Haveri, Hubli, Cycle Club, Race,
ಹಾವೇರಿ: ಹುಬ್ಬಳ್ಳಿ ಬೈಸಿಕಲ್ ಕ್ಲಬ್‌ನಿಂದ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಂಕಾಪುರ ಟೋಲ್ ಪ್ಲಾಜಾದಿಂದ ತಮಿಳುನಾಡಿನ ಕನ್ಯಾಕುಮಾರಿವರೆಗೆ 75 ಗಂಟೆಗಳಲ್ಲಿ 1,000 ಕಿ.ಮೀ. ಸೈಕಲ್ ಮೇಲೆ ಚಲಿಸುವ ಸೈಕಲ್ ಸ್ಪರ್ಧೆಗೆ ಹಾವೇರಿ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಚಾಲನೆ ನೀಡಿದರು.
ನಂತರ ಮಾತನಾಡಿದ ಡಿಸಿ, ಸೈಕಲ್ ಸವಾರಿ ಮಾಡುವುದು ವೈಯಕ್ತಿಯ ಆರೋಗ್ಯಕ್ಕೆ ಮತ್ತು ಪರಿಸರ ಎರಡಕ್ಕೂ ಸಹಕಾರಿಯಾಗಿದೆ. ಈ ಸ್ಪರ್ಧೆ ಸ್ಪರ್ಧಾಳುಗಳ ಕಷ್ಟಸಹಿಷ್ಣುತೆಯನ್ನು ಪರೀಕ್ಷೆ ಮಾಡುತ್ತದೆ. ತಾಳ್ಮೆ ಮತ್ತು ಛಲ ಎರಡೂ ಇದ್ದರೆ ಯಶಸ್ಸು ಸಾಧ್ಯವಾಗುತ್ತದೆ. ಹಾವೇರಿ ಜಿಲ್ಲೆಯಲ್ಲೂ ಸೈಕಲ್ ಸವಾರರ ಸಂಖ್ಯೆ ಹೆಚ್ಚುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು.
ಸ್ಫರ್ಧೆಯಲ್ಲಿ ಹುಬ್ಬಳ್ಳಿ, ಬೆಳಗಾವಿ, ಗೋವಾ, ದೆಹಲಿ, ಮುಂಬೈ, ಬೆಂಗಳೂರು, ಹಾವೇರಿಯಿಂದ 30 ಸ್ಪರ್ಧಿಗಳು ಭಾಗವಹಿಸಿದ್ದಾರೆ. ಹಾವೇರಿಯಿಂದ ತಿಮ್ಮೇಶಕುಮಾರ, ಪ್ರಕಾಶ ಎಚ್.ಟಿ., ಜಯಪ್ರಕಾಶ ಹೊಂಕಣ ಭಾಗವಹಿಸಿದ್ದಾರೆ.
ಹಾವೇರಿ ಫಿಟ್ನೆಸ್ ಟ್ರಸ್ಟ್ ಅಧ್ಯಕ್ಷ ಎಂ.ಆರ್.ಎಂ. ರಾವ್, ಕಾರ್ಯದರ್ಶಿ ಡಾ.ಶ್ರವಣ ಪಂಡಿತ, ಹಾವೇರಿ ಸೈಕ್ಲಿಂಗ್ ಕ್ಲಬ್ ಅಧ್ಯಕ್ಷ ದಯಾನಂದ ಸೂರಗೊಂಡ, ಪ್ರಕಾಶ ಎಚ್.ಟಿ., ಹುಬ್ಬಳ್ಳಿ ಬೈಸಿಕಲ್ ಕ್ಲಬ್ ಅಧ್ಯಕ್ಷ ಶೆಟ್ಟೆಪ್ಪ ಪಿರಂಗಿ, ಅರವಿಂದ ಮೂಲಿಮನಿ, ಶೇಖಪ್ಪ ಚಕ್ರಸಾಲಿ, ಡಾ.ಸಂತೋಷ ದಿಡ್ಡಿ, ಶಿವಾನಂದ ದಂಡಾವತಿಮಠ, ಪ್ರಸನ್ನ ಜೋಷಿ, ತಿಮ್ಮಣ್ಣ ಹೆಗಡೆ, ಇತರರಿದ್ದರು.
75 ಗಂಟೆಯೊಳಗೆ ಸಾವಿರ ಕಿ.ಮೀ. ಸೈಕಲ್ ಸವಾರಿ ಅತ್ಯಂತ ಕಠಿಣ ಸ್ಪರ್ಧೆಯಾಗಿದೆ. ಮಳೆ, ಗಾಳಿ, ಚಳಿ ಎನ್ನದೇ ಹಗಲು- ರಾತ್ರಿ ಸೈಕಲ್ ತುಳಿಯಬೇಕಿದೆ. ಇದರ ಮಧ್ಯದಲ್ಲೇ ಊಟ, ಅಲ್ಪ ಉಪಹಾರ, ವಿಶ್ರಾಂತಿ ಪಡೆಯಬೇಕಿದೆ. ಸೈಕಲ್ ಸಮಸ್ಯೆ ಉಂಟಾದರೆ ಅವರೇ ಸರಿಪಡಿಸಿಕೊಳ್ಳಬೇಕು ಎಂದು ಆಯೋಜಕ ಎಂ.ಆರ್.ಎಂ. ರಾವ್ ತಿಳಿಸಿದರು.