Haveri, Karunada Balaga, State Level, Sammelana,  
ಹಾವೇರಿ

ರಾಜ್ಯಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ 25ರಂದು; ಕರುನಾಡ ಕನ್ನಡ ಸಾಹಿತ್ಯ, ಸಾಂಸ್ಕೃತಿಕ ಕಲಾ ಬಳಗದಿಂದ ಆಯೋಜನೆ

ಹಾವೇರಿ: ಕರುನಾಡ ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕಲಾ ಬಳಗ ರಾಜ್ಯ ಸಮಿತಿ ವತಿಯಿಂದ ನಗರದ ಡಾ.ಬಿ.ಆರ್.ಅಂಬೇಡ್ಕರ್ ಸಭಾಭವನದಲ್ಲಿ ಮೇ 25ರಂದು ಬೆಳಗ್ಗೆ 10.30ಕ್ಕೆ ಎರಡನೇ ರಾಜ್ಯಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ಕರುನಾಡ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿದೆ ಎಂದು ಬಳಗದ ಅಧ್ಯಕ್ಷ ಎಸ್.ಡಿ.ಮುಡೆಣ್ಣವರ ಹೇಳಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮ್ಮೇಳನದ ಸರ್ವಾಧ್ಯಕ್ಷರಾಗಿ ಶಿಕ್ಷಕ, ಸಾಹಿತಿ, ರಂಗ ನಿರ್ದೇಶಕ ಹಾಗೂ ಸಂಘಟನಾಕಾರರಾಗಿ ಉತ್ತಮ ಸೇವೆ ಸಲ್ಲಿಸಿರುವ ಜಿ.ಎಂ.ಓಂಕಾರಣ್ಣನವರ ಅವರನ್ನು ಆಯ್ಕೆ ಮಾಡಲಾಗಿದೆ. ಮೇ 25ರಂದು ಬೆಳಗ್ಗೆ 8 ಗಂಟೆಗೆ ಕನ್ನಡ ಧ್ವಜಾರೋಹಣವನ್ನು ಕೋರಗಲ್ಲ ವಿರುಪಾಕ್ಷಪ್ಪ ಉದ್ಘಾಟಿಸುವರು. ಬೆಳಗ್ಗೆ 9ಕ್ಕೆ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಡಿಎಸ್‌ಎಸ್ ರಾಜ್ಯ ಸಂಚಾಲಕ ಎಸ್.ಫಕ್ಕೀರಪ್ಪ ಚಾಲನೆ ನೀಡಲಿದ್ದು, ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳು, ಕನ್ನಡಾಭಿಮಾನಿಗಳು ಹಾಗೂ ಮಕ್ಕಳು ಭಾಗವಹಿಸಲಿದ್ದಾರೆ ಎಂದರು.
ಬೆಳಗ್ಗೆ 10.30ಕ್ಕೆ ರಾಷ್ಟ್ರಪ್ರಶಸ್ತಿ ಪುರಸ್ಕೃತ ದಿ.ಗಂಗಾಧರ ನಂದಿ ಮಹಾವೇದಿಕೆಯಲ್ಲಿ ಸಾಹಿತ್ಯ ಸಮ್ಮೇಳನವನ್ನು ವಿಧಾನಸಭೆ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಉದ್ಘಾಟಿಸುವರು. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಭುವನೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡಲಿದ್ದಾರೆ. ನಾಡಿನ ವಿವಿಧ ಜಿಲ್ಲೆಗಳ ಸಾಹಿತಿಗಳ ಕೃತಿಗಳ ಪುಸ್ತಕ ಲೋಕಾರ್ಪಣೆ ನಡೆಯಲಿದೆ. ಸಮ್ಮೇಳನಾಧ್ಯಕ್ಷರ ನುಡಿಯೊಂದಿಗೆ ವಿವಿಧ ಸಾಹಿತ್ಯ ಹಾಗೂ ಚಿಂತನಾತ್ಮಕ ಗೋಷ್ಠಿಗಳು ನಡೆಯಲಿವೆ. ಮಧ್ಯಾಹ್ನ 1ಕ್ಕೆ ‘ಕನ್ನಡ ಸಾಹಿತ್ಯಕ್ಕೆ ಹಾವೇರಿ ಜಿಲ್ಲೆಯ ಕೊಡುಗೆಗಳು’ ವಿಷಯದ ವಿಚಾರಗೋಷ್ಠಿಗೆ ಡಾ.ಎಸ್.ಪಿ.ಗೌಡರ ಅಧ್ಯಕ್ಷತೆ ವಹಿಸಲಿದ್ದು, ಡಾ.ಪುಷ್ಪಾವತಿ ಶೆಲವಡಿಮಠ ಉಪನ್ಯಾಸ ನೀಡಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಡಿಎಸ್‌ಎಸ್ ರಾಜ್ಯ ಸಂಚಾಲಕ ಎಸ್.ಫಕ್ಕೀರಪ್ಪ, ಎಸ್.ಎಲ್.ಕಾಡದೇವರಮಠ, ಬಳಗದ ಜಿಲ್ಲಾಧ್ಯಕ್ಷೆ ಚಂಪಾ ಹುಣಸಿಕಟ್ಟಿ, ಉಡಚಪ್ಪ ಮಾಳಗಿ, ಸಂಜಯಗಾಂಧಿ ಸಂಜೀವಣ್ಣನವರ, ನಾಗರಾಜ ಎಚ್., ಎಫ್.ಎಚ್ ಕೊರವರ, ವೈ.ಬಿ ಲಕ್ಷ್ಮಣ, ಮಂಜುಳಾ ಅಕ್ಕಿ, ಲೀಲಾವತಿ ಪಾಟೀಲ, ಕುಮಾರ ತಳವಾರ, ಇತರರಿದ್ದರು.
ಕಾವ್ಯ ವಾಚನ, ಪ್ರಶಸ್ತಿ ಪ್ರದಾನ
ಮಧ್ಯಾಹ್ನ 2.30ಕ್ಕೆ ಕವಿಗೋಷ್ಠಿಯಲ್ಲಿ ಹಿರಿಯ ಸಾಹಿತಿ ಡಾ.ಸತೀಶ ಕುಲಕರ್ಣಿ ಅಧ್ಯಕ್ಷತೆ ವಹಿಸಲಿದ್ದು, ಪ್ರೊ.ಎಚ್.ಎ.ಭಿಕ್ಷಾವರ್ತಿಮಠ ಆಶಯ ನುಡಿ ನೀಡಲಿದ್ದಾರೆ. ಭಿಕ್ಷಾವರ್ತಿಮಠ ಅವರಿಗೆ ಕರುನಾಡ ಶಹರಿ ರತ್ನ ಪ್ರಶಸ್ತಿ ನೀಡಲಾಗುವುದು. ನಂತರ ರಾಜ್ಯದ ವಿವಿಧ ಜಿಲ್ಲೆಗಳ 28 ಕವಿಗಳು ಕವನ ವಾಚನ ಮಾಡಲಿದ್ದಾರೆ. ಸಂಜೆ 4ಕ್ಕೆ ಸಮಾರೋಪ ಸಮಾರಂಭದಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು. 31 ಜಿಲ್ಲೆಗಳ ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಚಂಪಾ ಹುಣಸಿಕಟ್ಟಿ ಹೇಳಿದರು.