ಹಾವೇರಿ: ಹಾನಗಲ್ಲ ಸಮೀಪದ ನಾಲ್ಕರ ಕ್ರಾಸ್‌ನಲ್ಲಿ 2 ವರ್ಷದ ಹಿಂದೆ ಮಹಿಳೆಯೊಬ್ಬರ ಮೇಲೆ ನಡೆದ ಗ್ಯಾಂಗ್ ರೇಪ್ ಪ್ರಕರಣದ ಓರ್ವ ಆರೋಪಿಯನ್ನು ಯಾದಗಿರಿ ಜಿಲ್ಲೆಗೆ ಗಡಿಪಾರು ಮಾಡಿ ಸವಣೂರ ಉಪ ವಿಭಾಗಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಅಕ್ಕಿಆಲೂರು ಕಮಾಟಿ ಓಣಿ ನಿವಾಸಿ ಸಮೀವುಲ್ಲಾ ಅಬ್ದುಲವಾಹೀದ ಲಾಲಾನವರ ಗಡಿಪಾರು ಶಿಕ್ಷೆಗೊಳಗಾದ ಆರೋಪಿ. ಸಮೀವುಲ್ಲಾನನ್ನು ಗಡಿಪಾರು ಮಾಡುವಂತೆ ಕೋರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಕಳೆದ ವರ್ಷ ಜೂನ್‌ನಲ್ಲಿ ಸವಣೂರ ಉಪವಿಭಾಗಾಧಿಕಾರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಉಪ ವಿಭಾಗಾಧಿಕಾರಿ ಶುಭಂ ಶುಕ್ಲಾ, ಈತನಿಂದ ಕಾನೂನು ಸುವ್ಯವಸ್ಥೆಗೆ ದಕ್ಕೆ ಉಂಟಾಗುವ ಸಂಭವ ಇರುವ ಅಂಶ ಕಂಡುಬಂದ ಹಿನ್ನೆಲೆಯಲ್ಲಿ ಒಂದು ವರ್ಷ ಯಾದಗಿರಿ ಜಿಲ್ಲೆಗೆ ಗಡಿಪಾರು ಮಾಡಿ ಆದೇಶಿಸಿದ್ದಾರೆ. ಯಾದಗಿರಿಯ ಹುಣಸಗಿ ಪೊಲೀಸ್ ಠಾಣೆಗೆ ಆರೋಪಿ ಸಮೀವುಲ್ಲಾ ಪ್ರತಿದಿನ ಹಾಜರಾಗಿ ಹಾಜರಾತಿ ನಮೂದಿಸಬೇಕು. ಬಾಕಿ ಇರುವ ಪ್ರಕರಣಗಳ ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗಲು ಬರುವಾಗ ಹುಣಸಗಿ ಠಾಣೆಗೆ ಮಾಹಿತಿ ನೀಡಬೇಕು. ಈ ಸಂದರ್ಭದಲ್ಲಿ ಮುದ್ದೇಬಿಹಾಳ, ಹುನಗುಂದ, ಗದಗ, ಹುಬ್ಬಳ್ಳಿ ಮಾರ್ಗದ ಮೂಲಕವೇ ಹಾವೇರಿ ಜಿಲ್ಲೆಗೆ ಪ್ರವೇಶಿಸಬೇಕು ಎಂದು ಎಸಿ ಆದೇಶದಲ್ಲಿ ಷರತ್ತುಗಳನ್ನು ವಿಧಿಸಿದ್ದಾರೆ.
ಕಾನೂನು ಬಾಹಿರ ಕೃತ್ಯದಲ್ಲಿ ಭಾಗಿ...
ಅಕ್ಕಿಆಲೂರ ಸಮೀಪದ ನಾಲ್ಕರ ಕ್ರಾಸ್ ಬಳಿ ಸಮೀವುಲ್ಲಾ ಸೇರಿದಂತೆ 7 ಆರೋಪಿತರು ಮಹಿಳೆಯೊಬ್ಬರ ಮೇಲೆ ಗ್ಯಾಂಗ್‌ರೇಪ್ ಮಾಡಿರುವ ಬಗ್ಗೆ ಹಾನಗಲ್ಲ ಪೊಲೀಸ್ ಠಾಣೆಯಲ್ಲಿ 2024ರ ಜನವರಿ 11ರಂದು ಪ್ರಕರಣ ದಾಖಲಾಗಿತ್ತು. ಪೊಲೀಸರು ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸಿದ್ದರು. ಇತ್ತೀಚೆಗೆ ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು. ಈ ವೇಳೆ ಆರೋಪಿಗಳು ಹಾವೇರಿ ಜಿಲ್ಲಾ ಕಾರಾಗೃಹದಿಂದ ಅಕ್ಕಿಆಲೂರಿನವರೆಗೆ ತೆರೆದ ಜೀಪಿನಲ್ಲಿ ಕೇಕೆ ಹಾಕುತ್ತ ಮೆರವಣಿಗೆ ಮೂಲಕ ತೆರಳಿದ್ದು ದೊಡ್ಡ ಸುದ್ದಿಯಾಗಿತ್ತು. ಅಲ್ಲದೇ ಪ್ರಕರಣದ ಸಾಕ್ಷಿದಾರರಿಗೆ ಜೀವ ಬೆದರಿಕೆ ಒಡ್ಡುವ ರೀತಿ ವರ್ತಿಸಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದರು.
ಆರೋಪಿ ಸಮೀವುಲ್ಲಾ ವಿರುದ್ಧ ಹುಡುಗಿಯರನ್ನು ಚುಡಾಯಿಸುವುದು, ಹುಡುಗಿಯರ ಅಪಹರಣ, ಗಲಭೆಗೆ ಪ್ರಚೋದನೆ ನೀಡುವುದು ಸೇರಿದಂತೆ ಹಲವು ಆರೋಪಗಳಿವೆ. ಈತನ ವಿರುದ್ಧ ಮೂರು ಪ್ರಕರಣ ದಾಖಲಾಗಿವೆ. ಪದೇಪದೆ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿ ಯುವಕರನ್ನು ಹಾಳು ಮಾಡುತ್ತಿದ್ದ ಎಂದು ಪೊಲೀಸರು ದೂರಿದ್ದರು. ಈ ಕುರಿತು ವಿಚಾರಣೆ ನಡೆಸಿದ ಸವಣೂರು ಎಸಿ ಶುಭಂ ಶುಕ್ಲಾ ಆರೋಪಿ ಸಮಿವುಲ್ಲಾಗೆ ಗಡಿಪಾರು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.