Haveri, JJM, Rural Water Dept, Problems, Vijayavani, Series,
ಹಾವೇರಿ: ಗ್ರಾಮೀಣ ಭಾಗದಲ್ಲಿ ಮನೆ ಮನೆಗೆ ಶುದ್ಧ ಕುಡಿಯುವ ನೀರು ಪೂರೈಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ರಾಜ್ಯ ಸರ್ಕಾರದ ಸಹಯೋಗದಲ್ಲಿ ಸಾವಿರಾರು ಕೋಟಿ ರೂ. ವೆಚ್ಚದಲ್ಲಿ ಆರಂಭಿಸಿರುವ ಜಲಜೀವನ ಮಿಷನ್ (ಜೆಜೆಎಂ) ಯೋಜನೆ ಜಿಲ್ಲೆಯ ಹಲವೆಡೆ ಅರ್ಧಂಬರ್ದ ಜಾರಿಯಾಗಿದ್ದು, ಇನ್ನೂ ಕೆಲವೆಡೆ ನೀರೇ ಬಾರದೇ ನಲ್ಲಿಗಳ ಗಂಟಲು ಒಣಗಿವೆ.
ಪ್ರತಿ ತಾಲೂಕಿನಲ್ಲಿ ನೂರಾರು ಕೋಟಿ ರೂ. ಖರ್ಚು ಮಾಡಿ ನಾಲ್ಕೈದು ವರ್ಷಗಳಿಂದ ಕಾಮಗಾರಿ ನಡೆಸುತ್ತಿದ್ದರೂ, ಹಲವು ಗ್ರಾಮಗಳಲ್ಲಿ ಈವರೆಗೆ ಕುಡಿಯಲು ನೀರು ಸಿಗುತ್ತಿಲ್ಲ. ಹಲವೆಡೆ ಹೆಸರಿಗೆ ಮಾತ್ರ ನಳ ಅಳವಡಿಸಲಾಗಿದ್ದು, ಕಣ್ಣಿಗೆ ಕುಕ್ಕುವಂತೆ ಜಲಜೀವನ ಮಿಷನ್ ಎಂಬ ಘೋಷಣಾ ಬರಹ ಪ್ರದರ್ಶಿಸಲಾಗುತ್ತಿದೆ. ಆದರೆ, ಅವುಗಳಲ್ಲಿ ಹನಿ ನೀರೂ ಬರುವುದಿಲ್ಲ ಎಂಬುದು ವಿಪರ್ಯಾಸ.
ಹಾವೇರಿ ತಾಲೂಕಿನ 95 ಗ್ರಾಮಗಳಲ್ಲಿ ಅಂದಾಜು 2 ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿದೆ. ತಾಲೂಕಿನ 95 ಗ್ರಾಮಗಳ 46,537 ಮನೆಗಳಿಗೆ 105.6 ಕೋಟಿ ರೂ. ವೆಚ್ಚದಲ್ಲಿ 2021- 22ರಲ್ಲಿ ಜೆಜೆಎಂ ಕಾಮಗಾರಿ ಅಡಿಯಲ್ಲಿ ನಳ ಸಂಪರ್ಕ ಮಾಡುವ ಕಾಮಗಾರಿ ಆರಂಭಿಸಲಾಯಿತು. 95ರಲ್ಲಿ 92 ಗ್ರಾಮಗಳಲ್ಲಿ ಜೆಜೆಎಂ ಕಾಮಗಾರಿ ಪೂರ್ಣಗೊಂಡಿದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹೇಳುತ್ತದೆ. ಆದರೆ, ಎಲ್ಲ ಕಡೆ ನಳದಲ್ಲಿ ನೀರು ಬರುತ್ತಿಲ್ಲ. ಹಲವೆಡೆ ಗಡಸು ಮಿಶ್ರಿತ ಬೋರ್‌ವೆಲ್ ನೀರನ್ನೇ ಪೂರೈಸಲಾಗುತ್ತಿದೆ. ಹೀಗಾಗಿ, ಜನ ಮತ್ತೆ 5 ರೂ. ಕೊಟ್ಟು ಶುದ್ಧ ಕುಡಿಯುವ ನೀರಿನ ಘಟಕದಿಂದ ನೀರು ತರುವ ಅನಿವಾರ್ಯತೆ ಇದೆ.
ಕೆಲ ಗ್ರಾಮಗಳಲ್ಲಿ ಜೆಜೆಎಂ ಕಾಮಗಾರಿ ಕಳಪೆಯಾಗಿದ್ದು, ನೀರು ಬರುವ ಮುನ್ನವೇ ಪೈಪ್‌ಗಳು ಒಡೆದು ಹೋಗಿವೆ. ಒಂದು, ಎರಡು ಅಡಿ ಮೇಲ್ಮಟ್ಟದಲ್ಲೇ ಪೈಪ್‌ಲೈನ್ ಅಳವಡಿಸಿದ ಪರಿಣಾಮ ಗ್ರಾಮ ಪಂಚಾಯಿತಿ ಸಿಬ್ಬಂದಿ ಚರಂಡಿ ಕಾಮಗಾರಿ ಮಾಡುವ ವೇಳೆ, ಬಿಎಸ್‌ಎನ್‌ಎಲ್, ಇತರ ಕಾಮಗಾರಿ ವೇಳೆ ಪೈಪ್ ಒಡೆದು ಹಾಳಾಗುತ್ತಿವೆ.
ತಡಸ ಬಹುಗ್ರಾಮ ಕುಡಿಯುವ ನೀರು ಪೂರೈಕೆ (ಎಂವಿಎಸ್) ಯೋಜನೆ ಮುಕ್ತಾಯ ಹಂತದಲ್ಲಿದ್ದು, ಇದು ಪೂರ್ಣವಾದರೆ ತಾಲೂಕನ 37 ಹಳ್ಳಿಗಳಿಗೆ 36 ಎಂಎಲ್‌ಡಿ ನೀರು ಪೂರೈಕೆ ಮಾಡಬಹುದಾಗಿದೆ ಎಂದು ಎಇಇ ಪ್ರವೀಣ ಬಿರಾದಾರ ತಿಳಿಸಿದ್ದಾರೆ .
ಜಿಲ್ಲೆಗೆ 775 ಕೋಟಿ ರೂ. ಖರ್ಚು !
ಜಿಲ್ಲೆಯ ಎಂಟು ತಾಲೂಕುಗಳ 726 ಗ್ರಾಮಗಳಲ್ಲಿ ಜೆಜೆಎಂ ಕಾಮಗಾರಿಗಾಗಿ ಭರ್ಜರಿ 775 ಕೋಟಿ ರೂ. ಖರ್ಚು ಮಾಡಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ತಲಾ ಶೇ.50ರಷ್ಟು ಅನುದಾನ ನೀಡುವ ಮೂಲಕ ಗ್ರಾಮೀಣ ಭಾಗದಲ್ಲಿ ಮನೆ ಮನೆಗೆ ಗಂಗೆ ಹರಿಸುವ ಮಹತ್ವದ ಯೋಜನೆ ಇದಾಗಿದೆ. 2021-22ರಲ್ಲಿ ಆರಂಭವಾದ ಕಾಮಗಾರಿ ಒಟ್ಟು ಮೂರು ಹಂತದಲ್ಲಿ ನಡೆದಿದೆ. ಈವರೆಗೆ 726 ಗ್ರಾಮಗಳಲ್ಲಿ 706 ಗ್ರಾಮಗಳಲ್ಲಿ ಕಾಮಗಾರಿ ಪೂರ್ಣಗೊಂಡಿದ್ದು, ಕೇವಲ 20 ಗ್ರಾಮಗಳಲ್ಲಿ ಮಾತ್ರ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಸ್ವತಃ ಅಧಿಕಾರಿಗಳೇ ಹೇಳುತ್ತಾರೆ. ಒಟ್ಟು 423 ಮೇಲ್ಮಟ್ಟದ ಜಲಾಗಾರಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದ್ದು 414 ನೀರಿನ ಟ್ಯಾಂಕ್‌ಗಳನ್ನು ನಿರ್ಮಿಸಲಾಗಿದೆ. ಜೆಜೆಎಂಗಾಗಿ 17 ಬೋರ್‌ವೆಲ್‌ಗಳನ್ನು ಕೊರೆಸಲಾಗಿದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತಯ ನೈರ್ಮಲ್ಯ ಇಲಾಖೆ ತಿಳಿಸಿದೆ.
3 ಗ್ರಾಮಗಳಲ್ಲಿ ಕಾಮಗಾರಿ ಬಾಕಿ
ಅಧಿಕಾರಿಗಳ ಪ್ರಕಾರ ಹಾವೇರಿ ತಾಲೂಕಿನ 95 ಗ್ರಾಮಗಳ ಪೈಕಿ 92 ಗ್ರಾಮಗಳಲ್ಲಿ ಜೆಜೆಎಂ ಕಾಮಗಾರಿ ಪೂರ್ಣಗೊಂಡಿದೆ. ಕರ್ಜಗಿ, ದೇವಿಹೊಸೂರ, ಯಲಗಚ್ಚ ಗಾಮಗಳಲ್ಲಿ ಮಾತ್ರ ಕಾಮಗಾರಿ ಬಾಕಿ ಇದೆ. ಕರ್ಜಗಿ ಗ್ರಾಮದಲ್ಲಿ ಹೆಚ್ಚುವರಿ ಕೆಲಸ ಕಂಡುಬಂದ ಕಾರಣ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಬೆಂಗಳೂರು ಕಚೇರಿಯ ಅನುಮತಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ದೇವಿಹೊಸೂರ, ಯಲಗಚ್ಚ ಗ್ರಾಮದ ಜೆಜೆಎಂ ಹೆಚ್ಚುವರಿ ಕಾಮಗಾರಿಗೆ ಜಿಪಂ ಮಟ್ಟದಲ್ಲಿ ಅನುಮತಿ ಸಿಕ್ಕಿದ್ದು, ಕೆಲಸ ಆರಂಭಿಸಲಾಗಿದೆ. ಕೆಲವೆಡೆ ಮನೆಗಳ ಸಂಖ್ಯೆ ಹೆಚ್ಚಾದ್ದರಿಂದ ಹೆಚ್ಚುವರಿ ಕೆಲಸ ಸೇರ್ಪಡೆ ಮಾಡಲಾಗಿದೆ ಎನ್ನುತ್ತಾರೆ ಅಧಿಕಾರಿಗಳು.
ವಿಡಬ್ಲೂೃಸಿ ಕಮಿಟಿ ನಿರ್ಲಕ್ಷೃ ?
ಜೆಜೆಎಂ ಕಾಮಗಾರಿ ಪೂರ್ಣಗೊಂಡ ಬಳಿಕ ಸ್ಥಳೀಯವಾಗಿ ನಿರ್ಮಿಸಿದ ವಿಲೇಜ್ ವಾಟರ್ ಆ್ಯಂಡ್ ಸ್ಯಾನಿಟೈಸೇಶನ್ ಕಮಿಟಿ (ವಿಡಬ್ಲೂೃಸಿ) ಪರಿಶೀಲಿಸಿ ಅನುಮತಿ ನೀಡುತ್ತದೆ. ಎಲ್ಲ ಮನೆಗಳಿಗೆ ಭೇಟಿ ನೀಡಿ, ವಿಡಿಯೋ ಸಮೇತ ನೀರು ಬಂದಿದೆಯಾ ಇಲ್ಲವಾ ಎಂದು ಖುದ್ದು ಪರಿಶೀಲಿಸಿ ಪ್ರಮಾಣ ಪತ್ರ ನೀಡಿದ ಬಳಿಕವೇ ಕಾಮಗಾರಿ ಪೂರ್ಣಗೊಂಡಿದೆ ಎಂದು ದಾಖಲಾಗುತ್ತದೆ. ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷರೇ ವಿಡಬ್ಲೂೃಸಿ ಸಮಿತಿ ಅಧ್ಯಕ್ಷರಾಗಿರುತ್ತಾರೆ. ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ ಅಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು, ಸೇರಿದಂತೆ ಇತರರು ಈ ಕಮಿಟಿಯಲ್ಲಿರುತ್ತಾರೆ. ಇವರು ಸಮಗ್ರ ತಪಾಸಣೆ ಮಾಡಿದ ನಂತರ ಹರ್‌ಘರ್ ಜಕ್ ಘೋಷಣಾ ಪ್ರಮಾಣ ಪತ್ರ ಕೊಟ್ಟ ನಂತರವೇ ಕಾಮಗಾರಿ ಪೂರ್ಣವಾಗಿದೆ ಎಂದು ಹೇಳಲಾಗುತ್ತದೆ. ಈಗಾಗಲೇ ಎಲ್ಲ 92 ಗ್ರಾಮಗಳಲ್ಲಿ ಈ ಕಮಿಟಿ ಈ ಪ್ರಮಾಣ ಪತ್ರ ನೀಡಿದ್ದು, ಕೆಲವೆಡೆ ಇದರ ಕಾರ್ಯಕ್ಷಮತೆ ಬಗ್ಗೆ ಪ್ರಶ್ನೆ ಮೂಡುತ್ತಿದೆ.
2 ನದಿ ಇದ್ದರೂ ಬೋರ್‌ವೆಲ್ ಆಧಾರ
ಹಾವೇರಿ ತಾಲೂಕಿನಲ್ಲಿ ತುಂಗಭದ್ರಾ, ವರದಾ ಎರಡು ನದಿಗಳು ಹರಿದಿದ್ದರೂ ಈವರೆಗೆ ಸಮರ್ಪಕವಾಗಿ ನದಿಗಳ ನೀರು ಪೂರೈಸುತ್ತಿಲ್ಲ. ಹಲವು ಗ್ರಾಮಗಳಲ್ಲಿ ಬೋರ್‌ವೆಲ್‌ಗಳ ನೀರನ್ನೇ ಪೂರೈಸಲಾಗುತ್ತಿದೆ. ನದಿ ಪಾತ್ರದ ಹಳ್ಳಿಗಳಲ್ಲೂ ನದಿ ನೀರು ಕೊಡಲಾಗದ ಈ ವ್ಯವಸ್ಥೆಗೆ ಜನ ಹಿಡಿಶಾಪ ಹಾಕುತ್ತಿದ್ದಾರೆ.
