Haveri, Gourri matha, Swamiji, School,  
ಹಾವೇರಿ

ಸಾಧನೆ ಮಾಡದೆ ಸತ್ತರೆ ಸಾವಿಗೆ ಅವಮಾನ; ಗೌರಿಮಠದ ಸ್ವಾಮೀಜಿ ಹೇಳಿಕೆ

ಹಾವೇರಿ: ಮನುಷ್ಯನಾಗಿ ಹುಟ್ಟಿದ ಮೇಲೆ ಪ್ರತಿಯೊಬ್ಬರೂ ಸಾಧನೆ ಮಾಡಬೇಕು. ಸಾಧನೆ ಮಾಡದೆ ಸತ್ತರೆ ಸಾವಿಗೆ ಅವಮಾನ. ಸಾಧನೆಗೆ ಕಠಿಣ ಪರಿಶ್ರಮ, ಶ್ರದ್ದೆ, ಏಕಾಗ್ರತೆ ಮುಖ್ಯ ಎಂದು ಗೌರಿಮಠದ ಶ್ರೀ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನಗರದ ಗೌರಿಮಠದಲ್ಲಿ ಇತ್ತೀಚೆಗೆ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಮಕ್ಕಳು ಚನ್ನಾಗಿ ಅಧ್ಯಯನ ಮಾಡಿ ಉತ್ತಮ ಫಲಿತಾಂಶ ಪಡೆದಾಗ ಶಾಲೆಗೆ, ಪಾಲಕರಿಗೆ ಹೆಮ್ಮೆ ಪಡುವ ವಿಷಯವಾಗುತ್ತದೆ. ಅನಗತ್ಯ ವಿಚಾರಗಳಿಗೆ ಕಿವಿಗೊಡದೇ ಸಾಧನೆಯತ್ತ ಗಮನಹರಿಸಿ ಎಂದು ಕಿವಿಮಾತು ಹೇಳಿದರು.
ಪ್ರಸಕ್ತ ವರ್ಷ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ಗೌರಿಮಠ ಶಾಲೆಯ ಹಳೆಯ ವಿದ್ಯಾರ್ಥಿಗಳಾದ ಸೌಮ್ಯ ಹಿರೇಮಠ ಹಾಗೂ ನಾಜಿರಿನ್ ನೆಗಳೂರ ಅವರನ್ನು ಶ್ರೀಗಳು ಸನ್ಮಾನಿಸಿದರು.
ಮುಖ್ಯೋಪಾಧ್ಯಾಯ ಶಂಕರ ಅಕ್ಕಸಾಲಿ ಹಾಗೂ ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ.ಗಂಗಯ್ಯ ಕುಲಕರ್ಣಿ ಮಾತನಾಡಿದರು.
ಪ್ರಭುಲಿಂಗಸ್ವಾಮಿ ಹಿರೇಮಠ, ಶಿಕ್ಷಕ ಮಹಾಂತೇಶ ಸಂಗೂರ ಲಕ್ಷ್ಮೀ ಪಿ. ಇತರರಿದ್ದರು.