HIMS, CM 
ಹಾವೇರಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾವೇರಿಗೆ ಜ.7ರಂದು; ಹಾವೇರಿ ಮೆಡಿಕಲ್ ಕಾಲೇಜ್ ಉದ್ಘಾಟನೆ, ವಿವಿಧ ಕಾಮಗಾರಿಗೆ ಚಾಲನೆ

ಕೇಶವಮೂರ್ತಿ ಬೇಲೂರಪ್ಪನವರ
ಹಾವೇರಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಜ.7ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ಬೆಳಗ್ಗೆ 10 ಗಂಟೆಗೆ ಬೆಂಗಳೂರು ಎಚ್‌ಎಎಲ್ ವಿಮಾನ ನಿಲ್ದಾಣದಿಂದ ಹೊರಟು, ಬೆಳಗ್ಗೆ 11 ಗಂಟೆಗೆ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸುವರು. ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಬೆಳಗ್ಗೆ 11.40ಕ್ಕೆ ಹಾವೇರಿಯ ಕೆಎಲ್‌ಇ ಸಂಸ್ಥೆಯ ಕೊಳ್ಳಿ ಪಾಲಿಟೆಕ್ನಿಕ್ ಮೈದಾನದ ಹೆಲಿಪ್ಯಾಡ್‌ಗೆ ಆಗಮಿಸಲಿದ್ದಾರೆ. ಮೊದಲಿಗೆ ಹಾವೇರಿ ನಗರದ ಹುಕ್ಕೇರಿ ಮಠಕ್ಕೆ ಭೇಟಿ ನೀಡಿ, ಉಭಯ ಶ್ರೀಗಳ ಗದ್ದುಗೆ ಹಾಗೂ ಶ್ರೀ ಸದಾಶಿವ ಸ್ವಾಮೀಜಿ ಅವರನ್ನು ಭೇಟಿ ಮಾಡಲಿದ್ದಾರೆ.
ನಂತರ ಲೋಕೋಪಯೋಗಿ ಇಲಾಖೆ ವತಿಯಿಂದ ಹಮ್ಮಿಕೊಂಡಿರುವ ಹಾವೇರಿ ನಗರದ ನೂತನ ವಿ.ವಿ.ಐ.ಪಿ ಸರ್ಕ್ಯೂಟ್ ಹೌಸ್ ಕಟ್ಟಡ ಉದ್ಘಾಟಿಸುವರು. ನೆಲೋಗಲ್ಲ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಿರುವ ಸರ್ಕ್ಯೂಟ್ ಹೌಸ್ ಕಟ್ಟಡದ ಅಡಿಗಲ್ಲು ಸಮಾರಂಭ ನೆರವೇರಿಸುವರು.
ಬಳಿಕ ದೇವಗಿರಿ ಯಲ್ಲಾಪುರದ ಹಾವೇರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಹಿಮ್ಸ್) ಆವರಣದಲ್ಲಿ ಹಾವೇರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಉದ್ಘಾಟನೆ ನೆರವೇರಿಸುವರು. ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದು ಮುಖ್ಯಮಂತ್ರಿಯವರ ವಿಶೇಷ ಕರ್ತವ್ಯಾಧಿಕಾರಿ ಕೆ.ಚಿರಂಜೀವಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.