janapada university, jyotishya okkuta 
ಹಾವೇರಿ

ಜಾನಪದ ವಿವಿಯಲ್ಲಿ ಜ್ಯೋತಿರ್ ವಿಜ್ಞಾನ ಕೋರ್ಸ್ ಆರಂಭಿಸಿ; ರಾಜ್ಯ ಜ್ಯೋತಿಷ್ಯರು ಮತ್ತು ಜ್ಯೋತಿಷ್ಯ ಬೋಧನಾ ಸಂಸ್ಥೆಗಳ ಒಕ್ಕೂಟದಿಂದ ವಿವಿ ಕುಲಪತಿಗೆ ಮನವಿ

ಹಾವೇರಿ: ಜ್ಯೋತಿಷ್ಯ ವಿಜ್ಞಾನದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಶಿಗ್ಗಾಂವಿ ತಾಲೂಕು ಗೊಟಗೋಡಿಯ ಜಾನಪದ ವಿಶ್ವವಿದ್ಯಾಲಯದಲ್ಲಿ ಜ್ಯೋತಿರ್ ವಿಜ್ಞಾನ ಕೋರ್ಸ್‌ಗಳನ್ನು ಆರಂಭಿಸುವಂತೆ ಕರ್ನಾಟಕ ರಾಜ್ಯ ಜ್ಯೋತಿಷ್ಯರು ಮತ್ತು ಜ್ಯೋತಿಷ್ಯ ಬೋಧನಾ ಸಂಸ್ಥೆಗಳ ಒಕ್ಕೂಟದಿಂದ ಜಾನಪದ ವಿವಿ ಕುಲಪತಿ ಡಾ.ಟಿ.ಎಂ.ಭಾಸ್ಕರ ಅವರಿಗೆ ಮನವಿ ಸಲ್ಲಿಸಿತು.
ವಿವಿ ಆವರಣದಲ್ಲಿ ಬುಧವಾರ ಒಕ್ಕೂಟದ ಪದಾಧಿಕಾರಿಗಳು ಕುಪತಿಯವರಿಗೆ ಮನವಿ ಪತ್ರ ಸಲ್ಲಿಸಿದರು.
ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಗಜೇಂದ್ರಬಾಬು ಮಾತನಾಡಿ, ಭಾರತೀಯ ಜ್ಯೋತಿರ್ ವಿಜ್ಞಾನ ಮತ್ತು ವಾಸ್ತು ವಿಜ್ಞಾನವು ನಮ್ಮ ದೇಶದ ಜ್ಞಾನ ಪರಂಪರೆಗಳಲ್ಲಿ ಒಂದಾಗಿದ್ದು, ಈ ಜ್ಞಾನ ಒಂದು ಸಮುದಾಯಕ್ಕೆ ಸೀಮಿತವಾಗದೇ ಎಲ್ಲರಿಗೂ ಸುಲಭವಾಗಿ ಕೈಗೆಟುಕುವಂತೆ ಮಾಡಬೇಕಿದೆ. ವೈಜ್ಞಾನಿಕವಾಗಿ ಈ ವಿಜ್ಞಾನ ಸಾಬೀತಾಗಿದ್ದು, ಜಾನಪದ ಸಾಹಿತ್ಯದಲ್ಲಿಯೂ ಜ್ಯೋತಿಷ್ಯ ಆಳವಾಗಿ ಬೇರೂರಿದೆ. ಕಣಿ ಹೇಳುವುದು, ಹೆಳವರ ವಂಶಾವಳಿ, ಕವಡೆ ಹಾಕುವುದು, ಬುಡಬುಡಕೆ, ಶಕುನ ಸೇರಿದಂತೆ ವಿವಿಧ ಬಗೆಯ ಜ್ಯೋತಿಷ್ಯ ಶಾಸ್ತ್ರ ಜಾನಪದದಲ್ಲಿ ಚಾಲ್ತಿಯಲಿದೆ ಎಂದರು.
ಜ್ಯೋತಿರ್ ವಿಜ್ಞಾನ ನಮ್ಮ ವೇದಗಳ ಶಾಖೆಯಾಗಿದ್ದು ಪಾರಂಪರ್ಯವಾಗಿ ಬೆಳೆದು ಬಂದಿದೆ. ಪ್ರತಿಯೊಬ್ಬರೂ ಇದಕ್ಕೆ ಅವಲಂಭಿತರಾಗಿದ್ದಾರೆ. ಇದು ಬೆಳಕು ಮತ್ತು ಅದರ ಗುಣಲಕ್ಷಣಗಳನ್ನು ಅಧ್ಯಯನ ಮಾಡುತ್ತದೆ. ಇದು ಖಗೋಳಶಾಸ್ತ್ರ ಮತ್ತು ಭೌತಶಾಸ್ತ್ರದ ತತ್ವಗಳನ್ನು ಆಧರಿಸಿದೆ. ನಕ್ಷತ್ರಗಳು, ಗ್ರಹಗಳು ಮತ್ತು ಇತರ ಖಗೋಳ ವಸ್ತುಗಳ ಅಧ್ಯಯನಕ್ಕೆ ಇದು ಸಹಕಾರಿಯಾಗಿದೆ. ಈ ನಿಟ್ಟಿನಲ್ಲಿ ಸಮಾಜದ ಒಳಿತಿಗಾಗಿ ಜಾನಪದ ವಿವಿಯಲ್ಲಿ ಜ್ಯೋತಿರ್ ವಿಜ್ಞಾನ ಕೋರ್ಸ್ ಆರಂಭಿಸುವಂತೆ ರಾಜ್ಯ ಸರ್ಕಾರ ಹಾಗೂ ಕುಲಪತಿಯವರನ್ನು ಒತ್ತಾಯಿಸಿದರು.
ವಿವಿ ಕುಲಸಚಿವ ಕೆ.ಶಿವಶಂಕರ, ಒಕ್ಕೂಟದ ಉಪಾಧ್ಯಕ್ಷ ಹರಿದಾಸ, ಖಜಾಂಚಿ ಕುಮಾರ ವಸಿಷ್ಠ, ಧಾರವಾಡ ಜ್ಯೋತಿಷ್ಯ ಒಕ್ಕೂಟದ ಪದಾಧಿಕಾರಿಗಳು, ಬೆಳಗಾವಿಯ ಶುಭಂ ಜ್ಯೋತಿಷ್ಯ ಶಾಲೆಯ ವಿ.ಎಂ.ಜೋಶಿ, ದಾವಣಗೆರೆ ಭಾಸ್ಕರಾಚಾರ್ಯ ಜ್ಯೋತಿವಿಜ್ಞಾನ ಶಾಲೆಯ ಆನಂದತೀರ್ಥಾಚಾರ್, ಪ್ರವೀಣಕುಮಾರ, ಶ್ರೀಕಾಂತ ಬಗರೆ, ಇತರರಿದ್ದರು.
"

