police, theft case, arrest,
ಹಾವೇರಿ: ಹಿರೇಕೆರೂರ ತಾಲೂಕು ನಿಡನೇಗಿಲು ಗ್ರಾಮದಲ್ಲಿ ನಡೆದ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಪೊಲೀಸ್ ಕಾನ್‌ಸ್ಟೆಬಲ್ ಪ್ರದೀಪ ನಾಯ್ಕ ಕಳ್ಳರ ಗುಂಪಿನ ಗುರುವಾಗಿದ್ದ ಅಂಶ ಬಹಿರಂಗಗೊಂಡಿದೆ. ಸುಲಭವಾಗಿ ದುಡ್ಡು ಮಾಡಲು ಕಳ್ಳರೊಂದಿಗೆ ಕೈ ಮಿಲಾಯಿಸದ್ದ ಪ್ರದೀಪ ಈಗ ತಾನು ಕಂಬಿ ಎಣಿಸುತ್ತಿದ್ದಾನೆ.
ಕಳ್ಳರ ತಂಡದಲ್ಲಿ ಸೇರಿದ್ದ ಪ್ರದೀಪ ಸರಿಯಾಗಿ ಯೋಜನೆ ರೂಪಿಸಿ ಪೊಲಿಸರ ಕೈಗೆ ಸಿಗದಂತೆ ಕಳ್ಳತನ ಮಾಡಬೇಕು. ದೊಡ್ಡ ಭೇಟೆ ಆಡಬೇಕು ಎಂದು ಕಳ್ಳರಿಗೆ ಪಾಠ ಹೇಳಿ ಕೊಡುತ್ತಿದ್ದ. ಸಿಸಿಟಿವಿ ಕ್ಯಾಮರಾ ಯಾವುದರಲ್ಲೂ ಸಿಗದಂತೆ ಕಳವು ಮಾಡಬೇಕು ಎಂದು ಹೇಳಿಕೊಟ್ಟಿದ್ದ. ಹಲವು ದಿನಗಳಿಂದ ತಯಾರಿ ಮಾಡಿಕೊಡಿದ್ದ.
ಉತ್ತರ ಕನ್ನಡ ಜಿಲ್ಲೆ ಭಟ್ಕಳದಲ್ಲಿ ತನ್ನದೇ ಮುಂದಾಳತ್ವದಲ್ಲಿ ಕಳ್ಳತನಕ್ಕೆ ಹೊಂಚು ಹಾಕಿದ್ದ. ತಾನೇ ಮೊದಲು ಹೋಗಿ ಮನೆಯೊಂದರ ಬಗ್ಗೆ ಮಾಹಿತಿ ಪಡೆದುಕೊಂಡು ಬಂದು ಕಳ್ಳರಿಗೆ ತಿಳಿಸಿದ್ದ. ಆದರೆ ಆ ಮನೆ ಕಳ್ಳತನ ಯತ್ನ ವಿಫಲವಾಗಿತ್ತು.
ಬಳಿಕ ನಿಡನೇಗಿಲು ಗ್ರಾಮದ ಮಲ್ಲನಗೌಡ ಪಾಟೀಲರ ಮನೆಗೆ ಹೊಂಚು ಹಾಕಿದ್ದ. ಇದೇ ಗ್ರಾಮದ ಅಳಿಯನಾಗಿದ್ದ ಪ್ರದೀಪ ನಾಯ್ಕ ಗ್ರಾಮದ ಮಲ್ಲನಗೌಡರು ಅಡಕೆ ಮಾರಿದ್ದ ಹಣ ತಂದು ಮನೆಯಲ್ಲಿ ಇಟ್ಟಿದ್ದ ವಿಷಯವನ್ನು ಹೇಗೋ ತಿಳಿದುಕೊಂಡಿದ್ದ. ಭಾರೀ ಮೊತ್ತದ ಹಣ ಇರಬೇಕು ಎಂದು ಭಾವಿಸಿ ಕಳ್ಳರಿಗೆ ಹಸಿರು ನಿಶಾನೆ ತೋರಿಸಿದ್ದ. ಗೌಡರ ಮನೆಯನ್ನು ತೋರಿಸಿದ್ದಲ್ಲದೇ, ಈತನೇ ರೂಟ್ ಮ್ಯಾಪ್ ಹಾಕಿಕೊಟ್ಟಿದ್ದ. ಆ ಸ್ಥಳದಲ್ಲಿ ಸಿಸಿಟಿವಿ ಕ್ಯಾಮರಾ ಏನೂ ಇಲ್ಲ. ಪೊಲೀಸರಿಗೆ ಕಳ್ಳರನ್ನು ಪತ್ತೆ ಹಚ್ಚುವುದು ಆಗುವುದಿಲ್ಲ ಎಂದು ಐಡಿಯಾ ಮಾಡಿದ್ದ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ‘ವಿಜಯವಾಣಿ’ಗೆ ತಿಳಿಸಿದ್ದಾರೆ.
ಆದರೆ, ಈತ ಚಾಪೆ ಕೆಳಗೆ ನುಸುಳಿದರೆ, ಜಿಲ್ಲಾ ಪೊಲೀಸರು ರಂಗೋಲಿ ಕೆಳಗೆ ನುಸುಳಿ ಕೊನೆಗೂ ಕಳ್ಳರನ್ನು ಪತ್ತೆ ಮಾಡಿದ್ದಾರೆ. ಕಳ್ಳರ ವಿಚಾರಣೆ ನಡೆಸಿದಾಗ ಪೊಲೀಸಪ್ಪ ಕಳ್ಳಾಟ ಬಯಲಾಗಿದೆ. ಕೈತುಂಬ ಸಂಬಳ ಸಿಗುವ ಗೌರವಯುತವಾದ ಹುದ್ದೆಯಲ್ಲಿದ್ದರೂ ಅತಿಯಾಸೆಗೆ ಬಿದ್ದ ಪೊಲೀಸಪ್ಪ ಈಗ ಜೈಲಿನಲ್ಲಿ ಮುದ್ದೆ ಮುರಿಯುತ್ತಿದ್ದಾನೆ.
ಕಳ್ಳರ ಜತೆ ಕೈಜೋಡಿಸಿ ಬಂಧನವಾಗುತ್ತಿದ್ದಂತೆ ಕಾನ್‌ಸ್ಟೆಬಲ್ ಪ್ರದೀಪ ನಾಯ್ಕನನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಈತನನ್ನು ಅಮಾನತು ಮಾಡಿ, ಇಲಾಖಾ ತನಿಖೆಗೂ ಆದೇಶ ಹೊರಡಿಸಿದ್ದಾರೆ. ಆರೋಪ ಸಾಬೀತಾದರೆ ಕೆಲಸದಿಂದ ವಜಾಆಗುವ ಸಾಧ್ಯತೆಯೂ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.