, huj bhavan 
ಹಾವೇರಿ

ಹಜ್ ಭವನದಿಂದ ಹಾವೇರಿ ಜಿಲ್ಲೆಯ ಜನರಿಗೆ ಅನುಕೂಲ; ಹಾವೇರಿ ಅಂಜುಮನ್ ಇಸ್ಲಾಂ ಸಮಿತಿ ಅಧ್ಯಕ್ಷ ಇರ್ಫಾನ್‌ಖಾನ್ ಪಠಾಣ

ಹಾವೇರಿ: ಕಿತ್ತೂರು ಕರ್ನಾಟಕದ ಬಹುದಿನಗಳ ಕನಸಾಗಿದ್ದ ಹುಬ್ಬಳ್ಳಿಯ ಹಜ್ ಭವನ ನಿರ್ಮಾಣ ಮಂಜೂರು ಮಾಡಿರುವ ರಾಜ್ಯ ಸರ್ಕಾರದ ನಡೆಯಿಂದ ಜಿಲ್ಲೆಯ ಮುಸ್ಲಿಂ ಸಮುದಾಯದ ಜನರಿಗೆ ಅನುಕೂಲ ಆಗಲಿದೆ ಎಂದು ಹಾವೇರಿ ಅಂಜುಮನ್ ಇಸ್ಲಾಂ ಸಮಿತಿ ಅಧ್ಯಕ್ಷ ಇರ್ಫಾನ್‌ಖಾನ್ ಪಠಾಣ ತಿಳಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಬೆಂಗಳೂರಿನಲ್ಲಿ ಮಾತ್ರ ಹಜ್ ಭವನ ಇದ್ದು, ಪ್ರಸಕ್ತ ಸಾಲಿನಲ್ಲಿ ಹುಬ್ಬಳ್ಳಿ ಹಾಗೂ ಕಲಬುರಗಿಯಲ್ಲಿ ಹಜ್ ಭವನಗಳನ್ನು ನಿರ್ಮಿಸುವುದಾಗಿ ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ. ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಅವರ ಪ್ರಾಮಾಣಿಕ ಪ್ರಯತ್ನದಿಂದ ಇದು ಸಾಧ್ಯವಾಗಿದೆ. ಕಿತ್ತೂರ ಕರ್ನಾಟಕ ಭಾಗದ ಜನರ ಕಾಳಜಿ ಹೊಂದಿರುವ ಸಲೀಂ ಅಹ್ಮದ್ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು.
ಕಳೆದ ವರ್ಷ ಜಿಲ್ಲೆಯಿಂದ 150ಕ್ಕೂ ಅಧಿಕ ಜನರು ಹಜ್ ಯಾತ್ರೆಗೆ ತೆರಳಿದ್ದರು. ಹಜ್ ಯಾತ್ರೆಗೆ ಸುಮಾರು 5 ಲಕ್ಷ ರೂ. ಖರ್ಚಾಗುತ್ತದೆ. ಇದರಲ್ಲಿ ಸುಮಾರು ಶೇ.50ರಷ್ಟು ಸರ್ಕಾರ ಭರಿಸುತ್ತದೆ. ಹಣಕಾಸು, ಜೀವನ ನಿರ್ವಹಣೆಯಲ್ಲಿ ಯಶಸ್ವಿಯಾದವರು ಮಾತ್ರ ಹಜ್ ಯಾತ್ರೆಗೆ ಹೊರಡುತ್ತಾರೆ. ಹಜ್‌ಗೆ ತೆರಳುವವರು ಬೆಂಗಳೂರಿ ಹಜ್ ಭನನದಲ್ಲಿ ಎರಡು ದಿನ ತರಬೇತಿ ಪಡೆಯಬೇಕಿತ್ತು. ಈಗ ಹುಬ್ಬಳ್ಳಿಯಲ್ಲೇ ಹಜ್ ಭವನ ಆದರೆ, ಹಜ್ ಯಾತ್ರೆಯ ತಯಾರಿ, ಪ್ರಾರ್ಥನೆ ಸಲ್ಲಿಸುವ ರೀತಿ, ಇತ್ಯಾದಿಗಳ ಕುರಿತು ತರಬೇತಿ ನೀಡಲಾಗುತ್ತದೆ. ಉಳಿದ ದಿನಗಳಲ್ಲಿ ಅಲ್ಪಸಂಖ್ಯಾತ ಸಮುದಾಯದ ಜನರಿಗೆ ಐಎಎಸ್, ಕೆಎಎಸ್ ತರಬೇತಿ ನೀಡಲಾಗುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಉಪಾಧ್ಯಕ್ಷ ಇಮಾಮ ಹುಸೇನ್ ಬಾಲಿಬಾಯಿ, ಕಾರ್ಯದರ್ಶಿ ಮುಜಫರ್ ಕೊಟ್ಟಿಗೇರಿ, ಖಜಾಂಚಿ ಚಮನ್ ಶರೀಫ್ ಮುಲ್ಲಾ, ಸದಸ್ಯರಾದ ಜಮೀರ್ ಜಿಗರಿ, ವಾಸಿಂ ಸನ್ನು ಖಾನ್, ಸಾಧಿಕ್ ಸವಣೂರು, ಹಜರತ್ ಅಲಿ ತಹಸೀಲ್ದಾರ್, ಕಮರ್ ಕಲ್ಯಾಣಿ, ಮುಕ್ತರ್ ತಟ್ಟಿಮನಿ, ಇದ್ದರು.
ಅಲ್ಪಸಂಖ್ಯಾತರ ಶಿಕ್ಷಣಕ್ಕೆ ಒತ್ತು
ಹಾವೇರಿ ಅಂಜುಮನ್ ಸಮಿತಿಯಿಂದ ಕಳೆದ ಮೂರು ವರ್ಷದಲ್ಲಿ ಅಂಜುಮನ್ ಶಾಲೆಗೆ ಹೊಸ ಕಟ್ಟಡ ನಿರ್ಮಿಸಲಾಗಿದ್ದು, ಈದ್ಗಾ ಮೈದಾನಕ್ಕೆ 10 ಲಕ್ಷ ವೆಚ್ಚದಲ್ಲಿ ಪೇವರ್ಸ್‌ ಅಳವಡಿಕೆಗೆ ಕ್ರಮ ಜರುಗಿಸಲಾಗಿದೆ. ಮುಂಬರುವ ದಿನಗಳಲ್ಲಿ ಪಿಯು ಕಾಲೇಜ್ ಆರಂಭಿಸುವುದು, ಸಮುದಾಯದ ಬಡ ಮಕ್ಕಳಿಗೆ ಶಿಕ್ಷಣಕ್ಕೆ ಒತ್ತು ನೀಡಲಾಗುವುದು ಎಂದು ಪಠಾಣ ಹೇಳಿದರು.