Haveri, Kattada Karmikaru, Labour Officer, Mistake,
ಹಾವೇರಿ: ನಗರದ ಹಳೆಯ ಪಿ.ಬಿ. ರಸ್ತೆಯಲ್ಲಿನ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಕಾರ್ಮಿಕರು ಮೂರನೇ ಮಹಡಿಯಿಂದ ಬಿದ್ದು ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದರೂ, ಕಾರ್ಮಿಕ ಇಲಾಖೆ ಹಾಗೂ ಪೊಲೀಸ್ ಇಲಾಖೆ ಈವರೆಗೆ ಪ್ರಕರಣ ದಾಖಲಿಸದೇ ನಿರ್ಲಕ್ಷೃ ತೋರುತ್ತಿವೆ ಎಂದು ನಗರದಲ್ಲಿ ಗುರುವಾರ ಕಟ್ಟಡ ಕಾರ್ಮಿಕರು ಮತ್ತು ಇತರೆ ನಿರ್ಮಾಣ ಹಾಗೂ ಅಸಂಘಟಿತ ಕಾರ್ಮಿಕ ಸಂಘದ ಜಿಲ್ಲಾ ಕಾರ್ಯದರ್ಶಿ ನಂದಾ ಕಳಸದ ಆರೋಪಿಸಿದರು.
ಜುಲೈ 1ರಂದು ನಗರದ ತಾಪಂ ಕಚೇರಿ ಎದುರು ನಿರ್ಮಾಣ ಹಂತದ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ ಬಂಕಾಪುರದ ಮಹಮ್ಮದ್ ಸೊಲ್ಲಾಪುರ ಹಾಗೂ ದೇವಿಹೊಸೂರಿನ ಶಂಕರಪ್ಪ ಬಸಪ್ಪ ಗುಳೇದ ಕಬ್ಬಿಣದ ರಾಡುಗಳು ವಿದ್ಯುತ್ ತಂತಿಗೆ ತಗುಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿದ ಪರಿಣಾಮ ಮೂರನೇ ಮಹಡಿಯಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಮಹಮ್ಮದ್ ಸೊಲ್ಲಾಪುರ ಗಂಭೀರವಾಗಿ ಗಾಯಗೊಂಡಿದ್ದು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಂಕರಪ್ಪನ ಮನೆಯ ಸ್ಥಿತಿ ಚಿಂತಾಜನಕವಾಗಿದೆ ಎಂದರು.
ಕಟ್ಟಡದಲ್ಲಿ ಸುರಕ್ಷತಾ ಕ್ರಮಗಳನ್ನು ಪಾಲಿಸದೇ ಕಾರ್ಮಿಕರಿಂದ ಕೆಲಸ ಮಾಡಿಸಿರುವುದೇ ಅಪಘಾತಕ್ಕೆ ಕಾರಣವಾಗಿದೆ. ಘಟನೆ ನಡೆದು ಎಂಟು ದಿನಗಳಾದರೂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ. ಕಾರ್ಮಿಕ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ. ಪೊಲೀಸರು ಸುಮೋಟೋ ಪ್ರಕರಣ ದಾಖಲಿಸದೇ ನಿರ್ಲಕ್ಷ್ಯ ತೋರಿದ್ದಾರೆ ಎಂದು ದೂರಿದರು.
ಸಾವು ಬದುಕಿನ ನಡುವೆ ಹೋರಾಡುತ್ತಿರುವ ಕಾರ್ಮಿಕರ ನೆರವಿಗೆ ಧಾವಿಸದ ಜಿಲ್ಲಾ ಕಾರ್ಮಿಕ ಅಧಿಕಾರಿ ತರನ್ನುಮ್ ಬೆಂಗಾಲಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು. ಘಟನೆಗೆ ಸಂಬಂಧಿಸಿದಂತೆ ಹೊಣೆಗಾರರ ವಿರುದ್ಧ ತಕ್ಷಣ ಎಫ್‌ಐಆರ್ ದಾಖಲಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ವಿವಿಧ ಕಾರ್ಮಿಕ ಸಂಘಟನೆಗಳ ಪ್ರಮುಖರಾದ ಅಜಯಕುಮಾರ ಹಡಪದ, ಸುಭಾನಿ ನದಾಫ್, ಮೌಲಾಲಿ ಮುಲ್ಲಾನವರ, ಮಲ್ಲಪ್ಪ ನಾಗರೊಳ್ಳಿ, ಪ್ರಕಾಶ ದಾನಪ್ಪನವರ ಇದ್ದರು.