Haveri, KLE, GH College, Arambhotsava, 
ಹಾವೇರಿ

ಸತತ ಅಧ್ಯಯನದಿಂದ ಆದರ್ಶ ವ್ಯಕ್ತಿಯಾಗಲು ಸಾಧ್ಯ; ಜಿಎಚ್ ಪಿಯು ಕಾಲೇಜ್ ಪ್ರಾರಂಭೋತ್ಸವದಲ್ಲಿ ಡಾ.ಗುರುಪಾದಯ್ಯ ಸಾಲಿಮಠ ಹೇಳಿಕೆ

ಹಾವೇರಿ: ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಮತ್ತು ಸತತ ಅಧ್ಯಯನದಿಂದ ಸಾಗಿದರೆ ಭವಿಷ್ಯದಲ್ಲಿ ಆದರ್ಶ ವ್ಯಕ್ತಿಗಳಾಗಲು ಸಾಧ್ಯ ಎಂದು ವಾಣಿಜ್ಯ ವಿಭಾಗದ ಅಧ್ಯಾಪಕ, ಸಾಹಿತಿ ಡಾ.ಗುರುಪಾದಯ್ಯ ಸಾಲಿಮಠ ಅಭಿಪ್ರಾಯಪಟ್ಟರು.
ನಗರದ ಕೆಎಲ್‌ಇ ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಪದವಿಪೂರ್ವ ಮಹಾವಿದ್ಯಾಲಯದಲ್ಲಿ 2026-27ನೇ ಶೈಕ್ಷಣಿಕ ಸಾಲಿನ ಪ್ರಥಮ ವರ್ಷದ ಪಿಯು ವಿದ್ಯಾರ್ಥಿಗಳ ಕಾಲೇಜ್ ಪ್ರಾರಂಭೋತ್ಸವ ಹಾಗೂ ಗಣೇಶ ಮತ್ತು ಸರಸ್ವತಿ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ವಿದ್ಯಾರ್ಥಿಗಳ ಮನಸ್ಸು ಸದಾ ಚಂಚಲ ಮತ್ತು ಚಲನಶೀಲವಾದದ್ದು, ಕ್ಷಣ ಕ್ಷಣಕ್ಕೂ ಕಾಲನ ಊಹೆಗೂ ನಿಲುಕದ ಚಿಟ್ಟೆಯಂತೆ ಕೈಗೆ ಎಟುಕದೆ ಹಾರಾಡುತ್ತಿರುತ್ತದೆ. ಆದರೆ, ಚಲನಶೀಲ ಮನಸ್ಸನ್ನು ಸಂಸ್ಕಾರಯುತವಾಗಿ ಅಧ್ಯಯನದತ್ತ ಕೇಂದ್ರೀಕರಿಸಿದರೆ ಉತ್ತಮ-ಉದಾತ್ತ ಚಿಂತನಶೀಲತೆಗಳಿಗೆ ಹಾದಿ ಮಾಡಿ ಕೊಟ್ಟಂತಾಗುತ್ತದೆ. ಗೆಲುವು ಒಮ್ಮಿಂದಲೇ ಒಲಿಯುವುದಿಲ್ಲ. ಅದಕ್ಕಾಗಿ ನಿರಂತರ ಅಧ್ಯಯನದ ಜತೆಗೆ ಸ್ವಅಧ್ಯಯನ ರೂಢಿಸಿಕೊಂಡು ಹೊಸ ಆಲೋಚನೆ ಹೊಸದೊಂದು ಸೃಷ್ಟಿಯ ಆವಿಷ್ಕಾರದೆಡೆಗೆ ಹೆಜ್ಜೆ ಹಾಕಬೇಕಿದೆ. ನೈತಿಕ ಶಿಕ್ಷಣ ಇಂದಿನ ಅಗತ್ಯವಾಗಿದೆ. ಇದದೊಂದಿಗೆ ಬೆರೆತು ಮೌಲ್ಯಯುತ ಬದುಕನ್ನು ಕಟ್ಟಿಕೊಳ್ಳಬೇಕಿದೆ ಎಂದು ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪದವಿಪೂರ್ವ ಪ್ರಾಚಾರ್ಯ ಡಾ.ಜೆ.ಆರ್.ಶಿಂಧೆ ಮಾತನಾಡಿ, ವಿದ್ಯಾರ್ಥಿಗಳು ಸದ್ಭಾವನೆ, ಸದ್ವರ್ತನೆಗಳಿಂದ ಉತ್ತಮ ಆಚಾರ ವಿಚಾರಗಳನ್ನು ಅಳವಡಿಸಿಕೊಳ್ಳಬೇಕು. ನೆರೆಯವರೊಂದಿಗೆ ಉತ್ತಮ ಬಾಂಧವ್ಯದ ಜತೆಗೆ ವ್ಯಕ್ತಿಯಲ್ಲಿರುವ ನೈಜ ಸಾಮರ್ಥ್ಯ ವಿಕಸಿತಗೊಳಿಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಂಡು ಕಲಿಸಿದ ಸಂಸ್ಥೆಗೆ ಕೀರ್ತಿ ತರಬೇಕೆಂದರು.
ಡಾ.ಎಂ.ವಿ.ಸಾತೇನಹಳ್ಳಿ, ಪ್ರೊ.ಆರ್.ಎಸ್.ರಾಯ್ಕರ, ಪ್ರೊ.ಬಸವರಾಜೇಶ್ವರಿ ಜಿ.ಕೆ. ಮಾತನಾಡಿದರು. ಪ್ರೊ.ಎಂ.ಎಸ್.ಬೆಂಡಿಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕುಮಾರಿ ಪದ್ಮ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಪ್ರೊ.ಸಿದ್ದೇಶ್ವರ ಹುಣಸಿಕಟ್ಟಿಮಠ ಸ್ವಾಗತಿಸಿದರು. ಪ್ರೊ.ಅಕ್ಷತಾ ಹಿರೇಮಠ ನಿರೂಪಿಸಿದರು. ಪ್ರೊ.ಅನಿತಾ ಉಗರಗೋಳ ವಂದಿಸಿದರು.
ಪ್ರೊ.ನಾಗರಾಜ ಮುಚ್ಚಟ್ಟಿ, ಡಾ.ಶಿವರಾಜ ಮಂಟೂರ, ಪ್ರೊ.ಆವಿಷ್ಕ ರಶ್ಮಿ ಸವಣೂರ, ಪ್ರೊ.ಜಿಲಾನಿ ದೊಡ್ಮನಿ, ಪ್ರೊ.ಬಸವರಾಜ ಹೊಂಗಲ್, ಪ್ರೊ.ಪ್ರಶಾಂತ ಕೋರಿಶೆಟ್ಟರ, ಪ್ರೊ.ಪ್ರವೀಣ ಚೂರಿ, ಪ್ರೊ.ಶಿವಮೂರ್ತಿ ಹಿರೇಮಠ, ಪ್ರೊ.ಸ್ನೇಹಾ ಹಿರೇಮಠ, ಪ್ರೊ.ಅಕ್ಕಮ್ಮ ಅಮಾತಿ, ಪ್ರೊ.ಸುಮಾ ನಂದಿಕೊಪ್ಪ, ವಿದ್ಯಾರ್ಥಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.