hindu-samajotsava 
ಹಾವೇರಿ

ಹಾವೇರಿಯಲ್ಲಿ ಬೃಹತ್ ಹಿಂದೂ ಸಮಾಜೋತ್ಸವ, ಶೋಭಾಯಾತ್ರೆ ಫೆ.8ರಂದು; ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಲು ಆಯೋಜಕರ ಮನವಿ

ಹಾವೇರಿ: ಹಿಂದೂಗಳನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಹಿಂದೂ ಸಮ್ಮೇಳನ ಸಮಿತಿ ವತಿಯಿಂದ ಫೆ.8ರಂದು ನಗರದಲ್ಲಿ ಬೃಹತ್ ಹಿಂದೂ ಸಮಾಜೋತ್ಸವ ಆಯೋಜಿಸಲಾಗಿದೆ.
ಮಧ್ಯಾಹ್ನ 2.30ಕ್ಕೆ ಹುಕ್ಕೇರಿ ಮಠದಿಂದ ಮುನ್ಸಿಪಲ್ ಮೈದಾನದವರೆಗೆ ಭಾರತಮಾತೆಯ ಭಾವಚಿತ್ರದ ಬೃಹತ್ ಶೋಭಾಯಾತ್ರೆ ನಡೆಯಲಿದೆ. ಪ್ರಮುಖ ಮಾರ್ಗದಲ್ಲಿ ಮೆರವಣಿಗೆ ಸಾಗಲಿದೆ. ಶೋಭಾ ಯಾತ್ರೆಯಲ್ಲಿ ವಿವಿಧ ಕಲಾತಂಡಗಳು, ಮಾತೆಯರಿಂದ ಪೂರ್ಣಕುಂಭದ ಮೆರವಣಿಗೆ, ಮಕ್ಕಳಿಂದ ವಿವಿಧ ವೇಷಭೂಷಣ ಪ್ರದರ್ಶನ ನಡೆಯಲಿದೆ.
ಸಂಜೆ 5 ಗಂಟೆಗೆ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಹಿಂದೂ ಸಮಾಜೋತ್ಸವ ವೇದಿಕೆ ಕಾರ್ಯಕ್ರಮ ಜರುಗಲಿದೆ. ಹುಕ್ಕೇರಿ ಮಠದ ಶ್ರೀ ಸದಾಶಿವ ಸ್ವಾಮೀಜಿ, ಗುರುಪಾದ ದೇವರಮಠದ ಶ್ರೀ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ, ಹೊಸಮಠದ ಶ್ರೀ ಬಸವಶಾಂತಲಿಂಗ ಸ್ವಾಮೀಜಿ ಹಾಗೂ ಹರಸೂರ ಬಣ್ಣದ ಮಠದ ಶ್ರೀ ಅಭಿನವರುದ್ರ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಸಾಮಾಜಿಕ ಕಾರ್ಯಕರ್ತರಾದ ಹನುಮಂತ ಮಳಲಿ ವಿಶೇಷ ಉಪನ್ಯಾಸ ನೀಡುವರು.
ಶೋಭಾಯಾತ್ರೆಯಲ್ಲಿ ಎಲ್ಲ ಹಿಂದೂಗಳು ಕುಟುಂಬ ಸಮೇತರಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಶೋಭಾಯಾತ್ರೆ ಸಂದರ್ಭದಲ್ಲಿ ಮಾರ್ಗದ ಉದ್ದಕ್ಕೂ ರಂಗೋಲಿ, ತಳಿರು- ತೋರಣಗಳಿಂದ ಅಲಂಕರಿಸುವುದು, ಮಕ್ಕಳಿಗೆ ದೇಶಭಕ್ತರು, ಮಹಾಪುರುಷರ ವೇಷಭೂಷಣ ಧರಿಸಿ, ಭಾರತ ಮಾತೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಸಮಾಜೋತ್ಸವದ ಯಶಸ್ಸಿಗೆ ಎಲ್ಲರೂ ಕೈಜೋಡಿಸುವಂತೆ ಹಾವೇರಿ ಹಿಂದೂ ಸಮ್ಮೇಳನ ಸಮಿತಿ ಗೌರವಾಧ್ಯಕ್ಷ ಆರ್.ಎಸ್.ಮಾಗನೂರ ಹಾಗೂ ಅಧ್ಯಕ್ಷ ವಿಜಯಕುಮಾರ ಗೊಡಚಿ ಪ್ರಕಟಣೆ ಮೂಲಕ ಕೋರಿದ್ದಾರೆ.