Haveri, Karjagi, Khara Hunnime, Bhandi, Utsava,
ಹಾವೇರಿ: ಕಾರಹುಣ್ಣಿಮೆ ವೈಭವ ಎಂದೇ ಪ್ರಸಿದ್ಧಿ ಪಡೆದಿರುವ ತಾಲೂಕಿನ ಕರ್ಜಗಿ ಗ್ರಾಮದ ಶ್ರೀ ಬ್ರಹ್ಮಲಿಂಗೇಶ್ವರ ಕಾರಹುಣ್ಣಿಮೆ ಮಹೋತ್ಸವ ವಿಜೃಂಭಣೆಯಿಂದ ಜರುಗಲಿದೆ. ಜೂ.30ರಂದು ಹೊನ್ನುಗ್ಗಿ, ಜುಲೈ 1ರಂದು ದೊಡ್ಡ ಬಂಡಿಗಳ ಉತ್ಸವ ಹಾಗೂ ಜು.2ರಂದು ಕರಕ್ಕಿ ಬಂಡಿ ಉತ್ಸವ ವಿಜೃಂಭಣೆಯಿಂದ ಜರುಗಲಿದೆ.
ಉತ್ಸವಕ್ಕಾಗಿ ಕರ್ಜಗಿ ಗ್ರಾಮದಾದ್ಯಂತ ಹಬ್ಬದ ವಾತಾವರಣ ಮನೆ ಮಾಡಿದೆ. ವರದಾ ನದಿ ದಡದಲ್ಲಿರುವ ಕರ್ಜಗಿ ಗ್ರಾಮದಲ್ಲಿ ಪ್ರತಿ ವರ್ಷ ಕಾರ ಹುಣ್ಣಿಮೆ ಅಂಗವಾಗಿ ಆಚರಿಸುವ ಶ್ರೀ ಬ್ರಹ್ಮಲಿಂಗೇಶ್ವರ ಜಾತ್ರೆ ಕಾರಹುಣ್ಣಿಮೆ ವೈಭವ ನೋಡುವುದೇ ಕಣ್ಣಿಗೆ ಹಬ್ಬ. ಈ ಹಬ್ಬದಲ್ಲಿ ಗ್ರಾಮದ ಎಲ್ಲ ಜಾತಿ, ಜನಾಂಗದವರೂ ಭಾವೈಕ್ಯತೆಯಿಂದ ಭಾಗವಹಿಸುವುದು ಹಬ್ಬದ ಮತ್ತೊಂದು ವಿಶೇಷವಾಗಿದೆ. ಪ್ರತಿ ವರ್ಷ ಕಾರಹುಣ್ಣಿಮೆಯ ನಂತರ ಬರುವ ಮಂಗಳವಾರದಿಂದ ಹೊನ್ನುಗ್ಗಿಯೊಂದಿಗೆ ಕಾರಹುಣ್ಣಿಮೆ ವೈಭವ ಪ್ರಾರಂಭವಾಗುತ್ತದೆ. ಈ ಸಮಯದಲ್ಲಿ ಹೊಸ ಮಳೆ ಪ್ರಾರಂಭವಾಗಿರುವುದರಿಂದ ಬಿತ್ತನೆಗೆ ಸಕಾಲವಾಗಿರುತ್ತದೆ. ಮಂಗಳವಾರ ಗ್ರಾಮದ ರೈತಾಪಿ ಜನ ನೇಗಿಲು ಮತ್ತು ವ್ಯವಸಾಯಕ್ಕೆ ಬಳಸುವ ಎಲ್ಲ ಸಾಮಗ್ರಿಗಳನ್ನು ಶೃಂಗರಿಸಿ ಪೂಜೆ ಮಾಡುತ್ತಾರೆ. ಮನೆಯಲ್ಲಿ ಕರಿ ಕಂಬಳಿಯ ಗದ್ದುಗೆ ಮಾಡಿ ಎತ್ತುಗಳನ್ನು ಪೂರ್ವಕ್ಕೆ ಮುಖ ಮಾಡಿ ನಿಲ್ಲಿಸಿ ಅದರ ಪಾದಕ್ಕೆ ಈ ವರ್ಷ ಮಳೆ-ಬೆಳೆ ಬಂಗಾರದಂತೆ ಬರಲಿ ಎಂದು ಹೊನ್ನು (ಬಂಗಾರ) ಮುಟ್ಟಿಸುತ್ತಾರೆ. ಇದಾದ ನಂತರ ಎತ್ತಿಗೆ ಹುಗ್ಗಿಯ ಪ್ರಸಾದ ತಿನ್ನಿಸಿ ಹೊನ್ನುಗ್ಗಿ ಆಚರಿಸಲಾಗುತ್ತದೆ. ಉತ್ಸವ ನೋಡಲು ಅಕ್ಕಪಕ್ಕದ ಸಾವಿರಾರು ಜನ ಭಾಗವಹಿಸುವುದು ಇಲ್ಲಿನ ವಿಶೇಷ.
