Haveri, JDS, Bidadi Township, Padayatre,  
ಹಾವೇರಿ

ಬಿಡದಿ ಟೌನ್‌ಶಿಪ್ ಯೋಜನೆಗೆ ಅವಕಾಶ ಕೊಡಲ್ಲ; ರೈತರ ಪರವಾಗಿ ಜೆಡಿಎಸ್‌ನಿಂದ 9 ಕಿಮೀ ಪಾದಯಾತ್ರೆ; ಜಿಲ್ಲಾಧ್ಯಕ್ಷ ಮಂಜುನಾಥ ಗೌಡಶಿವಣ್ಣನವರ ಮಾಹಿತಿ

ಹಾವೇರಿ: ಬೆಂಗಳೂರು ಬಳಿ ಬಿಡದಿಯಲ್ಲಿ ರೈತರ ಫಲವತ್ತಾದ ಸಾವಿರಾರು ಎಕರೆ ಜಮೀನು ಕಬಳಿಸುವ ಹುನ್ನಾರವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಇದನ್ನು ಖಂಡಿಸಿ ಜೆಡಿಎಸ್ ಪಕ್ಷ ಖಂಡಿಸುತ್ತದೆ. ಇದಕ್ಕೆ ಅವಕಾಶ ನೀಡುವುದಿಲ್ಲ ಎಂದು ನಗರದಲ್ಲಿ ಶುಕ್ರವಾರ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ ಗೌಡಶಿವಣ್ಣವರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ರೈತರ ಫಲವತ್ತಾದ ಭೂಮಿಯ ಮೇಲೆ ಸರ್ಕಾರ ಕಣ್ಣು ಹಾಕಿದೆ. ಈ ಭಾಗದ ಸಾವಿರಾರು ಕುಟುಂಬಗಳು ಈ ಜಮೀನನ್ನೇ ನಂಬಿ ಬದುಕು ಕಟ್ಟಿಕೊಂಡಿವೆ. ಹೈನುಗಾರಿಕೆ, ವ್ಯವಸಾಯ ಮಾಡುತ್ತ ಜೀವನ ಸಾಗಿಸುತ್ತಿದ್ದಾರೆ. ನಿತ್ಯ ಸುಮಾರು 6 ಲಕ್ಷ ಲೀಟರ್ ಹಾಲು ಉತ್ಪಾದಿಸುತ್ತಿದ್ದಾರೆ. ರಾಮನಗರ ಜಿಲ್ಲೆ ರೇಷ್ಮೆ ಬೆಳೆಗೆ ಪ್ರಸಿದ್ಧಿಯಾಗಿದೆ. ಇಲ್ಲಿ ರೇಷ್ಮೆ, ಅಡಕೆ, ತೆಂಗು, ಮಾವು, ಇತರ ಬೆಳಗಾರರಿದ್ದಾರೆ. ಇಂತಹ ಪ್ರದೇಶದ ಹೆಸರಿಗೆ ಕಳಂಕ ತರುವ ಕೆಲಸಕ್ಕೆ ಸರ್ಕಾರ ಮುಂದಾಗಿದೆ. ಜತೆಗೆ ಸುಮಾರು 10 ಲಕ್ಷ ಮರ, ಗಿಡಗಳ ಮಾರಣಹೋಮ ಮಾಡಲು ಹುನ್ನಾರ ನಡೆಸಿದೆ. ಯಾವ ಪುರುಷಾರ್ಥಕ್ಕೆ ಸರ್ಕಾರ ಈ ಕೆಲಸ ಮಾಡಲು ಹೊರಟಿದೆ ಎಂಬುದು ಗೊತ್ತಿಲ್ಲ. ಭೂಮಾಫಿಯಾ ಜತೆ ಸೇರಿ ರೈತರ ಒಕ್ಕಲೆಬ್ಬಿಸಲು ಮುಂದಾಗಿದೆ. ಇದಕ್ಕೆ ನಾವು ಬಿಡುವುದಿಲ್ಲ ಎಂದರು.
ರೈತರ ಪರವಾಗಿ ನಾವಿದ್ದೇವೆ. ಸರ್ಕಾರದ ನಿಲುವು ಖಂಡಿಸಿ ಜೆಡಿಎಸ್‌ನಿಂದ ಜೂನ್ 21ರಂದು ಹಂಚಿಪುರ ಗ್ರಾಮದಿಂದ ಹೊಸೂರವರೆಗೆ 9 ಕಿ.ಮೀ. ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಪಾದಯಾತ್ರೆಯಲ್ಲಿ ಜಿಲ್ಲೆಯಿಂದ ಜೆಡಿಎಸ್ ಪದಾಧಿಕಾರಿಗಳು ಭಾಗವಹಿಸಲಿದ್ದೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಎಸ್.ಸಿದ್ದಬಸಪ್ಪ ಯಾದವ, ಹಾನಗಲ್ಲ ತಾಲೂಕಾಧ್ಯಕ್ಷ ರಾಮನಗೌಡ ಪಾಟೀಲ, ಸವಣೂರ ತಾಲೂಕಾಧ್ಯಕ್ಷ ಶಿವಾನಂದಪ್ಪ ಕರಿಗಾರ, ಶಿವಾನಂದ ಯಲಿಗಾರ, ಮೂಕಪ್ಪ ಅಗಸಿಬಾಗಿಲು, ನಿಂಗಪ್ಪ ಹೊನ್ನಾಳಿ, ಚನ್ನವೀರಪ್ಪ ಬಡಿಗೇರ, ಮದು ಸಿದ್ದಣ್ಣನವರ, ಲಕ್ಷ್ಮೀ ಕದರಮಂಡಲಗಿ, ಇತರರಿದ್ದರು.
ಉ.ಕ.ದಲ್ಲಿ ಟೌನ್‌ಶಿಪ್ ಮಾಡಿ
ಬೆಂಗಳೂರು ಬೆಳೆಸುವ ರೀತಿಯಲ್ಲಿ ಉತ್ತರ ಕರ್ನಾಟಕವನ್ನು ಬೆಳೆಸುವತ್ತ ರಾಜ್ಯ ಸರ್ಕಾರ ಗಮನಹರಿಸಲಿ. ಕೇವಲ ಬೆಂಗಳೂರು ಮಾತ್ರ ಉದ್ದಾರ ಮಾಡಬೇಡಿ. ಉತ್ತರ ಕರ್ನಾಟಕದಲ್ಲಿ ಸಾಕಷ್ಟು ಅವಕಾಶಗಳಿವೆ. ಇಲ್ಲಿ ಟೌನ್‌ಶಿಪ್, ಕೈಗಾರಿಕಾ ಕಾರಿಡಾರ್‌ಗಳನ್ನು ಮಾಡಿ ಎಂದು ಗೌಡಶಿವಣ್ಣನವರ ಆಗ್ರಹಿಸಿದರು.