petrole bunk, bunch, food dd visit,  
ಹಾವೇರಿ

ಒಂದೆರೆಡು ದಿನಗಳಲ್ಲಿ ಪೆಟ್ರೋಲ್ ಬಂಕ್ ಆರಂಭ; ಹಾನಗಲ್ಲ ತಾಲೂಕಿನ ಹಲವು ಬಂಕ್‌ಗಳಿಗೆ ಆಹಾರ ಇಲಾಖೆ ಡಿಡಿ ಭೇಟಿ, ಪರಿಶೀಲನೆ

ಹಾವೇರಿ: ತೈಲ ಪೂರೈಸುವ ಟ್ಯಾಂಕರ್‌ಗಳ ವಿಳಂಭದಿಂದ ಹಾನಗಲ್ಲ ತಾಲೂಕಿನ ಕೆಲ ಪೆಟ್ರೋಲ್ ಬಂಕ್‌ಗಳು ಬಂದ್ ಆಗಿದ್ದು, ತಾಲೂಕಿನ ವಿವಿಧ ಬಂಕ್‌ಗಳಿಗೆ ಬುಧವಾರ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಉಪನಿರ್ದೇಶಕ ಮಂಜುನಾಥ ಡಿ.ಜೆ. ಭೇಟಿ ನೀಡಿ, ಪರಿಶೀಲಿಸಿದ್ದಾರೆ.
ಜಿಲ್ಲೆಯ ಯಾವುದೇ ಬಂಕ್‌ಗಳಲ್ಲಿ ತೈಲದ ಅಭಾವವಿಲ್ಲ. ಎಲ್ಲ ಕಡೆಯೂ ನಿಗದಿತ ಪ್ರಮಾಣದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಪೂರೈಕೆಯಾಗುತ್ತಿದೆ. ತಾಂತ್ರಿಕ ಕಾರಣದಿಂದ ಕೆಲವೆಡೆ ಟ್ಯಾಂಕರ್ ಪೂರೈಕೆಯಲ್ಲಿ ತಡವಾಗಿದೆ. ಕೆಲವೆಡೆ ಇಂಡೆಂಟ್ ತಡವಾಗಿದ್ದರಿಂದ ಪೂರೈಕೆಯಲ್ಲಿ ವಿಳಂಭವಾಗಿದೆ. ಮಂಗಳವಾರ ರಜೆ ಇದ್ದ ಕಾರಣ ಟ್ಯಾಂಕರ್ ಆಗಮಿಸುವುದು ವಿಳಂಭವಾಗಿತ್ತು. ಕೆಲ ಬಂಕ್‌ಗಳಲ್ಲಿ ತಾಂತ್ರಿಕ ಕಾರಣದಿಂದ ಟ್ಯಾಂಕರ್ ವಿಳಂಭವಾಗಿದೆ. ಕೆಲವೆಡೆ ಬ್ಯಾಂಕ್ ಖಾತೆಗೆ ಹಣ ಜಮೆ ಆಗುವಲ್ಲಿ ತಡವಾಗಿದ್ದರಿಂದ ಬಂದ್ ಆಗಿದ್ದವು. ಒಂದೆರೆಡು ದಿನದಲ್ಲಿ ಎಲ್ಲ ಕಡೆ ಪೆಟ್ರೋಲ್, ಡೀಸೆಲ್ ಲಭ್ಯವಾಗಲಿದೆ ಎಂದು ಆಹಾರ ಇಲಾಖೆ ಡಿಡಿ ಮಂಜುನಾಥ ಡಿ.ಜೆ. ‘ವಿಜಯವಾಣಿ’ಗೆ ತಿಳಿಸಿದರು. ಜಿಲ್ಲೆಯಲ್ಲಿ ಯುದ್ದದ ಎಫೆಕ್ಟ್ ಏನೂ ಆಗಿಲ್ಲ. ಇಂತಹ ಸುಳ್ಳು ಸುದ್ದಿ ಯಾರೂ ನಂಬಬೇಡಿ. ಅಗತ್ಯವಿದ್ದಷ್ಟು ಮಾತ್ರ ತೈಲ ಬಳಸಿಕೊಳ್ಳಿ. ನಾಲ್ಕರ ಕ್ರಾಸ್ ಹಾಗೂ ಗೊಂದಿ ಕ್ರಾಸ್‌ನಲ್ಲಿರುವ ಬಂಕ್‌ನಿಂದ, ತೈಲ ಪೂರೈಕೆದಾರರಿಗೆ ತಾಂತ್ರಿಕ ಕಾರಣದಿಂದ ಹಣ ಪಾವತಿಯಾಗಿಲ್ಲ. ಹಣ ಸಂದಾಯ ಮಾಡದಿದ್ದರಿಂದ, ಕಂಪನಿಯವರು ತೈಲ ಕಳುಹಿಸಿಲ್ಲ. ಸಂಗ್ರಹವಿದ್ದ ತೈಲ ಬೇಗನೇ ಖಾಲಿ ಆಗಿದೆ. ಹೀಗಾಗಿ, ಎರಡೂ ಬಂಕ್‌ಗಳು ಬಂದ್ ಆಗಿದ್ದವು. ಗುರುವಾರ ಆರಂಭವಾಗಲಿವೆ ಎಂದು ತಿಳಿಸಿದರು.
ಸಂಗೂರ, ಆಡೂರ 4 ಬಂಕ್ ಬಂದ್
ಮಂಗಳವಾರ ಹಾನಗಲ್ಲ ತಾಲೂಕಿನ ನಾಲ್ಕರ ಕ್ರಾಸ್, ಗೊಂದಿ ಕ್ರಾಸ್‌ನಲ್ಲಿ ಪೆಟ್ರೋಲ್ ಬಂಕ್ ಆಗಿದ್ದವು ಈ ಕುರಿತು ‘ವಿಜಯವಾಣಿ’ ಏ.15ರಂದು ವರದಿ ಪ್ರಕಟಿಸಿತ್ತು. ಬುಧವಾರ ತಾಲೂಕಿನ ಸಂಗೂರು, ಆಡೂರು ಗ್ರಾಮಗಳ ಬಳಿ ಇರುವ ಮೂರು ಪೆಟ್ರೋಲ್ ಬಂಕ್‌ಗಳು ಬಂದ್ ಆಗಿದ್ದವು. ಬಂಕ್ ಮುಂದೆ ಹಗ್ಗ ಕಟ್ಟಿ ಬಾಗಿಲು ಮುಚ್ಚಲಾಗಿದೆ. ಸ್ಥಳೀಯರು ವಾಹನಗಳಿಗೆ ಪೆಟ್ರೋಲ್, ಡೀಸೆಲ್ ಹಾಕಿಸಲು ಹಾವೇರಿ, ಹಾನಗಲ್ಲ ಪಟ್ಟಣದತ್ತ ತೆರಳುತ್ತಿದ್ದಾರೆ. ಇದರಿಂದ ರೈತರಿಗೂ ಸಮಸ್ಯೆಯಾಗುತ್ತಿದೆ ಎಂದು ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪುರ ತಿಳಿಸಿದರು.
ಸಂಗೂರು, ಆಡೂರು ಬಂಕ್‌ಗಳಲ್ಲಿ ಸೋಮವಾರ ರಾತ್ರಿಯಿಂದಲೇ ತೈಲವಿಲ್ಲ. ಬೇಡಿಕೆ ಸಲ್ಲಿಸಿ ಹಣ ಕೊಟ್ಟರೂ ಟ್ಯಾಂಕರ್ ಬಂದಿಲ್ಲವೆಂದು ಬಂಕ್ ಮಾಲೀಕರೊಬ್ಬರು ದೂರಿದ್ದಾರೆ.