ಎರಡನೇ ದಿನ ಜು.1ರಂದು ಬಂಡಿ ಓಟಕ್ಕಾಗಿ ರೈತರು ಬೆಳಗ್ಗೆಯಿಂದಲೇ ಎತ್ತು ಹಾಗೂ ಬಂಡಿಗಳಿಗೆ ಶೃಂಗರಿಸಿ ಸಿದ್ಧತೆ ಮಾಡಿಕೊಂಡಿರುತ್ತಾರೆ. ಗ್ರಾಮದ ಆರಾಧ್ಯ ಶ್ರೀ ಬ್ರಹ್ಮಲಿಂಗೇಶ್ವರ ದೇವರಿಗೆ ಗ್ರಾಮಸ್ಥರು ವಿಶೇಷ ಪೂಜೆ ಸಲ್ಲಿಸುತ್ತಾರೆ. ಮಧ್ಯಾಹ್ನ 2 ಗಂಟೆಗೆ ಆರಂಭವಾದ ಬಂಡಿ ಓಟ ಸಂಜೆ 6ರವರೆಗೆ ನಡೆಯುತ್ತದೆ. ವಿಶಿಷ್ಟ ವೇಷಗಳ ಮೂಲಕ ಗಮನ ಸೆಳೆಯುವ ವೀರಗಾರರು, ಬಂಡಿಗಳನ್ನೇರಿ ಬಂಡಿ ಓಟ ನಡೆಸುತ್ತಾರೆ.
ಮೂರನೇ ದಿನ ಜು.2ರಂದು ಕರಕ್ಕಿ ಬಂಡಿ ಹಬ್ಬ ನಡೆಯುತ್ತದೆ. ಈ ಬಂಡಿಗೆ ಬುಧವಾರ ಹುಟ್ಟಿದ ಕರುವನ್ನು ಹೂಡುವುದು ಇಲ್ಲಿನ ವಿಶೇಷ. ಈ ಕಾರ್ಯಕ್ರಮ ಅಂದು ಬೆಳಗ್ಗೆ 10ಗಂಟೆಗೆ ಪ್ರಾರಂಭವಾಗಿ ಸಂಜೆ 6 ಗಂಟೆವರೆಗೂ ನಡೆಯುತ್ತದೆ. ಗ್ರಾಮದಲ್ಲಿ ನಡೆಯುವ ಕಾರ ಹುಣ್ಣಿಮೆ ವೈಶಿಷ್ಟ್ಯ ಪೂರ್ಣವಾಗಿ ಆಚರಿಸಲಾಗುತ್ತದೆ. ಇದನ್ನು ನೋಡಲು ಹಾವೇರಿ ಜಿಲ್ಲೆ ಸೇರಿದಂತೆ ಅಕ್ಕಪಕ್ಕದ ಸಾವಿರಾರು ಜನ ಆಗಮಿಸುತ್ತಾರೆ. ಇದಕ್ಕಾಗಿ ಪೊಲೀಸ್ ಇಲಾಖೆ ಅಗತ್ಯ ಭದ್ರತೆ ಕೈಗೊಂಡಿದೆ.
ವೀರಗಾರರಿಂದ ಆಕರ್ಷಕ ಬಂಡಿ ಓಟ
ಗ್ರಾಮದ ವೀರಶೈವ ಸಮುದಾಯಕ್ಕೆ ಸೇರಿದ ಕಾಮಣ್ಣನವರ ಹಾಗೂ ಹೊಸಮನಿ ಕುಟುಂಬದಲ್ಲಿನ ತಲಾ ಏಳು ಜನ ಪುರುಷರು ಬಂಡಿ ಏರುತ್ತಾರೆ. ಹೀಗೆ ಬಂಡಿ ಏರುವ ಪುರುಷರು ವಿವಾಹಿತರಾಗಿರಬೇಕು. ಅಂಗವಿಕಲ ಆಗಿರಬಾರದು, ವಿಧುರರು ಇರಬಾರದು ಎಂಬ ನಿಯಮ ಇದೆ. ಹೀಗೆ ಈ ಎರಡು ಕುಟುಂಬದ 14 ಸದಸ್ಯರು ಉಪವಾಸ ವ್ರತಾಚರಣೆ ಮಾಡಿದ ವೀರಗಾರರು ಸಂಪ್ರದಾಯದ ಉಡುಗೆ ತೊಟ್ಟು, ಮೈಗೆ ಗಂಧ ಲೇಪಿಸಿಕೊಂಡು, ಕೇದಿಗೆ ಬಾಸಿಂಗ ಕಟ್ಟಿಕೊಂಡು ಗ್ರಾಮದ ಬ್ರಹ್ಮ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಬಂಡಿ ಓಟದಲ್ಲಿ ಪಾಲ್ಗೊಳ್ಳುತ್ತಾರೆ.
ಕರ್ಜಗಿ ಗ್ರಾಮದಲ್ಲಿ ಈ ವರ್ಷವೂ ಜೂ.30 ಹಾಗೂ ಜು.1ರಂದು ನಡೆಯುವ ಕಾರ ಹುಣ್ಣಿಮೆ ಉತ್ಸವದಲ್ಲಿ ಕೊಬ್ಬರಿ ಹೋರಿಯನ್ನು ನಿಷೇಧಿಸಲಾಗಿದೆ. ಹಾಗಾಗಿ, ಗ್ರಾಮಸ್ಥರು ಹಾಗೂ ಅಕ್ಕಪಕ್ಕದ ಗ್ರಾಮಸ್ಥರು ಕೊಬ್ಬರಿ ಹೋರಿಗಳನ್ನು ಉತ್ಸವಕ್ಕೆ ತರಬಾರದು ಎಂದು ಉತ್ಸವ ಸಮಿತಿ ವಿಶೇಷ ಸೂಚನೆ ನೀಡಿದೆ.
"
ನೂರಾರು ವರ್ಷಗಳಿಂದ ಕರ್ಜಗಿ ಗ್ರಾಮದ ಐತಿಹಾಸಿಕ ಕಾರಹುಣ್ಣಿಮೆ ಉತ್ಸವ ನಡೆದುಕೊಂಡು ಬಂದಿದೆ. ಈ ಹಬ್ಬ ನಾಡಿನಲ್ಲಿಯೇ ಪ್ರಸಿದ್ಧಿ ಪಡೆದಿದೆ. ಈಗಾಗಲೇ ಗ್ರಾಮದ ಶ್ರೀ ಬ್ರಹ್ಮಲಿಂಗೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಹಬ್ಬಕ್ಕೆ ಚಾಲನೆ ನೀಡಲಾಗುದ್ದು, ನಾಳೆ, ನಾಡಿದ್ದು ಬಂಡಿ ಉತ್ಸವ ವಿಶೇಷವಾಗಿ ನಡೆಯಲಿದೆ.
— ನಿಂಗಪ್ಪ ಮಡಿವಾಳರ, ಕರ್ಜಗಿ ಗ್ರಾಮಸ್ಥ