ಹಾವೇರಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಸೇರಿದಂತೆ ಜಿಲ್ಲೆಯ ಎಲ್ಲ ಸರ್ಕಾರಿ ಆಸ್ಪತ್ರೆಗಳ ವೈದ್ಯರು ಹಾಗೂ ನೌಕರರು ಮಾ.11ರಿಂದ 15ರವರೆಗೆ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಈ ವೇಳೆ ಹೊರರೋಗಿಗಳ ಚಿಕಿತ್ಸೆ (ಒಪಿಡಿ) ಸ್ಥಗಿತಗೊಳಿಸಿ, ತುರ್ತು ಸೇವೆ ಮಾತ್ರ ನೀಡುವ ಎಚ್ಚರಿಕೆ ನೀಡಿದ್ದಾರೆ.
ರಾಜ್ಯದ ಸರ್ಕಾರಿ ಆಸ್ಪತ್ರೆಗಳ ವೈದ್ಯರು, ಅಧಿಕಾರಿಗಳು, ನೌಕರರು ಹಾಗೂ ಸಿಬ್ಬಂದಿ ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಬೇಕು. ಮುಂಬಡ್ತಿ, ವೇತನ ಪಾವತಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ರಾಜ್ಯದಾದ್ಯಂತ ಎರಡು ಹಂತದ ಪ್ರತಿಭಟನೆ ನಡೆಸಲು ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ನಿರ್ಧರಿಸಿದೆ. ಈ ಅವಧಿಯಲ್ಲಿ ಎಲ್ಲ ಸರ್ಕಾರಿ ಆಸ್ಪತ್ರೆಗಳ ವೈದ್ಯರು, ಸಿಬ್ಬಂದಿ ಕೈಗೆ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ಆರಂಭಿಸಲಿದ್ದಾರೆ. ಈ ದಿನದಂದು, ಹೊರರೋಗಿಗಳ ಚಿಕಿತ್ಸೆ ಸ್ಥಗಿತಗೊಳಿಸಲಾಗುವುದು. ಕೇವಲ ತುರ್ತು ಸೇವೆಗಳನ್ನು ಮಾತ್ರ ನಿರ್ವಹಿಸಲಾಗುವುದು.
ಮಾ.16ರಿಂದ ಬೇಡಿಕೆ ಈಡೇರುವವರೆಗೂ ಎರಡನೇ ಹಂತದ ಪ್ರತಿಭಟನೆ ಶುರುವಾಗಲಿದೆ. ಎಲ್ಲ ಸರ್ಕಾರಿ ಆಸ್ಪತ್ರೆಯ ವೈದ್ಯರು, ಅಧಿಕಾರಿ, ನೌಕರರು ಹಾಗೂ ಸಿಬ್ಬಂದಿ ಕೆಲಸಕ್ಕೆ ಗೈರಾಗಲಿದ್ದಾರೆ. ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲಿದ್ದಾರೆ. ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ, ರಾಜ್ಯ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ನೌಕರರ ಕೇಂದ್ರ ಸಂಘ ಹಾಗೂ ಇತರೆ ವೃಂದಗಳ ಸಂಘಟನೆಗಳ ಸಹಯೋಗದಲ್ಲಿ ಈ ಪ್ರತಿಭಟನೆಗೆ ಕರೆ ನೀಡಲಾಗಿದೆ ಎಂದು ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಚನ್ನಬಸಯ್ಯ ವಿರಕ್ತಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸರ್ಕಾರಿ ಆಸ್ಪತ್ರೆಗಳಿಗೆ ಕಾಲಕಾಲಕ್ಕೆ ಸಮರ್ಪಕವಾಗಿ ಔಷಧಗಳನ್ನು ಪೂರೈಸಬೇಕು. ವೃಂದ ಮತ್ತು ನೇಮಕಾತಿ ನಿಯಮಗಳನ್ನು ಪ್ರತಿ 3 ವರ್ಷಕ್ಕೊಮ್ಮೆ ತಿದ್ದುಪಡಿ ಮಾಡಬೇಕು. ಎಲ್ಲ ವೃಂದದ ಜೇಷ್ಠತಾ ಪಟ್ಟಿಯನ್ನು ಕಾಲ ಕಾಲಕ್ಕೆ ಪ್ರಕಟಿಸಬೇಕು. ಎಲ್ಲ ವೃಂದದ ಅಧಿಕಾರಿನೌಕರರಿಗೆ ಐದು ವರ್ಷಗಳಿಂದ ಮುಂಬಡ್ತಿ ನೀಡಿಲ್ಲ. ಕೂಡಲೇ ಮುಂಬಡ್ತಿ ನೀಡಬೇಕು ಎಂದು ವೈದ್ಯರು, ನೌಕರರು ಒತ್ತಾಯಿಸುತ್ತಿದ್ದಾರೆ.
ಗುತ್ತಿಗೆ ವೈದ್ಯರು, ನೌಕರರು ಹಾಗೂ ಎಚ್‌ಎಚ್‌ಎಂ ಗುತ್ತಿಗೆ ನೌಕರರಿಗೆ ಸೇವಾ ಭದ್ರತೆ ಒದಗಿಸಬೇಕು. ಕಾಲ ಕಾಲಕ್ಕೆ ವೇತನ ಹೆಚ್ಚಳ ಮಾಡಿ, ನಿಗದಿತ ದಿನದೊಳಗೆ ಪಾವತಿಸಬೇಕು. ಅವೈಜ್ಞಾನಿಕ ಕೌನ್ಸೆಲಿಂಗ್ ಪ್ರಕ್ರಿಯೆ ಸರಿಪಡಿಸಬೇಕು. ವೈದ್ಯಕೀಯ ಶಿಕ್ಷಣ ಇಲಾಖೆಯ ಸ್ವಾಯತ್ತ ಸಂಸ್ಥೆಗಳಲ್ಲಿ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ, ಮಹಾನಗರ ಪಾಲಿಕೆ, ನಗರ ಪಾಲಿಕೆಗಳಲ್ಲಿ ಮಂಜೂರಾಗಿರುವ ಆರೋಗ್ಯ ಇಲಾಖೆಯ ಹುದ್ದೆಗಳಿಗೆ ವೈದ್ಯರು ಹಾಗೂ ಅಧಿಕಾರಿಗಳನ್ನಷ್ಟೇ ನಿಯೋಜಿಸಬೇಕು. ಇಲಾಖೆಯಲ್ಲಿ ಖಾಲಿ ಇರುವ ವೈದ್ಯರು, ಅರೇ ವೈದ್ಯಕೀಯ ಹಾಗೂ ಇತರೆ ವೃಂದದ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ.