Haveri, Janapada University 
ಹಾವೇರಿ

ಅಕ್ರಮ ನೇಮಕಾತಿ ಖಂಡಿಸಿ ಬೆಳಗಾವಿಯಲ್ಲಿ ಪ್ರತಿಭಟನೆ ಡಿ.18ರಂದು; ಶಿವಸೋಮಣ್ಣ ನಿಟ್ಟೂರ

ಹಾವೇರಿ: ಗೊಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಅಕ್ರಮ ನೇಮಕಾತಿ ನಡೆದಿದ್ದು, ಈ ಕುರಿತು ಶಿಕ್ಷಣ ತಜ್ಞರು ಅಥವಾ ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಜಾನಪದ ಸ್ನಾತಕೋತ್ತರ ಹಾಗೂ ಸಂಶೋಧಕರ ಒಕ್ಕೂಟದಿಂದ ಬೆಳಗಾವಿ ಸುವರ್ಣ ವಿಧಾಣಸೌಧದ ಬಳಿ ಡಿ.18ರಂದು ಪ್ರತಿಭಟನೆ ನಡೆಸಲಾಗುವುದು ಎಂದು ಒಕ್ಕೂಟದ ಅಧ್ಯಕ್ಷ ಶಿವಸೋಮಣ್ಣ ನಿಟ್ಟೂರ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿವಿಯಲ್ಲಿ ನಡೆದಿರುವ ಅಕ್ರಮ ನೇಮಕಾತಿ ರದ್ದುಪಡಿಸಿ, ಖೊಟ್ಟಿ ಅಂಕಪಟ್ಟಿಗಳನ್ನು ನೀಡಿ ವಿವಿಗೆ ಸಹಾಯಕ ಕುಲಸಚಿವರಾಗಿರುವ ಶಹಜಹಾನ್ ಮುದಕವಿ ಅವರನ್ನು ವಜಾಗೊಳಿಸಿ, ಬಂಧಿಸಬೇಕು. ಈ ಕುರಿತು ಈಗಾಗಲೇ ಸಿಎಂ, ಉನ್ನತ ಶಿಕ್ಷಣ ಸಚಿವರು ಸೇರಿದಂತೆ ಹಲವರಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಮುದಕವಿ ತನ್ನ ರಾಜಕೀಯ ಪ್ರಭಾವ ಬಳಸಿ ತನ್ನೆಲ್ಲ ಅಕ್ರಮಗಳನ್ನು ಮುಚ್ಚಿಹಾಕುತ್ತಿದ್ದಾರೆ ಎಂದು ದೂರಿದರು.
ಒಕ್ಕೂಟದ ಉಪಾಧ್ಯಕ್ಷ ನಾಗರಾಜ ಎಸ್. ಮಾತನಾಡಿ, ವಿವಿ ಕುಲಪತಿಗಳೂ ಅವರ ಬೆಂಬಲಕ್ಕೆ ನಿಂತಿದ್ದಾರೆ. ವಿವಿ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ. ಇದೇ ಕಾರಣಕ್ಕೆ ಮುದಕವಿ ಪರವಾಗಿ ಇಡೀ ವಿವಿ ಸಿಬ್ಬಂದಿಯೊಂದಿಗೆ ತಾವೂ ಹಾವೇರಿಯಲ್ಲಿ ಸುದ್ದಿಗೋಷ್ಠಿಗೆ ಬಂದಿದ್ದರು. ದಾಖಲೆಗಳನ್ನು ಕೊಟ್ಟಿದ್ದರೂ ಮುದಕವಿ ವಿರುದ್ಧ ಯಾವುದೇ ಕ್ರಮ ಜರುಗಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಜನವರಿಯಲ್ಲಿ ವಿವಿ ಆವರಣದಲ್ಲಿ ಪ್ರತಿಭಟಿಸಲಾಗುವುದು. ಬಹಿರಂಗ ಚರ್ಚೆಗೆ ಆಹ್ವಾನಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಬಿ.ಎಂ.ದುಗಾಣಿ, ಬಸವರಾಜ ಗೊಬ್ಬಿ ಇದ್ದರು.