karave, protest, against, 
ಹಾವೇರಿ

ರಾಜ್ಯಪಾಲರಿಂದ ಕನ್ನಡ ವಿರೋಧಿ ಧೋರಣೆ ಆರೋಪ; ಹಾವೇರಿಯಲ್ಲಿ ಕರವೇ ಪ್ರತಿಭಟನೆ

ಹಾವೇರಿ: ರಾಜ್ಯ ಸರ್ಕಾರ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತೃತೀಯ ಭಾಷೆಯ ಗ್ರೇಡಿಂಗ್ ವ್ಯವಸ್ಥೆ ಜಾರಿಗೆ ತಂದ ನಿರ್ಧಾರವನ್ನು ಮರುಪರಿಶೀಲಿಸುವಂತೆ ರಾಜ್ಯಪಾಲರು ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದಿದ್ದಾರೆ. ಈ ಪತ್ರದ ಹಿಂದೆ ಕರ್ನಾಟಕದಲ್ಲಿ ಹಿಂದಿ ಹೇರಿಕೆಯನ್ನು ಶಾಶ್ವತವಾಗಿ ನಡೆಸುವ ಹುನ್ನಾರವಿದೆ. ಇದರಲ್ಲಿ ಅವರ ಕನ್ನಡ ವಿರೋಧಿ ಧೋರಣೆ ಕಂಡು ಬರುತ್ತಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಆರೋಪಿಸಿದೆ.
ಇಲ್ಲಿನ ಡಿಸಿ ಕಚೇರಿ ಎದುರು ಮಂಗಳವಾರ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಎಡಿಸಿ ಡಾ.ನಾಗರಾಜ ಎಲ್. ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ತಮ್ಮ ಕಾರ್ಯವ್ಯಾಪ್ತಿ ಮೀರಿ ಕನ್ನಡಿಗರ ಆಶೋತ್ತರಗಳಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಹೀಗಾಗಿ, ಅವರು ಕರ್ನಾಟಕದಲ್ಲಿ ರಾಜ್ಯಪಾಲರಾಗಿ ಉಳಿಯುವ ನೈತಿಕತೆಯನ್ನು ಕಳೆದುಕೊಂಡಿದ್ದಾರೆ. ಕೇಂದ್ರ ಸರ್ಕಾರ ಅವರನ್ನು ವಾಪಸ್ ಕರೆಸಿಕೊಳ್ಳಬೇಕು ಎಂದು ಆಗ್ರಹಿಸಿದರು.
ಕರ್ನಾಟಕದ ಜನತೆ ರಾಜ್ಯ ಸರ್ಕಾರ ಆಯ್ಕೆ ಮಾಡಿದ್ದಾರೆ. ನಾಡಿನ ಜನರ ಬೇಕು, ಬೇಡಗಳನ್ನು ರಾಜ್ಯ ಸರ್ಕಾರ ತೀರ್ಮಾನಿಸುತ್ತದೆ. ಹೀಗಿರುವಾಗ ಸರ್ಕಾರದ ಮುಖ್ಯಸ್ಥರಾಗಿ ಸರ್ಕಾರದ ನಾಡಪರ ಕಾಳಜಿಯ ನಿರ್ಧಾರಗಳನ್ನು ಬೆಂಬಲಿಸುವುದು ಅವರ ಕರ್ತವ್ಯವಾಗಿರುತ್ತದೆ. ಆದರೆ ಅವರು ಹಿಂದಿ ಮಾಫಿಯಾ ಪರವಾಗಿ ಕಾರ್ಯ ನಿರ್ವಹಿಸುತ್ತಿರುವಂತೆ ತೋರುತ್ತದೆ. ಹೀಗಾಗಿ ಅವರನ್ನು ಕೇಂದ್ರ ಸರ್ಕಾರ ಕೂಡಲೇ ವಜಾಗೊಳಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಕರವೇ ಜಿಲ್ಲಾಧ್ಯಕ್ಷ ಗಿರೀಶ ಬಾರ್ಕಿ, ರಾಜ್ಯ ಕಾರ್ಯದರ್ಶಿ ಕರಬಸಯ್ಯ ಬಸರಿಹಳ್ಳಿಮಠ, ತಾಲೂಕು ಅಧ್ಯಕ್ಷ ಹಾಲೇಶ ಹಾಲಣ್ಣನವರ, ಸತೀಶಗೌಡ ಮುದಿಗೌಡ್ರ, ನಂದೀಶ ಗೊಡ್ಡೆಮ್ಮಿ, ನಾಗರಾಜ ಪೂಜಾರ, ರಮೇಶ ಅರಗೊಳ, ಮಾರುತಿ ಪೂಜಾರ, ಹಸನಸಾಬ ಹತ್ತಿಮತ್ತೂರ, ಕೊಟ್ರೇಶ ಗುತ್ತೂರ, ಚನ್ನಪ್ಪ ಹೊನ್ನಮ್ಮನವರ, ಶಿವಾನಂದ ಪೂಜಾರ, ರಾಮಣ್ಣ ಅಗಸರ, ಸತ್ಯವತಿ ಕಡೇರ, ಈರಮ್ಮ ಕಾಡಸಾಲಿ, ಗೌಸಪಾಕ್ ಬಾಲೆಬಾಯಿ, ಫಕ್ರುದ್ದೀನ್ ಅಂಗಡಿಕಾರ, ಕರಬಸಪ್ಪ ಕುರಬಗೇರಿ, ಕುಮಾರ ಕುಪ್ಪೆಲೂರ, ಯಲ್ಲಪ್ಪ ಪೊಟೇರ, ಇತರರಿದ್ದರು.