Haveri, Harasura Bannada Matha, Jatre, May 2nd, 
ಹಾವೇರಿ

ಹರಸೂರ ಬಣ್ಣದ ಮಠದ ಜಾತ್ರಾ ಮಹೋತ್ಸವ ಮೇ 2ರಿಂದ 4ರವರೆಗೆ; ಅಭಿನವರುದ್ರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಮಾಹಿತಿ

ಹಾವೇರಿ: ನಗರದ ಯಾಲಕ್ಕಿ ಓಣಿಯ ಹರಸೂರು ಬಣ್ಣದ ಮಠದದಲ್ಲಿ ಮೇ 2ರಿಂದ 4ರವರೆಗೆ ಜಾತ್ರಾ ಮಹೋತ್ಸವ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಶ್ರೀ ಮಠದ ಪೀಠಾಧ್ಯಕ್ಷ ಅಭಿನವರುದ್ರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹರಸೂರು ಬಣ್ಣದ ಮಠದ ಲಿಂ.ಮಲ್ಲಿಕಾರ್ಜುನ ಶಿವಾಚಾರ್ಯ ಶ್ರೀಗಳ ಪುಣ್ಯ ಸ್ಮರಣೋತ್ಸವ ಹಾಗೂ ಪ್ರಸ್ತುತ ಶ್ರೀಗಳ 16ನೇ ವರ್ಷದ ಪಟ್ಟಾಧಿಕಾರ ವರ್ಧಂತಿ ಮಹೋತ್ಸವದ ಜತೆಗೆ ಜನಜಾಗೃತಿ ಭಾವೈಕ್ಯ ಧರ್ಮ ಸಮ್ಮೇಳನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶ್ರೀಮಠದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಕೋರಿದರು.
ಮೇ.2ರಂದು ಬೆಳಗ್ಗೆ 7.30ಕ್ಕೆ ಜಾತ್ರಾಮಹೋತ್ಸವ ನಿಮಿತ್ತ ಗೌರಿಮಠದ ಶಿವಯೋಗಿ ಶಿವಾಚಾರ್ಯರ ಸಮ್ಮುಖದಲ್ಲಿ ಜಗದ್ಗುರು ಪಂಚಾಚಾರ್ಯ ಧ್ವಜಾರೋಹಣ ಜರುಗಲಿದೆ. ಮೇ.3ರ ಬೆಳಗ್ಗೆ 6.30ಕ್ಕೆ ವೀರಮಾಹೇಶ್ವರ ವಟುಗಳಿಗೆ ಶಿವದೀಕ್ಷೆ (ಅಯ್ಯಚಾರ) ಕಾರ್ಯಕ್ರಮ ಜರುಗಲಿದ್ದು, ಸಂಜೆ 6.30ಕ್ಕೆ ಜನ ಜಾಗೃತಿ ಭಾವೈಕ್ಯ ಧರ್ಮ ಸಮಾರಂಭ ನಡೆಯಲಿದೆ. ಹುಕ್ಕೇರಿಮಠದ ಸದಾಶಿವ ಶ್ರೀಗಳು ಸಾನ್ನಿಧ್ಯ ವಹಿಸಲಿದ್ದು, ಗೌರಿಮಠದ ಶಿವಯೋಗಿ ಶಿವಾಚಾರ್ಯರು ಸಮ್ಮುಖ ವಹಿಸಲಿದ್ದಾರೆ. ಶಾಸಕ ರುದ್ರಪ್ಪ ಲಮಾಣಿ ಉದ್ಘಾಟಿಸಲಿದ್ದು, ಮಾಜಿ ಶಾಸಕ ನೆಹರು ಓಲೇಕಾರ, ಎಂ.ಎಂ ಹಿರೇಮಠ, ಸಂಜೀವಕುಮಾರ ನೀರಲಗಿ, ಎಸ್.ಎಫ್. ಎನ್ ಗಾಜೀಗೌಡ್ರ, ಕೊಟ್ರೇಶಪ್ಪ ಬಸೇಗಣ್ಣಿ ಸೇರಿದಂತೆ ಇತರರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ಮೇ.4ರಂದು ಬೆಳಗ್ಗೆ 7ಕ್ಕೆ ಸಂತಾನ ಪ್ರಾಪ್ತಿ, ವಿವಾಹ ಭಾಗ್ಯ, ಸರ್ಪದೋಷ, ಕಾಳಸರ್ಪ ದೋಷ ನಿವಾರಣೆಗಾಗಿ ಸರ್ಪಶಾಂತಿ-ಆಶ್ಲೇಷ ಬಲಿಪೂಜೆ ಹೋಮ ನಡೆಯಲಿದ್ದು, ಆಸಕ್ತರು ಹೆಸರು ನೋಂದಾಯಿಸಬಹುದು. ನಂತರ ಅಭಿನವರುದ್ರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿಗಳ ಪಟ್ಟಾಧಿಕಾರ ವರ್ಧಂತಿ ಮಹೋತ್ಸವ ನಡೆಯಲಿದೆ. ಸಂಜೆ ಜನಜಾಗೃತಿ ಭಾವೈಕ್ಯ ಧರ್ಮ ಸಮಾರಂಭದಲ್ಲಿ ನೆಗಳೂರಿನ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ, ಮಾಜಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಉದ್ಘಾಟಿಸುವರು. ಗವಿಸಿದ್ದಪ್ಪ ದ್ಯಾಮಣ್ಣನವರ, ಪವನಬಹದ್ದೂರ ದೇಸಾಯಿ, ಮಲ್ಲಿಕಾರ್ಜುನ ಕಟ್ಟಿಮನಿ, ವೆಂಕಟೇಶ ನಾರಾಯಣಿ, ಶಶಿಕಲಾ ರಾಮು ಮಾಳಗಿ, ಇತರರು ಭಾಗವಹಿಸುವರು ಎಂದರು.
ಸುದ್ದಿಗೋಷ್ಠಿಯಲ್ಲಿ ಜಾತ್ರಾ ಕಮಿಟಿ ಅಧ್ಯಕ್ಷ ಬಸವರಾಜ ಜಾಬೀನ, ಉಪಾಧ್ಯಕ್ಷ ಮಲ್ಲಿಕಾರ್ಜುನ ಕೆ.ಬಿ., ಜಗದೀಶ ಕನವಳ್ಳಿ, ಮಂಜುನಾಥ ತಾಂಡೂರ, ಶಿವಬಸಪ್ಪ ಚೌಶೆಟ್ಟಿ, ಬಸವರಾಜ ಹಲಗಣ್ಣವರ, ಗುರುಶಾಂತಯ್ಯ ನಡುವಿನಮಠ, ವಿಜಯಕುಮಾರ ಕೂಡ್ಲಪ್ಪನವರ, ಇತರರಿದ್ದರು.