ಜ್ಯೋತಿಷ್ಯ ಶಾಸ್ತ್ರವೂ ಒಂದು ವಿಜ್ಞಾನ ಎಂದು ನ್ಯಾಯಾಲಯ ಆದೇಶಿಸಿದೆ. ಬೆಂಗಳೂರಿನ ಸಂಸ್ಕೃತ ವಿವಿ, ಆಂಧ್ರ, ತೆಲಂಗಾಣ ರಾಜ್ಯದ ವಿವಿಗಳಲ್ಲಿ ಇರುವಂತೆ ಜಾನಪದ ವಿವಿಯಲ್ಲೂ ಈ ಕೋರ್ಸ್ ಆರಂಭಿಸಿ ಉತ್ತರ ಕರ್ನಾಟಕ ಭಾಗದ ಜನರಿಗೆ ಸೌಲಭ್ಯ ಒದಗಿಸಬೇಕು.

"

ಬೆಂಗಳೂರಿನ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ, ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ಸೇರಿದಂತೆ ಯಾವ ವಿವಿಗಳಲ್ಲಿ ಜ್ಯೋತಿರ್ ವಿಜ್ಞಾನ ಕೋರ್ಸ್ ಆರಂಭಿಸಲಾಗಿದೆ ಎಂಬ ಕುರಿತು ಪರಿಶೀಲಿಸಿ, ಈ ಮನವಿಯನ್ನು ಪರಿಗಣಿಸಲಾಗುವುದು. ನಂತರ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು.