Haveri, Govt, Employees, Association, Memorandum, to Minister,
ಹಾವೇರಿ: ಜಿಲ್ಲೆಯಲ್ಲಿ 23 ಸಾವಿರ ರಾಜ್ಯ ಸರ್ಕಾರಿ ನೌಕರರು ಸೇವೆ ಸಲ್ಲಿಸುತ್ತಿದ್ದು, ಸರ್ಕಾರಿ ನೌಕರರ ಅನುಕೂಲಕ್ಕಾಗಿ ಜಿಲ್ಲಾ ಕೇಂದ್ರ ಹಾವೇರಿ ನಗರದಲ್ಲಿ ಸುಸಜ್ಜಿತ ಕ್ವಾರ್ಟರ್ಸ್, ಕಚೇರಿಗೆ ನಿವೇಶನ ಮಂಜೂರು ಮಾಡಿ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಅವರಿಗೆ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದಿಂದ ನಗರದಲ್ಲಿ ಭಾನುವಾರ ಮನವಿ ಪತ್ರ ಸಲ್ಲಿಸಲಾಯಿತು.
ಸಂಘದ ಜಿಲ್ಲಾಧ್ಯಕ್ಷ ಮಲ್ಲೇಶ ಕರಿಗಾರ ಮಾತನಾಡಿ, ಸರ್ಕಾರಿ ನೌಕರರು ವಿವಿಧ ಕಾರ್ಯದ ನಿಮಿತ್ತ ಜಿಲ್ಲಾ ಕೇಂದ್ರಕ್ಕೆ ಆಗಾಗ ಬೇಟಿ ನೀಡುತ್ತಿರುತ್ತಾರೆ. ಜಿಲ್ಲೆಯ ರಾಜ್ಯ ಸರ್ಕಾರಿ ನೌಕರರಿಗೆ ಜಿಲ್ಲಾ ಕೇಂದ್ರದಲ್ಲಿ ಯಾವುದೇ ಸುಸಜ್ಜಿತ ನಿವೇಶನ, ಕಚೇರಿ ಇಲ್ಲ. ಜಿಲ್ಲೆಯ ಎಲ್ಲ ವರ್ಗದ ಸರ್ಕಾರಿ ನೌಕರರ ಹಿತದೃಷ್ಟಿಯಿಂದ ನಗರದ ನಿವೇಶನಗಳನ್ನು ಹಾಗೂ ಖುಲ್ಲಾ ಜಾಗೆಯನ್ನು ಸರ್ಕಾರಿ ನೌಕರರ ವಸತಿ ಗೃಹನಿರ್ಮಾಣ, ಕಚೇರಿ ಹಾಗೂ ಸಮುದಾಯ ಭವನ ನಿರ್ಮಾಣಕ್ಕೆ ಮಂಜೂರು ಮಾಡಿ ಎಂದರು.
ಲೋಕೋಪಯೋಗಿ ಇಲಾಖೆಯ ಅಧೀನದಲ್ಲಿ ಇರುವ ಶಿಥಿಲಾವಸ್ಥೆಯ ವಸತಿಗೃಹ/ ಖಾಲಿ ಜಾಗೆಯನ್ನು ಸರ್ಕಾರಿ ನೌಕರರ ಸಂಘಕ್ಕೆ ಮಂಜೂರು ಅಥವಾ ಗುತ್ತಿಗೆ ಆಧಾರದ ಮೇಲೆ ಸರ್ಕಾರದ ಷರತ್ತು ಹಾಗೂ ನಿಬಂಧನೆಗಳನ್ನು ಒಳಪಟ್ಟು ನೀಡುವಂತೆ ಮನವಿ ಮಾಡಿದರು.
ಸಂಘದ ಕಾರ್ಯದರ್ಶಿ ಜಿ.ಎಸ್.ಪಾಟೀಲ, ಪದಾಧಿಕಾರಿಗಳಾದ ಸಂತೋಷ ಭಜಂತ್ರಿ, ಶಿವಾನಂದ ಕಾಕೋಳ, ಅನ್ವರ್ ಕೂಲಂಬಿ, ಇತರರಿದ್ದರು.