ಹಾವೇರಿ: ಶ್ರೀರಾಮಚಂದ್ರನ ಪರಮ ಭಕ್ತ ಆಂಜನೇಯನ ಜಯಂತಿ ಅಂಗವಾಗಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಶ್ರೀ ಹನುಮ ಮಂದಿರಗಳಲ್ಲಿ ಬುಧವಾರ ಮತ್ತು ಗುರುವಾರ ವಿಶೇಷ ಪೂಜೆ, ಪುನಸ್ಕಾರಗಳು ಅತ್ಯಂತ ಶ್ರದ್ದಾ ಭಕ್ತಿಯಿಂದ ನೆರವೇರಿದವು. ಭಕ್ತರು ಆಂಜನೇಯನ ದರ್ಶನ ಪಡೆದು, ಹನುಮಾನ್ ಚಾಲಿಸ ಪಠಿಸಿ ಭಕ್ತಿ ಮೆರೆದರು.
ನಗರದ ಇತಿಹಾಸ ಪ್ರಸಿದ್ಧ ತೇರುಬೀದಿ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಪಂಚಾಂಗದ ಪ್ರಕಾರ ಬುಧವಾರ ಹನುಮ ಜಯಂತಿ ಆಚರಿಸಲಾಯಿತು. ದವನದ ಹುಣ್ಣಿಮೆ ಹಿನ್ನೆಲೆ ಬೆಳಗ್ಗೆ ಹನುಮ ಜಯಂತ್ಯುತ್ಸವವನ್ನು ಆಚರಿಸಲಾಯಿತು. ಬೆಳಗ್ಗೆ 7.30ರಿಂದ 9 ಗಂಟೆಯವರೆಗೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಅಭಿಷೇಕ, ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ, ಕಂಕಣಧಾರಣೆ, ಮಹಾ ಮಂಗಳಾರತಿ, ಇತರ ಪೂಜೆ ನೆರವೇರಿಸಲಾಯಿತು. ಸಂಜೆ ಅಷ್ಟಾವಧಾನ, ಮಹಾ ಮಂಗಳಾರತಿ ಸೇವೆ ನಡೆಯಿತು.
ಹನುಮಂತ ದೇವರಿಗೆ ದಾಸವಾಳ, ಸುಗಂಧ, ಸೇವಂತಿಗೆ, ಮಲ್ಲಿಗೆ, ಚೆಂಡುಹೂವು ಸೇರಿದಂತೆ ತರಹೇವಾರಿ ಹೂವುಗಳಿಂದ ಹಾಗೂ ಮಾವಿನ ತಳಿರು ತೋರಣಗಳಿಂದ ಪುಷ್ಪಾಲಂಕಾರ ಸೇವೆ ಮಾಡಲಾಯಿತು. ಬಳಿಕ 8 ಕೆ.ಜಿ ಬೆಣ್ಣೆಯಿಂದ ಆಂಜನೇಯ ಮೂರ್ತಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಅರ್ಚಕ ವಿಜಯೇಂದ್ರ ಮಹಾಜನ್ ಕುಟುಂಬಸ್ಥರು, ಗಲಗಲಿ, ಪಾಟೀಲ ಕುಟುಂಬಸ್ಥರು ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು.
ಇಲ್ಲಿನ ರಾಜೇಂದ್ರನಗರದ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಕುಂಕುಮ ಪೂಜೆ ನೆರವೇರಿಸಲಾಯಿತು. ಜತೆಗೆ ಬಾಲ ಆಂಜನೇಯ ಸ್ವಾಮಿ ತೋಟ್ಟಿಲೋತ್ಸವ ಜರುಗಿತು. ಜಿಲ್ಲೆಯ ನಗರ ಹಾಗೂ ಗ್ರಾಮೀಣ ಪ್ರದೇಶದ ಹಲವೆಡೆ ಗುರುವಾರ ಆಂಜನೇಯಸ್ವಾಮಿ ದೇವಸ್ಥಾನಗಳಲ್ಲಿ ಕುಂಕುಮ ಪೂಜೆ, ವೀಳ್ಯೆದೆಲೆ ಪೂಜೆ, ಗೋಪಾಳ ಪೂಜೆ ಸೇರಿದಂತೆ ಇನ್ನಿತರ ವಿಶೇಷ ಪೂಜೆಗಳು ಜರುಗಿದವು. ಕೆಲವಡೆ ಪಲ್ಲಕ್ಕಿ ಉತ್ಸವ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮಗಳು ಜರುಗಿದವು.