anganawadi, workers, helpers, protest, 
ಹಾವೇರಿ

ಸರ್ಕಾರಕ್ಕೆ ಸೀರೆ ವಾಪಸ್ ಕೊಡುವ ಅಭಿಯಾನ; ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಸಂಘದ ಘೋಷಣೆ

ಹಾವೇರಿ: ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಗೌರವ ಧನ ಹೆಚ್ಚಳ ಮಾಡುವ ಬದಲಾಗಿ, ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಕೇವಲ ಸೀರೆ ಕೊಟ್ಟು ಅಪಮಾನ ಮಾಡಿದೆ. ಇದನ್ನು ಖಂಡಿಸಿ ಸೀರೆ ವಾಪಸ್ ಕೊಡುವ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಅಭಿಯಾನ ನಡೆಸಲಾಗುವುದು ಎಂದು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಸಂಘದ ಪ್ರಧಾನ ಕಾರ್ಯದರ್ಶಿ ಸುನಂದಮ್ಮ ರೇವಣಕರ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಅಂಗನವಾಡಿ ಕಾರ್ಯಕರ್ತೆಯರಿಗೆ 15,000 ರೂ. ಹಾಗೂ ಸಹಾಯಕಿಯರಿಗೆ 10,000 ರೂ. ಕನಿಷ್ಠ ಗೌರವ ಧನ ನೀಡುವುದಾಗಿ ಪ್ರಣಾಳಿಕೆಯಲ್ಲಿ ಘೋಷಿಸಲಾಗಿತ್ತು. ಆದರೆ, ಕಾಂಗ್ರೆಸ್ ಸರ್ಕಾರ ಕೊಟ್ಟ ಮಾತು ತಪ್ಪಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿ ಬಜೆಟ್‌ನಲ್ಲೂ ಕನಿಷ್ಠ ಗೌರವ ಧನ ನೀಡುವ ಭರವಸೆಯಿಂದ ಕಾಯುತ್ತಿದ್ದೆವು. ಈ ಬಾರಿಯ ಬಜೆಟ್‌ನಲ್ಲೂ ನಮಗೆ ನ್ಯಾಯ ಸಿಕ್ಕಿಲ್ಲ. ಎಲ್ಲರ ಬಳಿ ಈಗಾಗಲೇ ಸೀರೆಗಳಿವೆ. ಯಾರೊಬ್ಬರೂ ಸೀರೆ ಕೊಡಿ ಎಂದು ಕೇಳಿಲ್ಲ. ಎಲ್ಲರೂ ಕನಿಷ್ಠ ಗೌರವ ಧನ ನೀಡುವಂತೆ ಕೇಳಿದ್ದರು. ಆದರೆ, ಕಾಂಗ್ರೆಸ್ ಸರ್ಕಾರ ಈಗ ಪುನಃ ಸೀರೆಗಳನ್ನು ನೀಡಿದೆ ಎಂದು ಹೇಳಿದರು.
ಮುಖಂಡ ಹನುಮಂತಪ್ಪ ಕಬ್ಬಾರ ಮಾತನಾಡಿ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು, ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಸರ್ಕಾರದ ಹಲವು ಕೆಲಸಗಳನ್ನು ಮಾಡುತ್ತಿದ್ದಾರೆ. ಈಗ ಅವರನ್ನು ಬಿಎಲ್‌ಒ ಕೆಲಸಕ್ಕೂ ನಿಯೋಜಿಸಲಾಗುತ್ತಿದೆ. ಹೀಗಾಗಿ, ಕನಿಷ್ಠ ವೇತನ ಸಿಗಲೇ ಬೇಕು. ಬಿಎಲ್‌ಒ ಕೆಲಸದಿಂದಲೂ ಮುಕ್ತಿ ನೀಡಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಹನುಮಂತಪ್ಪ ಕಾಡಪ್ಪನವರ, ಹನುಮಂತಪ್ಪ ಮೂಲಿಮನಿ, ಪ್ರೇಮಾ ಬೂದಪ್ಪನವರ ಪತ್ರಿಕಾಗೋಷ್ಠಿಯಲ್ಲಿದ್ದರು.
ಡಿಸಿ ಕಚೇರಿ ಎದುರು ಪ್ರತಿಭಟನೆ
ಕನಿಷ್ಠ ಗೌರವ ಧನಕ್ಕೆ ಆಗ್ರಹಿಸಿ ರಾಜ್ಯವ್ಯಾಪಿ ಹೋರಾಟ ಆರಂಭಿಸಲು ರಾಜ್ಯ ಸಮಿತಿ ತೀರ್ಮಾನ ಕೈಗೊಂಡಿದೆ. ಸೀರೆಗಳನ್ನು ವಾಪಸ್ ಕೊಡುವ ಮೂಲಕ ಅಭಿಯಾನದ ರೂಪದಲ್ಲಿ ಹೋರಾಟ ನಡೆಸಲಾಗುವುದು. ಪ್ರತಿ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿಗಳ ಎದುರು ಸೀರೆಗಳನ್ನು ಇಟ್ಟು ಪ್ರತಿಭಟನೆ ನಡೆಸಲಾಗುವುದು ಎಂದು ಮುಖಂಡ ಹನುಮಂತಪ್ಪ ಕಬ್ಬಾರ ಹೇಳಿದರು.