ಹಾವೇರಿ: ಉತ್ತರ ಕರ್ನಾಟಕದ ಹೆಬ್ಬಾಗಿಲು ಹಾವೇರಿ ಜಿಲ್ಲೆಯ ಜನರ ಎರಡು ದಶಕಗಳ ಕನಸು ಹಾವೇರಿ ಮೆಡಿಕಲ್ ಕಾಲೇಜ್ (ಹಿಮ್ಸ್) ಕನಸು ಕೊನೆಗೂ ನನಸಾಗಿದೆ. ಸುದೀರ್ಘ ಅವಧಿಯ ಮುಖ್ಯಮಂತ್ರಿ ಎಂದು ಪಾತ್ರರಾಗಿರುವ ಸಿದ್ದರಾಮಯ್ಯನವರು ಜ.7ರಂದು ತಮ್ಮ ದಾಖಲೆಯ ದಿನವೇ ಜಿಲ್ಲೆಯ ಜನರ ಕನಸು ನನಸು ಮಾಡಲಿರುವುದು ವಿಶೇಷವೇ ಸರಿ.
ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಹಾವೇರಿ ಜಿಲ್ಲೆ ಕೃಷಿ ಪ್ರಧಾನವಾದ ಜಿಲ್ಲೆ. ಮಳೆಯಾಶ್ರಿತ, ಒಣ ಬೇಸಾಯ ಪದ್ಧತಿಯಲ್ಲೇ ಬದುಕು ಕಟ್ಟಿಕೊಂಡಿರುವ ಬಹುತೇಕ ರೈತರು ಅಲ್ಪ ಆದಾಯದಲ್ಲೇ ಸಂಕಷ್ಟದ ಜೀವನ ನಡೆಸುತ್ತಿದ್ದಾರೆ. ಈ ನಡುವೆ ದುಬಾರಿ ವೈದ್ಯಕೀಯ ವೆಚ್ಚದಿಂದ ಬದುಕು ಮತ್ತಷ್ಟು ದುಸ್ತರವಾಗಿದೆ.
ಅಪಘಾತ, ಕ್ಯಾನ್ಸರ್, ಹೃದಯ ಶಸ್ತ್ರಚಿಕಿತ್ಸೆ, ಸೇರಿದಂತೆ ಮತ್ತಿತರ ಗಂಭೀರ ರೋಗಗಳಿಗೆ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆಯ ಸಂದಂರ್ಭದಲ್ಲಿ ರೋಗಿಗಳು ಅನಿವಾರ್ಯವಾಗಿ ಹುಬ್ಬಳ್ಳಿ, ದಾವಣಗೆರೆ, ಬೆಂಗಳೂರು ಕಡೆಗೆ ಮುಖ ಮಾಡಬೇಕಿತ್ತು. ಹಾವೇರಿ ಜಿಲ್ಲಾಸ್ಪತ್ರೆ ಬಿಟ್ಟರೆ ಬೇರೆ ವ್ಯವಸ್ಥೆ ಇರಲಿಲ್ಲ. ಇದೀಗ ಆ ಕೊರತೆ ನೀಗಿಸಲು ಹಾವೇರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಹಿಮ್ಸ್) ಅಧಿಕೃತವಾಗಿ ದಾಪುಗಾಲು ಇಟ್ಟಿದೆ.
ಹಿಮ್ಸ್ ಜಿಲ್ಲೆಯ ಜನರ ಕನಸುಗಳಿಗೆ ರೆಕ್ಕೆ ಪುಕ್ಕ ಕಟ್ಟಿಕೊಟ್ಟಿದೆ. ಬಡ ರೋಗಿಗಳ ಪಾಲಿನ ಸಂಜೀವಿನಿಯಾಗುವ ಭರವಸೆ ತಂದೊಡ್ಡಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ಸರ್ಕಾರ ಮತ್ತಷ್ಟು ವೇಗವಾಗಿ ಅಗತ್ಯ ಸೌಲಭ್ಯಗಳನ್ನು ಒದಗಿಸುವ ಮೂಲಕ ಮೆಡಿಕಲ್ ಕಾಲೇಜ್ ಮತ್ತು ಜಿಲ್ಲಾಸ್ಪತ್ರೆಯನ್ನು ನಿಜಕ್ಕೂ ಬಡವರ ಪಾಲಿನ ಸಂಜೀವಿನಿಯನ್ನಾಗಿ ಮಾಡಬೇಕಿದೆ.
ಬೇಕಿದೆ ಎಂಆರ್‌ಐ ಸ್ಕಾೃನ್, ಸೂಪರ್ ಸ್ಪೇಷಾಲಿಟಿ
ಹಲವು ವರ್ಷಗಳಿಂದ ಜಿಲ್ಲಾಸ್ಪತ್ರೆಯಲ್ಲಿ ಎಂಆರ್‌ಐ ಸ್ಕಾೃನಿಂಗ್ ಇಲ್ಲದೇ ರೋಗಿಗಳು ಪರದಾಡುವಂತಾಗಿದೆ. ಸ್ಕಾೃನಿಂಗ್‌ಗಾಗಿ ಅಲೆದಾಡುವ, ತಿಂಗಳುಗಟ್ಟಲೇ ಕಾಯುವ ಸ್ಥಿತಿ ಇದೆ. ಈಗಾಗಲೇ ಈ ಬಗ್ಗೆ ಗಮನ ಹರಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲರು ಇನ್ನಾದರೂ ತ್ವರಿತಗತಿಯಲ್ಲಿ ಯಂತ್ರ ಅಳವಡಿಸಿ, ಜನರ ಸೇವೆಗೆ ಲೋಕಾರ್ಪಣೆಗೊಳಿಸಬೇಕಿದೆ. ಅಗತ್ಯ ವೈದ್ಯಕೀಕ ಅಧಿಕಾರಿಗಳು, ಸಿಬ್ಬಂದಿ ನೇಮಕಾತಿ ಆಗಬೇಕಿದೆ.
ಜತೆಗೆ ಮೆಡಿಕಲ್ ಕಾಲೇಜ್ ಆವರಣದಲ್ಲಿ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ಮತ್ತು ಟ್ರಾಮಾ ಸೆಂಟರ್ ಆರಂಭಕ್ಕೆ ಮುಖ್ಯಮಂತ್ರಿಯವರು ಘೋಷಣೆ ಮಾಡಬೇಕಿದೆ. ಈ ಮೂಲಕ ಜಿಲ್ಲೆಯ ಜನರ ಬೇಡಿಕೆಗೆ ಸ್ಪಂದಿಸಬೇಕಿದೆ.
ಕೇಂದ್ರ, ರಾಜ್ಯ ಸಚಿವರು, ಶಾಸಕರು, ಗಣ್ಯರು ಭಾಗಿ
ಹಿಮ್ಸ್ ಉದ್ಘಾಟನಾ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ, ಕೇಂದ್ರ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಜೆ.ಪಿ.ನಡ್ಡಾ, ಕೇಂದ್ರ ಗ್ರಾಹಕರ ವ್ಯವಹಾರಗಳ ಆಹಾರ ಮತ್ತು ಸಾರ್ವಜನಿಕ ವಿತರಣಾ ಹಾಗೂ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ, ಸಂಸದ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ವಿಧಾನ ಪರಿಷತ್ ಸಭಾಪತಿಗಳಾದ ಬಸವರಾಜ ಹೊರಟ್ಟಿ, ವಿಧಾನಸಭೆ ಉಪಾಧ್ಯಕ್ಷ, ಶಾಸಕ ರುದ್ರಪ್ಪ ಲಮಾಣಿ, ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ, ಆರೋಗ್ಯ ಸಚಿವ ದಿನೇಶ ಗುಂಡೂರಾವ್, ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ, ಕಾನೂನು ಸಚಿವ ಎಚ್.ಕೆ.ಪಾಟೀಲ, ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ವಸತಿ ಸಚಿವ ಬಿ.ಝಡ್.ಜಮೀರ್ ಅಹಮದ್ ಖಾನ್, ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್, ಸ್ಥಳೀಯ ಶಾಸಕರು, ಇತರ ಗಣ್ಯರು ಭಾಗವಹಿಸಲಿದ್ದಾರೆ.