Haveri, Karave, Protest, Agains, Govt, Bidadi Township, 
ಹಾವೇರಿ

ಬಿಡದಿ ಟೌನ್‌ಶಿಪ್ ಯೋಜನೆಗೆ ಕರವೇ ವಿರೋಧ; ಹಾವೇರಿಯಲ್ಲಿ ಪ್ರತಿಭಟನಾ ರ‌್ಯಾಲಿ, ಸರ್ಕಾರದ ವಿರುದ್ಧ ಆಕ್ರೋಶ

ಹಾವೇರಿ: ಬಿಡದಿ ರೈತರ ಹೋರಾಟವನ್ನು ಬೆಂಬಲಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣಕುಮಾರ ಶೆಟ್ಟಿ ಬಣ)ದ ಕಾರ್ಯಕರ್ತರು ನಗರದ ಮುರಘರಾಜೇಂದ್ರ ಮಠದಿಂದ ಶನಿವಾರ ಪ್ರತಿಭಟನೆ ನಡೆಸಿದರು. ಕಾಗಿನೇಲೆ ವೃತ್ತದವರೆಗೆ ತೆರಳಿ ಕೆಲಕಾಲ ರಸ್ತೆ ಸಂಚಾರ ಬಂದ್ ಮಾಡಿ ರಾಜ್ಯ ಸರ್ಕಾರದ ವಿರುದ್ದ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ವೇದಿಕೆಯ ಜಿಲ್ಲಾಧ್ಯಕ್ಷ ಮಂಜುನಾಥ ಓಲೇಕಾರ ಮಾತನಾಡಿ, ರಾಜ್ಯ ಸರ್ಕಾರ ಜೂನ್ 13ರಂದು ರಾಮನಗರ ಜಿಲ್ಲೆಯ ಬಿಡದಿ ಸಮೀಪದ ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನಶಿಪ್ ಯೋಜನೆಗಾಗಿ 516 ಎಕರೆ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಅಂತಿಮ ಅಧಿಸೂಚನೆ ಹೊರಡಿಸಿರುವುದನ್ನು ನಮ್ಮ ಸಂಘಟನೆ ಖಂಡಿಸುತ್ತದೆ ಎಂದರು.
ನೂರಾರು ವರ್ಷಗಳಿಂದ ಹಸಿರಿನಿಂದ ಕೂಡಿರುವ, ಸಮೃದ್ಧ ಕೃಷಿ ಭೂಮಿಯಾಗಿರುವ ಬಿಡದಿ ಸುತ್ತಮುತ್ತಲಿನ ಊರುಗಳನ್ನು ಕಾಂಕ್ರೀಟ್ ಕಟ್ಟಡಗಳಿಂದ ಕೂಡಿದ ಟೌನ್‌ಶಿಪ್ ಮಾಡಲು ಹೊರಟಿರುವ ರಾಜ್ಯ ಸರ್ಕಾರದ ನಿಲುವು ಸರಿಯಲ್ಲ. ಭೂಸ್ವಾಧೀನ ಅಧಿಸೂಚನೆ ಹೊರಬರುತ್ತಿದ್ದಂತೆ ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಸ್ವಾಧೀನಕ್ಕೆ ಗುರುತಿಸಲಾದ ಭೂಮಿ ಅತ್ಯಂತ ಫಲವತ್ತಾಗಿದ್ದು ಕೃಷಿಗೆ ಅವಶ್ಯಕವಾಗಿದೆ ಎಂದರು.
ಈ ಭೂಮಿಯಲ್ಲಿ ರೈತರು ರೇಷ್ಮೆ, ತೆಂಗು, ಅಡಕೆ, ಸೇರಿ ಹತ್ತಾರು ಬೆಳೆಗಳನ್ನು ಬೆಳೆದು ಜೀವನ ನಡೆಸುತ್ತಿದ್ದಾರೆ. ಈ ಯೋಜನೆ ಎಚ್.ಡಿ.ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ರೂಪಿಸಿದ್ದರು. ಆಗ ರೈತರು ವಿರೋಧ ವ್ಯಕ್ತಪಡಿಸಿದಾಗ ಯೋಜನೆಯನ್ನು ಕೈಬಿಡಲಾಗಿತ್ತು. ಆದರೆ, ಈಗಿನ ಸರ್ಕಾರ ರೈತರ ವಿರೋಧದ ನಡುವೆಯೂ ಜಾರಿಗೆ ತರುತ್ತಿದೆ. ಇದರ ಹಿಂದಿನ ಉದ್ದೇಶ ಏನು ಎಂಬುದು ಅರ್ಥವಾಗುತ್ತಿಲ್ಲ. ಇದರಿಂದ ರೈತರ ಜೀವನ ಹಾಳಾಗಲಿದೆ. ಸರ್ಕಾರ ಈ ಯೋಜನೆಯನ್ನು ಕೈಬಿಟ್ಟು ರೈತರ ನೆರವಿಗೆ ಬರಬೇಕು. ಇಲ್ಲವಾದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯಾಧ್ಯಕ್ಷರಾದ ಪುಟ್ಟಪ್ಪ ಹಿತ್ತಲಮನಿ, ನೂರಹ್ಮದ್ ಲಕ್ಷ್ಮೇಶ್ವರ, ಮಾರುತಿ ಹಾಲಗಿ, ಜಿಲ್ಲಾ ಉಪಾಧ್ಯಕ್ಷರಾದ ಮಾದೇವಪ್ಪ ಹೆಡಿಗೊಂಡ, ಖಲಂದರ್ ಎಲೆದಹಳ್ಳಿ, ವಿಜಯಕುಮಾರ ಎನ್.ಎಂ., ಫಕ್ಕೀರಪ್ಪ ಕಟ್ಟಿಮನಿ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಅನಸೂಯಾ ಸಿದ್ದಪ್ಪಳವರ, ಪ್ರಧಾನ ಕಾರ್ಯದರ್ಶಿ ಕುಮಾರ ಸುಳ್ಳನವರ ಜಿಲ್ಲಾ ವಕ್ತಾರ ಮೌಲಾಸಾಬ ನಧಾಫ್, ಮಾಲತೇಶ ಜಿ.ಕೆ., ಮೌಲಾಲಿ ಯರೆಮನಿ, ರಾಜಕುಮಾರ ದೊಡ್ಡಮನಿ, ಭರಮಪ್ಪ ಡಮ್ಮಳ್ಳಿ, ರಮೇಶ ದಾಸಪ್ಪನವರ, ಮಾಂತೇಶ ಶಿಗ್ಗಟ್ಟಿ, ಸುರೇಶ ಲಚ್ಚಮಣ್ಣನವರ, ಪವನ ವಡ್ಡರ, ಅಶೋಕ ಗದಗ, ಸುಧಾ ಪಾಟೀಲ, ತನುಶ್ರೀ ಧಾರವಾಡ, ಅನ್ನಪೂರ್ಣ ವಡ್ಡಟ್ಟಿ, ರತ್ನವ್ವ ಸಂಗಪ್ಪನವರ, ಮತ್ತಿತರರು ಇದ್ದರು.