Haveri, Govt, Employees, Pratibha Puraskara,
ಹಾವೇರಿ: ಎಲ್ಲ ಜನರಿಗೂ ಹುಟ್ಟಿನಿಂದ ಸಾವಿನವರೆಗೂ ಒಂದಿಲ್ಲ ಒಂದು ರೀತಿಯಲ್ಲಿ ಸರ್ಕಾರಿ ನೌಕರರ ಸೇವೆ ಅಗತ್ಯವಾಗಿ ಬೇಕಾಗುತ್ತದೆ. ಅಕ್ಷರ ಬಾರದವರು, ಬಸವರು, ನಿರ್ಗತಿಕರು, ಕಾರ್ಮಿಕರ ಸೇವೆಗೆ ನಮ್ಮೆಲ್ಲರ ಸರ್ಕಾರಿ ಸೇವೆ ಮುಡಿಪಾಗಿಡೋಣ ಎಂದು ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಕಾರ್ಯದರ್ಶಿ ರವಿ ಡಿ. ಚನ್ನಣ್ಣನವರ ಕರೆ ನೀಡಿದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಇಲ್ಲಿನ ಯತ್ತಿನಹಳ್ಳಿಯ ಸಾಯಿ ಪರಮೇಶ್ವರ ಗ್ರಾಂಡ್ ಕನ್ವೆನ್ಷನ್ ಹಾಲ್‌ನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಹಾವೇರಿ, ಗದಗ ಹಾಗೂ ಧಾರವಾಡ ಜಿಲ್ಲೆಗಳ ರಾಜ್ಯ ಸರ್ಕಾರಿ ನೌಕರರ ಮಕ್ಕಳ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ರಾಜ್ಯದಲ್ಲಿ 7 ಕೋಟಿ ಜನರಿಗೆ 5 ಲಕ್ಷ ಸರ್ಕಾರಿ ನೌಕರರು ಸೇವೆ ಸಲ್ಲಿಸುತ್ತಿದ್ದೇವೆ. ಒಬ್ಬ ಐಎಎಸ್, ಐಪಿಎಸ್ ಅಧಿಕಾರಿ ಒಬ್ಬ ಶಾಶ್ವತ ಕ್ಯಾಬಿನೇಟ್ ದರ್ಜೆಯ ಸಚಿವರಿಗೆ ಸಮ ಇದ್ದಂತೆ. ಒಬ್ಬ ಅಧಿಕಾರಿ ಮನಸು ಮಾಡಿದರೆ ಹಲವು ಮಹತ್ವದ ಬದಲಾವಣೆಗಳನ್ನು ಮಾಡಬಹುದು ಎಂಬುದಕ್ಕೆ ದಿ.ಮಧುಕರ ಶೆಟ್ಟಿ, ಹರ್ಷಗುಪ್ತಾ ಅವರಂತಹ ಅಧಿಕಾರಿಗಳು ಸಾಕ್ಷಿಯಾಗಿದ್ದಾರೆ. ಬೆಳಗಾವಿಯಲ್ಲಿ ನಾನು ಕೆಲಸ ಮಾಡುವಾಗ ಒಬ್ಬ ಕಾನ್ಸ್‌ಟೇಬಲ್ ಇಡೀ ಗ್ರಾಮವನ್ನು ದುಶ್ಚಟಗಳಿಂದ ಬಿಡಿಸಿದ್ದನ್ನು ನೋಡಿದ್ದೇನೆ. ಹೀಗೆ ಪ್ರತಿಯೊಬ್ಬ ಸರ್ಕಾರಿ ಅಧಿಕಾರಿ ಹಾಗೂ ನೌಕರರು ಜನಸೇವೆಯಲ್ಲಿ ಸಾರ್ಥಕತೆ ಕಂಡರೆ ತಮ್ಮ ಜೀವನವೂ ಸಾರ್ಥಕವಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಲರೂ ಕರ್ತವ್ಯ ಪ್ರಜ್ಞೆ ಮೆರೆಯೋಣ ಎಂದು ಸಲಹೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿ, ರಾಜ್ಯ ಸರ್ಕಾರಿ ನೌಕರರ ಸಂಘ ಕರ್ನಾಟಕದ ಸಾಂಸ್ಕೃತಿಕ, ಆರ್ಥಿಕ, ಆಡಳಿತಾತ್ಮಕ ಅವಿಭಾಜ್ಯ ಅಂಗವಾಗಿದೆ. ಸರ್ಕಾರದವರು ಪೇಪರ್‌ನಲ್ಲಿ ಆದೇಶ ಮಾಡುವ ಕಾರ್ಯವನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಅಧಿಕಾರಿಗಳ ಪಾತ್ರ ಮಹತ್ವದ್ದಾಗಿದೆ. ದೇಶವನ್ನು ಕಟ್ಟುವ ಕೆಲಸವನ್ನು ಅಧಿಕಾರಿಗಳು ಮಾಡುತ್ತಾರೆ ಎಂದರು.
