Haveri, Heggeri, Lake, Kasa, 5 K Fine,  
ಹಾವೇರಿ

ಹೆಗ್ಗೇರಿ ಕೆರೆ ಬಳಿ ಕಸ ಸುರಿದವರಿಗೆ 5 ಸಾವಿರ ದಂಡ; ಸ್ವಚ್ಛತೆಯ ಕಡೆಗೆ ಒಂದು ಹೆಜ್ಜೆ ಇಟ್ಟ ಹಾವೇರಿ ನಗರಸಭೆ

ಹಾವೇರಿ: ನಗರದ ಹೊರವಲಯ ಹೆಗ್ಗೇರಿ ಕೆರೆ ಬಳಿ ತ್ಯಾಜ್ಯ ಸುರಿದು ಬೆಂಕಿ ಹಚ್ಚಿದ್ದ ವ್ಯಕ್ತಿಯೊಬ್ಬರಿಗೆ ಹಾವೇರಿ ನಗರಸಭೆ ಪೌರಾಯುಕ್ತರು 5,000 ರೂ. ದಂಡ ವಿಧಿಸಿದ್ದಾರೆ. ಈ ಮೂಲಕ ಸ್ವಚ್ಛತೆಯ ಕಡೆಗೆ ನಗರಸಭೆ ಒಂದು ಹೆಜ್ಜೆ ಮುಂದೆ ಇಟ್ಟಿದೆ.
ಶಿವಯೋಗಿ ಮಾಮ್ಲೆಪಟ್ಟಣಶೆಟ್ಟರ ಎಂಬುವರು ಎಪಿಎಂಸಿ ಆವರಣದ ಕಸ, ತ್ಯಾಜ್ಯವನ್ನು ಮಿನಿ ಲಾರಿಯಲ್ಲಿ ತಂದು ಹೆಗ್ಗೇರಿ ಕೆರೆ ಬಳಿ ಸುರಿದು ಬೆಂಕಿ ಹಚ್ಚಿದ್ದರು. ಇದನ್ನು ಗಮನಿಸಿದ ನಗರಸಭೆ ಸಿಬ್ಬಂದಿ ವಾಹನ ವಶಕ್ಕೆ ಪಡೆದು ನಗರಸಭೆಗೆ ತೆಗೆದುಕೊಂಡು ಹೋಗಿದ್ದರು. ಬಳಿಕ ವಾಹನ ಮಾಲೀಕರು ನಗರಸಭೆಗೆ ಆಗಮಿಸಿ 5,000 ರೂ. ದಂಡ ಪಾವತಿಸಿ ವಾಹನ ಬಿಡಿಸಿಕೊಂಡು ಹೋಗಿದ್ದಾರೆ.
ಜಿಲ್ಲಾಧಿಕಾರಿಗಳು ಹಾಗೂ ನಗರಸಭೆ ಆಡಳಿತಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ನಿರ್ದೇಶನದ ಮೇರೆಗೆ ಹೆಗ್ಗೇರಿ ಕೆರೆ ಬಳಿ ತ್ಯಾಜ್ಯ ಸುರಿಯುತ್ತಿರುವವರ ಮೇಲೆ ನಿಗಾ ಇಡಲಾಗಿದೆ. ಮಂಗಳವಾರ ಕಸ ಸುರಿದು ಬೆಂಕಿ ಹಚ್ಚಿದ್ದ ವ್ಯಕ್ತಿಯೊಬ್ಬರಿಗೆ ಘನತ್ಯಾಜ್ಯ ನಿರ್ವಹಣೆ ನಿಯಮಗಳು- 2026ರ ಅನ್ವಯ 5,000 ರೂ. ದಂಡ ವಿಧಿಸಲಾಗಿದೆ ಎಂದು ನಗರಸಭೆ ಪೌರಾಯುಕ್ತ ಎಚ್.ಕಾಂತರಾಜು ತಿಳಿಸಿದ್ದಾರೆ.