ಹಾವೇರಿ/ ಹಾನಗಲ್ಲ: ಹಾನಗಲ್ಲ ತಾಲೂಕಿನ ಗೊಂದಿ ಕ್ರಾಸ್, ನಾಲ್ಕರ ಕ್ರಾಸ್ ಸೇರಿದಂತೆ ಕೆಲ ಪೆಟ್ರೋಲ್ ಬಂಕ್‌ಗಳಲ್ಲಿ ಪೆಟ್ರೋಲ್, ಡೀಸೆಲ್ ದಾಸ್ತಾನು ಖಾಲಿ ಆಗಿದ್ದರಿಂದ ಬಂಕ್‌ಗಳು ಬಂದ್ ಆಗಿವೆ. ಇದರಿಂದ ವಾಹನ ಸವಾರರರು ಪರದಾಡುವಂತಾಗಿದೆ.
ಹಾನಗಲ್ಲ ತಾಲೂಕಿನ ಗೊಂದಿ ಕ್ರಾಸ್ ಬಳಿ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಎರಡು ದಿನದಿಂದ ಬಂದ್ ಆಗಿದೆ. ಬಂಕ್ ಸುತ್ತ ಕೆಂಪು ಟೇಪ್ ಸುತ್ತಿ ಬಂದ್ ಮಾಡಲಾಗಿತ್ತು. ಬಂಕ್‌ನಲ್ಲಿ ಯುವಕರು ಕ್ರಿಕೆಟ್ ಆಡುತ್ತಿದ್ದ ದೃಶ್ಯ ಮಂಗಳವಾರ ಕಂಡು ಬಂತು. ‘ಭಾನುವಾರ ಡೀಸೆಲ್ ಖಾಲಿ ಆಗಿತ್ತು. ಸೋಮವಾರ ಪೆಟ್ರೋಲ್ ಖಾಲಿ ಆಗಿದೆ. ಹಾಗಾಗಿ, ಬಂದ್ ಮಾಡಲಾಗಿದೆ’ ಎಂದು ಬಂಕ್ ಸಿಬ್ಬಂದಿ ತಿಳಿಸಿದ್ದಾರೆ ಎಂದು ವಾಹನ ಸವಾರ ಗಿರೀಶ ‘ವಿಜಯವಾಣಿ’ಗೆ ತಿಳಿಸಿದರು.
ಹಾನಗಲ್ಲ ತಾಲೂಕು ನಾಲ್ಕರ ಕ್ರಾಸ್ ಬಳಿ ಒಂದು ಬಂಕ್ ಬಂದ್ ಆಗಿವೆ. ಇದರಿಂದ ವಾಹನ ಸವಾರರು ಪರದಾಡುವಂತಾಗಿದೆ. ಯುದ್ದದ ಪರಿಣಾಮವೋ ಅಥವಾ ತಾಂತ್ರಿಕ ಕಾರಣವೋ ಎಂಬ ಕುರಿತು ತಾಲೂಕು ಹಾಗೂ ಜಿಲ್ಲಾಡಳಿತ ಪರಿಶೀಲಿಸಿ, ಮುನ್ನೆಚ್ಚರಿಕೆ ವಹಿಸಬೇಕು. ಸಮಸ್ಯೆ ಉದ್ಬವಿಸುವ ಮುನ್ನವೇ ಅಗತ್ಯ ದಾಸ್ತಾನು ಸಂಗ್ರಹಿಸುವ ವ್ಯವಸ್ಥೆ ಮಾಡಬೇಕು ಎಂಬುದು ಸ್ಥಳೀಯ ವಾಹನ ಸವಾರರ ಆಗ್ರಹವಾಗಿದೆ.
ಹಾನಗಲ್ಲ ತಾಲೂಕಿನಲ್ಲಿ ಪೆಟ್ರೋಲ್ ಬಂಕ್‌ಗಳು ಬಂದ್ ಆಗಿರುವ ಮಾಹಿತಿ ‘ವಿಜಯವಾಣಿ’ ಪತ್ರಿಕೆಯಿಂದ ತಿಳಿದಿದೆ. ಬುಧವಾರ ಗ್ಯಾಸ್ ಏಜೆನ್ಸಿಗಳ ಸಭೆ ಕರೆದಿದ್ದು, ಪೆಟ್ರೋಲ್ ಬಂಕ್‌ಗಳ ಮಾಲೀಕರು, ಅಧಿಕಾರಿಗಳ ಸಭೆಯನ್ನೂ ಕರೆದು ಪರಿಶೀಲಿಸಲಾಗುವುದು.
ಪೆಟ್ರೋಲ್, ಡೀಸೆಲ್ ಸರಬರಾಜಿನಲ್ಲಿ ಯಾವುದೇ ವ್ಯತ್ಯಯ ಆಗಿಲ್ಲ. ಕ್ಯಾನ್, ಬಾಟಲಿಯಲ್ಲಿ ಪೆಟ್ರೋಲ್, ಡೀಸೆಲ್ ಕೊಡದಂತೆ ಕಂಪನಿ ಸೂಚಿಸಿದೆ. ತಾಂತ್ರಿಕ ಕಾರಣದಿಂದ ನಾಲ್ಕರ ಕ್ರಾಸ್‌ನಲ್ಲಿರುವ ನಮ್ಮ ಭಾರತ್ ಪೆಟ್ರೋಲಿಂಯಂ ಪೆಟ್ರೋಲ್ ಬಂಕ್ ಮೂರು ದಿನದಿಂದ ಬಂದ್ ಆಗಿದೆ. ಒಂದೆರೆಡು ದಿನಗಳಲ್ಲಿ ಟ್ಯಾಂಕರ್ ಬರಲಿದೆ.