Siddachakra Mahotsava 
ಹಾವೇರಿ

ಮಕ್ಕಳಿಗೆ ಶಾಶ್ವತ ಧರ್ಮ ಸಂಸ್ಕಾರ ನೀಡಿ; ಜೈನ ಸಮುದಾಯಕ್ಕೆ ಮುನಿಶ್ರೀ ವಿದಿತ ಸಾಗರ ಮಹಾರಾಜರ ಸಲಹೆ

ಕೇಶವಮೂರ್ತಿ ಬೇಲೂರಪ್ಪನವರ
ಹಾವೇರಿ: ಮಕ್ಕಳಿಗೆ ಶಿಕ್ಷಣ ಕೊಡುವ ಹಾಗೆ ಮತ್ತು ಅವರ ಭವಿಷ್ಯಕ್ಕೆ ಸಂಪತ್ತು ಮಾಡುವುದರ ಜತೆಗೆ ಶಾಶ್ವತ ಧರ್ಮದ ಸ್ಮಾರಕ ನೀಡಬೇಕು. ಮಕ್ಕಳು ಧರ್ಮ ರಕ್ಷಣೆ ಮಾಡಲು ಅಛಲವಾಗಿರಬೇಕು ಎಂದು ಚರ್ಯಾಶಿರೋಮಣಿ ಮುನಿಶ್ರೀ 108 ವಿದಿತಸಾಗರ ಮಹಾರಾಜರು ನುಡಿದರು.
ನಗರದ ರಜನಿ ಸಭಾಂಗಣದಲ್ಲಿ ಬೃಹತ್ ಸಿದ್ಧಚಕ್ರ ಮಹಾಮಂಡಲ ವಿಧಾನ ಮಹೋತ್ಸವದ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ಜೈನ ಸರ್ಕಾರಿ ನೌಕರರ ಸಮಾವೇಶದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಪ್ರಕೃತಿಯಲ್ಲಿ ಬದುಕಬೇಕು. ವಿಕೃತಿಯಲ್ಲಿ ಹೋಗಬೇಡಿ. ದೇವರು, ಶಾಸ್ತ್ರ ಹಾಗೂ ಗುರುಗಳೊಂದಿಗೆ ವಿನಯದಿಂದ ಇರಬೇಕು. ಮೊದಲು ಪಾಲಕರು ಧರ್ಮ ಪಾಲಿಸಬೇಕು. ಆಗ ಮಕ್ಕಳು ಸಹ ಧರ್ಮ ಪಾಲನೆಯಲ್ಲಿ ಭಾಗಿಗಳಾಗುತ್ತಾರೆ. ಇಂದು ಎಲ್ಲರೂ ಮೊಬೈಲ್‌ನಲ್ಲಿ ಮಗ್ನರಾಗಿದ್ದಾರೆ. ಮೊದಲು ಮೊಬೈಲ್ ಬಳಕೆ ಕಡಿಮೆ ಮಾಡಿ, ಪಾಲಕರು ಫಾಸ್ಟ್‌ಫುಡ್ ತಿನ್ನಬಾರದು. ತಾಯಂದಿರು ಮನೆಯಲ್ಲೇ ನಮ್ಮ ಸಾಂಪ್ರದಾಯಿಕ ಆಹಾರ ಹಾಗೂ ತಿಂಡಿ ತಿನಿಸುಗಳನ್ನು ತಯಾರಿಸಿ ಮಕ್ಕಳಿಗೆ ನೀಡಬೇಕು ಎಂದರು.
ಜೈನ ಧರ್ಮದ ಆಚರಣೆಯ ಮಹತ್ವ ತಿಳಿದುಕೊಳ್ಳಬೇಕು. ಇನ್ನೊಬ್ಬರ ಧರ್ಮ ಉಳಿಸುವ ಕಾರ್ಯಮಾಡಿ ಅಂದಾಗ ನಿಮ್ಮ ಧರ್ಮ ಉಳಿಯುತ್ತದೆ ಎಂದು ಹೇಳಿದರು.
ಉದ್ಘಾಟನೆ ನೆರವೇರಿಸಿದ ಕರ್ನಾಟಕ ಜೈನ್ ಅಸೋಸಿಯೇಶನ್ ಉಪಾಧ್ಯಕ್ಷ ಶೀತಲ್ ಕಲಗೌಡ ಪಾಟೀಲ ಮಾತನಾಡಿದರು. ಉಗಾರದಲ್ಲಿ 111 ಜೈನ ಮನೆಗಳಿದ್ದು, ಎಂಟು ಬಸದಿಗಳಿವೆ. ಅದೇ ರೀತಿ 200 ಮುಸ್ಲಿಂ ಧರ್ಮದವರ ಮನೆಗಳಿದ್ದು, ಎಲ್ಲರೂ ಶಾಖಾಹಾರಿಗಳಾಗಿದ್ದಾರೆ. ಹಾವೇರಿ ಶ್ರಾವಕ-ಶ್ರಾವಕಿಯರು ಒಮ್ಮೆ ಬಂದು ಭೇಟಿ ನೀಡಬೇಕು ಎಂದು ಹೇಳಿದರು
ಹಾವೇರಿ ರತ್ನತ್ರಯ ಮಹಿಳಾ ಸಮಾಜದ ಅಧ್ಯಕ್ಷೆ ಪುಷ್ಪಾ ಪದ್ಮರಾಜ ಕಳಸೂರ ಅಧ್ಯಕ್ಷತೆ ವಹಿಸಿದ್ದರು.
ಪದ್ಮಶ್ರೀ ಮಾತಾಜಿ, ಪ್ರತಿಷ್ಠಾಚಾರ್ಯರಾದ ಮಾಣಿಕ ಶ್ರೀಪಾಲ ಚಂದಗಡೆ ಮತ್ತು ಪ್ರತಿಮಾಧಾರಿಗಳಾದ ಸಿದ್ದಗೌಡ ಪಾಟೀಲ, ಬ್ರ. ಸಾಧನಾ ದೀದಿ, ಬಾಲ ಬ್ರಹ್ಮಚಾರಿ ಮಹಾವೀರ ಭಯ್ಯಜಿ ಹಾಗೂ ಬ್ರ.ಜಯಕುಮಾರ ಭಯ್ಯಜಿ, ಜಿನೇಂದ್ರ ಬಂಗ, ಸಾದನಾ ದೀದಿ, ಸಮಿತಿ ಅಧ್ಯಕ್ಷ ಸುಭಾಸ ಪಾಟೀಲ, ಕರ್ನಾಟಕ ಜೈನ ಅಸೋಸಿಯೇಶನ್ ಕಾರ್ಯದರ್ಶಿ ಆಶಾ ಪ್ರಭು, ಸಹ ಕಾರ್ಯದರ್ಶಿ ಪ್ರಶಾತ ವಿ., ಖಜಾಂಚಿ ಮಹಾವೀರ ಜೈನ, ಕಾರ್ಯಕಾರಿ ಮಂಡಳಿ ಸದಸ್ಯರಾದ ಉತ್ತಮ ರಾವ್‌ಸಾಬ ಪಾಟೀಲ, ಮಾಳ ಜೈನ, ಶೀತಲಕುಮಾರ ಬಿ.ಆರ್., ಅಜಿತಕುಮಾರ ಬೇತೂರ, ಧರಣೇಂದ್ರ ಎ.ಸಿ., ಪ್ರಶಾಂತ ಮುರಗಿ, ಸುನೀಲಕುಮಾರ, ಎ.ಸಿ.ಧರನೇಂದ್ರಯ್ಯ, ಇತರರು ಉಪಸ್ಥಿತರಿದ್ದರು.
ಭರತ ಹಜಾರಿ ಸ್ವಾಗತಿಸಿದರು. ಕುಮುದಾ ನಿರೂಪಿಸಿದರು. ಕರ್ನಾಟಕ ಬೃಹತ್ ಸಿದ್ಧಚಕ್ರ ಮಹಾಮಂಡಲ ವಿಧಾನ ಮಹೋತ್ಸವ ಸಮಿತಿ ಕಾರ್ಯದರ್ಶಿ ಎಸ್.ಎ.ವಜ್ರಕುಮಾರ ವಂದಿಸಿದರು.
ಬೆಳಗ್ಗೆ ಜಿನಭಗವಂತರ ಜಲಾಭಿಷೇಕ, ಗಂಧಾಭಿಷೇಕ, ಪುಷ್ಪವೃಷ್ಟಿ, ಬೃಹತ್ ಶಾಂತಿಧಾರೆ, ನಿತ್ಯಪೂಜೆ, ದೇವಶಾಸ್ತ್ರ ಗುರುಪೂಜೆ, ಬೃಹತ್ ಸಿದ್ಧಚಕ್ರ ಮಹಾಮಂಡಲ ವಿಧಾನ ಸೇರಿದಂತೆ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು.