Deputy speaker crying 
ಹಾವೇರಿ

ಅರಣ್ಯ ಇಲಾಖೆ ಸಮಸ್ಯೆ ಪ್ರಸ್ತಾಪ; ಕೆಡಿಪಿ ಸಭೆಯಲ್ಲಿ ಕಣ್ಣೀರಿಟ್ಟ ಉಪ ಸಭಾಪತಿ ರುದ್ರಪ್ಪ ಲಮಾಣಿ

ಹಾವೇರಿ: '1850ರ ಕಾಯ್ದೆಯನ್ನು ಮುಂದಿಟ್ಟುಕೊಂಡು ಸುಪ್ರೀಂಕೋರ್ಟ್ ಆದೇಶವಿದೆ ಎಂದು ಹೇಳಿ, ನನ್ನ ತೋಟ ಸೇರಿ ಹಲವು ಜನರ ಜಾಗವನ್ನು ತೆರವು ಮಾಡಲು ಅರಣ್ಯ ಇಲಾಖೆ ಮುಂದಾಗಿದೆ. ತಮ್ಮ ಅಜ್ಜನ ಕಾಲದಿಂದ ವಾಸವಿರುವ ಜಾಗವನ್ನು ಹೇಗೆ ತೆರವು‌ ಮಾಡುತ್ತಾರೆ. ಈ ವರ್ತನೆಯಿಂದ ಬೇಸರವಾಗಿದೆ' ಎಂದು ವಿಧಾನಸಭೆಯ ಉಪ ಸಭಾಪತಿ ಹಾಗೂ ಹಾವೇರಿ ಶಾಸಕ ರುದ್ರಪ್ಪ ಲಮಾಣಿ ಕೆಡಿಪಿ ಸಭೆಯಲ್ಲಿ ಕಣ್ಣೀರಿಟ್ಟರು.
ನಗರದ ಜಿಲ್ಲಾ‌ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅರಣ್ಯ ಇಲಾಖೆಯ ಡಿಎಫ್ಒ ಅಕ್ಷಯ ಪ್ರಭಾಕರ್ ಅವರನ್ನು ಪ್ರಶ್ನಿಸಿದ ಲಮಾಣಿ, 'ನಮ್ಮ ಸಮಸ್ಯೆಯನ್ನು ಬಗೆಹರಿಸಿ' ಎಂದು ವಿನಂತಿಸಿದರು.
'ಜಿಲ್ಲೆಯಲ್ಲಿ ಜನರು ಬದುಕಲು ಅರಣ್ಯ ಇಲಾಖೆಯವರು ಬಿಡುತ್ತಿಲ್ಲ. ಹಲವು ವರ್ಷಗಳಿಂದ ವಾಸವಿರುವ ಜನರನ್ನು ಒಕ್ಕಲು ಎಬ್ಬಿಸುತ್ತಿದ್ದಾರೆ. ಗುತ್ತಲ ಬಳಿ ಎಸ್‌ಟಿಪಿ ಘಟಕದ ಕಾಂಪೌಂಡ್ ವಿಚಾರವಾಗಿ ಇಬ್ಬರ ಮೇಲೆ ಎಫ್ಐಆರ್ ಆಗಿದೆ.  ಅರಣ್ಯ ಇಲಾಖೆಯವರನ್ನು ಪ್ರಶ್ನಿಸಿದವರ ಮೇಲೆ‌ ಪ್ರಕರಣ ಹಾಕುತ್ತ ಹೋದರೆ, ನಾವು ಎಲ್ಲಿಗೆ ಹೋಗಬೇಕು. ನಾವು ಬದುಕುವುದು ಬೇಡವೇ. ನಾವು ಊರು ಬಿಟ್ಟು ಹೋಗುತ್ತೇವೆ. ನೀವೇ ಇಲ್ಲಿ ಬದುಕಿ' ಎಂದು ಗರಂ ಆದರು.
ನಮ್ಮ ಸಮಸ್ಯೆ ಬಗ್ಗೆ ಸಚಿವರಿಗೆ ಹೇಳಿದ್ದೇನೆ. ಸಮಸ್ಯೆ ಇತ್ಯರ್ಥವಾಗಬೇಕು. ಸುಖಾಸುಮ್ಮನೇ ಜನರ ಮೇಲೆ ಪ್ರಕರಣ ದಾಖಲಿಸಬೇಡಿ ಎಂದು ಹೇಳಿದರು.
ಮಧ್ಯಪ್ರವೇಶಿಸಿದ ಜಿಲ್ಲಾಧಿಕಾರಿ ಡಾ.ವಿಜಯ ಮಹಾಂತೇಶ ದಾನಮ್ಮನವರ, ಜನರ ಕೆಲಸಗಳಿಗೆ ಅಡ್ಡಿಪಡಿಸಬಾರದು. ಸುಖಾಸುಮ್ಮನೇ ಎಲ್ಲರ ವಿರುದ್ಧವೂ ಪ್ರಕರಣ ಹಾಕುತ್ತೀರಿ ಏಕೆ ಎಂದು ಡಿಎಫ್ಒ ಅವರನ್ನು ಪ್ರಶ್ನಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ, ಸಮಸ್ಯೆಯನ್ನು ಬಗೆಹರಿಸಿ ಎಂದು ಡಿಎಫ್ಒ ಗೆ ಸೂಚನೆ ನೀಡಿ ರುದ್ರಪ್ಪ ಲಮಾಣಿ ಅವರನ್ನು ಸಮಾಧಾನಪಡಿಸಿದರು.