ವಿಧಾನಸಭೆ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಮಾತನಾಡಿ, ಅಧಿಕಾರಿಗಳ ಮಕ್ಕಳು ಯಾವತ್ತಿಗೂ ಜಾಣರಾಗಿರುತ್ತಾರೆ. ಜಾಣರನ್ನು ಸನ್ಮಾನಿಸುವುದಕ್ಕಿಂತ ಬಡವರ, ರೈತರ, ಕಾರ್ಮಿಕರ ಮಕ್ಕಳಿಗೆ ಹೆಚ್ಚಿನ ಒತ್ತು ನೀಡಿ ಗೌರವಿಸಿದರೆ, ರಾಷ್ಟ್ರದ ಭವಿಷ್ಯ ಸುಧಾರಣೆ ಆಗುತ್ತದೆ. ಮಕ್ಕಳಿಗೆ ಓದು ಓದು ಎಂದು ಒತ್ತಡ ಹಾಕದೆ, ಇಷ್ಟ ಪಟ್ಟು ಪ್ರೀತಿಯಿಂದ ಓದುವ ಹಾಗೆ ಪ್ರೇರೇಪಿಸಬೇಕು. ಮಕ್ಕಳಲ್ಲಿ ಪುಸ್ತಕದ ಜ್ಞಾನಕ್ಕಿಂತ, ಸಾಮಾನ್ಯ ಜ್ಞಾನವನ್ನು ಬೆಳೆಸಬೇಕು. ಜನರ ಸೇವೆ ಮಾಡುವ ಅವಕಾಶ ನಿಮಗೆ ಸಿಕ್ಕಿದ್ದು, ಪ್ರಾಮಾಣಿಕ ಹಾಗೂ ನಿಷ್ಠೆಯಿಂದ ಕೆಲಸ ಮಾಡಬೇಕು ಎಂದರು.
ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಹಾವೇರಿ, ಗದಗ ಹಾಗೂ ಧಾರವಾಡ ಜಿಲ್ಲೆಗಳ ಸರ್ಕಾರಿ ನೌಕರರ 687 ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಸಮಾರಂಭದಲ್ಲಿ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ, ಸರ್ಕಾರಿ ನೌಕರರ ಸಂಘದ ಹಾವೇರಿ ಜಿಲ್ಲಾಧ್ಯಕ್ಷ ಮಲ್ಲೇಶ ಕರಿಗಾರ, ರಾಜ್ಯ ಉಪಾಧ್ಯಕ್ಷ ಎಸ್.ಎಫ್.ಸಿದ್ದನಗೌಡರ, ಗದಗ ಜಿಲ್ಲಾಧ್ಯಕ್ಷ ಡಾ.ಬಸವರಾಜ ಬಳ್ಳಾರಿ, ಜಿಲ್ಲಾ ಕಾರ್ಯದರ್ಶಿ ಜಿ.ಎಸ್.ಪಾಟೀಲ, ದಾವಲಸಾಬ ಕಮಡೋಳ, ವಿವಿಧ ಇಲಾಖೆಗಳ ಅಧಿಕಾರಿಗಳು, ಮಕ್ಕಳು ಉಪಸ್ಥಿತರಿದ್ದರು.
"
ವಿದ್ಯಾರ್ಥಿಗಳು, ಪಾಲಕರು ತಮ್ಮ ಜೀವನದಲ್ಲಿ ಸಾಕಷ್ಟು ಕನಸುಗಳನ್ನು ಕಟ್ಟಿಕೊಂಡಿರುತ್ತಾರೆ. ಸರ್ಕಾರಿ ನೌಕರರ ಮಕ್ಕಳು ನಿರಂತರ, ಪರಿಶ್ರಮದಿಂದ ಉತ್ತಮ ಅಂಕಗಳನ್ನು ಪಡೆದಿರುವುದು ಹೆಮ್ಮೆಯ ವಿಚಾರ. ಸಮಾಜದಲ್ಲಿ ಕೆಟ್ಟ ಚಿಂತನೆಗಳಿಂದ ದೂರವಿದ್ದು, ಸ್ವಾಭಿಮಾನದಿಂದ ಯಶಸ್ಸು ಸಾಧಿಸಿ, ಇತರರಿಗೆ ಮಾದರಿ ಆಗಬೇಕು.
— ಸಿ.ಎಸ್.ಷಡಾಕ್ಷರಿ, ಅಧ್ಯಕ್ಷ, ರಾಜ್ಯ ಸರ್ಕಾರಿ ನೌಕರರ ಸಂಘ
"
ಸರ್ಕಾರದ ಜತೆಗೆ ಜನರ ಸಂಬಂಧ ಅತ್ಯಂತ ಪ್ರೀತಿ, ವಿಶ್ವಾಸ, ಸೌಹಾರ್ದತೆಯಿಂದ ಇರಬೇಕು. ರಾಜ್ಯ ಆಳುವವರು, ಆಡಳಿತ ನಡೆಸುವರು ಜನರಿಗೆ ಸಿಗುವ ಯೋಜನೆಗಳನ್ನು ಸರಳೀಕರಣಗೊಳಿಸಬೇಕು. ಸರ್ಕಾರಿ ಅಧಿಕಾರಿಗಳು, ನೌಕರರು ಜನರ ಪರವಾಗಿ ಕಾರ್ಯ ನಿರ್ವಹಿಸಿದರೆ ನಾಡು ಸುಭಿಕ್ಷೆಯಾಗಿ ಇರುತ್ತದೆ.
— ಬಸವರಾಜ ಬೊಮ್ಮಾಯಿ, ಸಂಸದ