"
ಜಿಲ್ಲೆಯಲ್ಲಿ ಜೆಜೆಎಂ ಕಾಮಗಾರಿ ಬಹುತೇಕ ಮುಕ್ತಾಯ ಹಂತದಲ್ಲಿದೆ. ಆಣೂರ, ತಡಸ, ಹಂಸಭಾವಿ ಬಹುಗ್ರಾಮ ಕುಡಿಯುವ ನೀರು ಪೂರೈಕೆ ಯೋಜನೆಗಳು ಶೇ.90ರಷ್ಟು ಪೂರ್ಣಗೊಂಡಿವೆ. ಈ ಯೋಜನೆಗಳು ಮುಕ್ತಾಯವಾದರೆ ನೂರಾರು ಹಳ್ಳಿಗಳಿಗೆ ನದಿಯ ನೀರು ಸಿಗಲಿದೆ. ಸದ್ಯಕ್ಕೆ ಹಲವು ಗ್ರಾಮಗಳಿಗೆ ಬೋರ್‌ವೆಲ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ.
— - ಮಾಲತೇಶ, ಇಇ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ
"
ಹಾವೇರಿ ತಾಲೂಕಿನಲ್ಲಿ 95 ಗ್ರಾಮಗಳಲ್ಲಿ ಎರಡು ಹಂತಗಳಲ್ಲಿ ಜೆಜೆಎಂ ಕಾಮಗಾರಿ ಕೈಗೊಳ್ಳಲಾಗಿತ್ತು. ಈ ಪೈಕಿ 92 ಗ್ರಾಮಗಳಲ್ಲಿನ ಜೆಜೆಎಂ ಕಾಮಗಾರಿ ಪೂರ್ಣಗೊಂಡಿದ್ದು, ಸ್ಥಳೀಯ ಗ್ರಾಮ ಪಂಚಾಯಿತಿಗೆ ಒಪ್ಪಿಸಲಾಗಿದೆ. ನೀರು ಪೂರೈಕೆ, ನಿರ್ವಹಣೆ ಹೊಣೆ ಆಯಾ ಗ್ರಾಪಂಗೆ ವಹಿಸಲಾಗಿದೆ. ಬಾಕಿ ಮೂರು ಗ್ರಾಮಗಳಲ್ಲಿ ಕಾಮಗಾರಿ ಚಾಲ್ತಿಯಲ್ಲಿದೆ.
— ಪ್ರವೀಣ ಬಿರಾದಾರ, ಎಇಇ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಹಾವೇರಿ
"
ಕೋಡಬಾಳ ಗ್ರಾಮದಿಂದ ಒಂದೂವರೆ ಕಿಮೀ ದೂರದಲ್ಲಿ ಬೋರ್‌ವೆಲ್ ಕೊರೆದು, ಅಲ್ಲಿಂದ ಗ್ರಾಮಕ್ಕೆ ಜೆಜೆಎಂ ನಲ್ಲಿಗಳ ಮೂಲಕ ನೀರು ಪೂರೈಸಲಾಗುತ್ತದೆ. ನದಿ ನೀರು ಇನ್ನೂ ಬಂದಿಲ್ಲ. ನೀರು ಪೂರೈಸಲು ಸರಿಯಾದ ವ್ಯವಸ್ಥೆ ಇಲ್ಲ. ಸಿಬ್ಬಂದಿ ನೇಮಿಸಿಲ್ಲ. ಮರೋಳ ಗ್ರಾಪಂ ಅಧಿಕಾರಿಗಳು ಬೇಜವಾಬ್ದಾರಿಯಿಂದ ವರ್ತಿಸುತ್ತಾರೆ. ಮಳೆಗಾಳಿಗೆ ವಿದ್ಯುತ್ ಕಂಬ ಬಿದ್ದು ನಾಲ್ಕು ದಿನದಿಂದ ನೀರು ಪೂರೈಕೆ ಮಾಡಿಲ್ಲ. ಸಮನ್ವಯದ ಕೊರತೆ ಇದೆ. ಅಧಿಕಾರಿಗಳು ಸ್ಪಂದಿಸಲ್ಲ.
— ಲೋಕೇಶ ಕುಬಸದ, ಕೋಡಬಾಳ ಗ್ರಾಮಸ್ಥ