ಡಾ.ವೂಡೇ ಪಿ. ಕೃಷ್ಣ ಉದ್ಘಾಟಿಸಲಿದ್ದು, ಕೆ.ಎಲ್.ಇ. ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಎಂ.ಸಿ. ಕೊಳ್ಳಿ ಅಧ್ಯಕ್ಷತೆ ವಹಿಸಲಿದ್ದಾರೆ. ನಗರಸಭೆ ಅಧ್ಯಕ್ಷೆ ಶಶಿಕಲಾ ರಾಮು ಮಾಳಗಿ, ಹಾವೇರಿ ವಿಶ್ವವಿದ್ಯಾಲಯದ ಕುಲಪತಿ ಡಾ.ಸುರೇಶ ಜಂಗಮಶೆಟ್ಟಿ, ಕಾಲೇಜ್‌ನ ಸ್ಥಾನಿಕ ಆಡಳಿತ ಮಂಡಳಿಯ ಡಾ.ಎಸ್.ಎಲ್.ಬಾಲೇಹೊಸೂರು, ಕರ್ನಾಟಕ ಗಾಂಧೀ ಸ್ಮಾರಕ ನಿಧಿ ಗೌರವ ಕಾರ್ಯದರ್ಶಿ ಎಂ.ಸಿ.ನರೇಂದ್ರ, ಹಾವೇರಿ ವಿವಿ ಎನ್‌ಎಸ್‌ಎಸ್ ಸಂಯೋಜನಾಕಾರಿ ಡಾ.ಸಿ.ಎಸ್.ಕುಮ್ಮೂರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕಾಲೇಜ್‌ನ ಎನ್‌ಎಸ್‌ಎಸ್ ನೋಡಲ್ ಅಧಿಕಾರಿಗಳಾದ ಡಾ.ಶಮಂತಕುಮಾರ ಕೆ.ಎಸ್., ಡಾ.ಶಿವಾನಂದ ಪಾಯಮಲ್ಲೆ, ಪ್ರೊ.ಗಿರೀಶ ಹೊಸಳ್ಳಿ, ಪ್ರೊ.ಗುರುಪಾದಯ್ಯ ಸಾಲಿಮಠ ಇದ್ದರು.
ಡಿ.3ರಂದು ಮಧ್ಯಾಹ್ನ ಮಹಾತ್ಮ ಗಾಂಧೀಜಿ ಜೀವನ ಮತ್ತು ತತ್ವ ಕುರಿತು ಡಾ.ಶಿವಾನಂದ ಶೆಟ್ಟರ ಉಪನ್ಯಾಸ ನೀಡಲಿದ್ದಾರೆ. ಡಿ.4ರಂದು ಮಹಾತ್ಮಾ ಗಾಂಧೀ ಆಧುನಿಕ ಸಮಾಜದಲ್ಲಿ ಸತ್ಯ ಮತ್ತು ಅಹಿಂಸೆ ಕುರಿತು ಡಾ.ಸಂಧ್ಯಾ ಕುಲಕರ್ಣಿ, ಮಧ್ಯಾಹ್ನ ವೇಳೆಯಲ್ಲಿ ಮಹಾತ್ಮಾ ಗಾಂಧೀ ಅಹಿಂಸೆಯ ಮೂಲಕ ಸಂಘರ್ಷ ಪರಿಹಾರ ಕುರಿತು ಡಾ.ಸಂತೋಷ ಕುಮಾರ, ಸಂಜೆ ವೇಳೆ ನಿಧಿ ಶೋಧ ಕುರಿತು ರಿಷಿಕಾ ಡಿ. ಉಪನ್ಯಾಸ ನಡೆಯಲಿದೆ. ಡಿ.5ರಂದು ಬೆಳಗ್ಗೆ ಹಾವೇರಿ ಜಿಲ್ಲೆಯ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಕೊಡುಗೆ ವಿಷಯದ ಕುರಿತು ಡಾ.ಎಂ.ಸಿ ವಾಲಿ, ಮಧ್ಯಾಹ್ನ ಹಾವೇರಿ ವೀರರ ಸ್ವಾತಂತ್ರ್ಯ ಹೋರಾಟ ಕುರಿತು ಗೂಳಪ್ಪ ಅರಳಿಕಟ್ಟಿ ಉಪನ್ಯಾಸ ನೀಡಲಿದ್ದಾರೆ.
ಡಿ.6ರಂದು ಬೆಳಗ್ಗೆ ಸರ್ವೋದಯ - ಎಲ್ಲರ ಕಲ್ಯಾಣ ಕುರಿತು ಡಾ.ವೀಣಾ ಇ., ಮಧ್ಯಾಹ್ನ ಗಾಂಧೀಜಿ ಮತ್ತು ಸ್ವಾಮಿ ವಿವೇಕಾನಂದರು ವಿಷಯದ ಕುರಿತು ಕಿರಣಕುಮಾರ ವಿವೇಕವಂಶಿ, ಸಂಜೆ ಗುಂಪು ಚರ್ಚೆ ಕುರಿತು ಮನ್ಸೂರಲಿ ಜೆ. ಅವರಿಂದ ಉಪನ್ಯಾಸ ನಡೆಯಲಿದೆ. ಡಿ.7ರಂದು ಹಾವೇರಿ ದರ್ಶನ ಅಂಗವಾಗಿ ಜಿಲ್ಲೆಯ ವಿವಿಧ ಸ್ಥಳಗಳಿಗೆ ಪ್ರವಾಸ ತೆರಳಲಾಗುವುದು. ಡಿ.8ರಂದು ಕನ್ನಡ ಸಾಹಿತ್ಯದಲ್ಲಿ ಗಾಂಧೀ ಕುರಿತು ಸತೀಶ ಕುಲಕರ್ಣಿ, ಶಿಕ್ಷಣದಲ್ಲಿ ಗಾಂೀಜಿಯವರ ತತ್ವಾದರ್ಶಗಳು ಕುರಿತು ಡಾ.ಚೈತ್ರಾ, ಮಧ್ಯಾಹ್ನ ಕಸ್ತೂರ ಬಾ-ಬಾಪು: ದಾಂಪತ್ಯ-ಸಾಂಗತ್ಯ ಕುರಿತು ಡಾ.ಶುಭಾ ಮರವಂತೆ, ಸಂಜೆ ಗಾಂಧೀ ವಿಚಾರಧಾರೆಯ ರಸಪ್ರಶ್ನೆ ಕಾರ್ಯಕ್ರಮ ಡಾ.ಮಹಾಂತೇಶ ಕುತನಿ ಅವರಿಂದ ನಡೆಯಲಿದೆ. ಪ್ರತಿ ದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಡಿ.9ರಂದು ಸಮಾರೋಪ ಸಮಾರಂಭ ನಡೆಯಲಿದೆ ಎಂದು ತಿಳಿಸಿದರು.