Haveri, Gouri Matha, Swamiji, Mallikarjun School, Aksharabhyasa,  
ಹಾವೇರಿ

ವಿದ್ಯೆ ಸರ್ವಶ್ರೇಷ್ಠವಾದ ಸಂಪತ್ತು; ಮಲ್ಲಿಕಾರ್ಜುನ ಶಾಲೆಯ ಅಕ್ಷರಾಭ್ಯಾಸ ಸಮಾರಂಭದಲ್ಲಿ ಗೌರಿಮಠದ ಶ್ರೀಗಳ ಹೇಳಿಕೆ

ಹಾವೇರಿ: ವಿದ್ಯೆಯು ಕಳ್ಳರಿಂದ ಕದಿಯಲ್ಪಡುವುದಿಲ್ಲ, ಅಣ್ಣ-ತಮ್ಮಂದಿರು ಹಾಗೂ ಅಕ್ಕ-ತಂಗಿಯರಲ್ಲಿ ಹಂಚಲ್ಪಡುವುದಿಲ್ಲ. ಬಳಸಿದಂತೆ ವೃದ್ದಿಯಾಗುತ್ತದೆ. ತೆರಿಗೆ ರಹಿತ ಸಂಪತ್ತು ಯಾವುದಾದರೂ ಇದ್ದರೆ ಅದು ವಿದ್ಯೆ ಮಾತ್ರ. ಆದ್ದರಿಂದ ವಿದ್ಯೆಯು ಸರ್ವ ಶ್ರೇಷ್ಠ ಸಂಪತ್ತು. ಅಂತಹ ವಿದ್ಯೆಯನ್ನು ಪಾಲಕರು ತಮ್ಮ ಮಕ್ಕಳಿಗೆ ಕೊಡಿಸಬೇಕು ಎಂದು ಗೌರಿಮಠದ ಶ್ರೀ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನಗರದ ಗೌರಿಮಠದ ಶ್ರೀ ಮಲ್ಲಿಕಾರ್ಜುನ ಆಂಗ್ಲ -ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಅಕ್ಷರಾಭ್ಯಾಸ ಹಾಗೂ ವಿದ್ಯಾರಂಭ ಮತ್ತು ಸರಸ್ವತಿ ಪೂಜಾ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಭಾರತೀಯ ಸಂಸ್ಕೃತಿಯಲ್ಲಿ ಸಂಸ್ಕಾರಕ್ಕೆ ಬಹಳ ಮಹತ್ವವಿದೆ. ಸಂಸ್ಕಾರದಿಂದ ವ್ಯಕ್ತಿಗೆ ಅಥವಾ ವಸ್ತುವಿಗೆ ಶ್ರೇಷ್ಠತೆ ಬರುತ್ತದೆ. ಬತ್ತಕ್ಕೆ ಸಂಸ್ಕಾರ ಕೊಟ್ಟರೆ ಅಕ್ಕಿಯಾಗುತ್ತದೆ, ಅಕ್ಕಿಗೆ ಸಂಸ್ಕಾರ ಕೊಟ್ಟರೆ ಅನ್ನವಾಗುತ್ತದೆ. ಅನ್ನಕ್ಕೆ ಸಂಸ್ಕಾರ ಕೊಟ್ಟರೆ ಪ್ರಸಾದವಾಗುತ್ತದೆ. ಪ್ರಸಾದ ಸ್ವೀಕರಿಸಿದರೆ ಮನಸ್ಸು ಪ್ರಸನ್ನವಾಗುತ್ತದೆ. ವಿದ್ಯೆಯು ರೂಪವನ್ನು, ಭೋಗ ಯಶಸ್ಸನ್ನು ಕರುಣಿಸುತ್ತದೆ. ಅದು ಗುಪ್ತ ಧನವಿದ್ದಂತೆ ಆದ್ದರಿಂದ ವಿದ್ಯೆಯು ಗುರುವಿಗೆ ಗುರು ಇದ್ದಂತೆ ಎಂದರು.
ಚುಟುಕು ಸಾಹಿತ್ಯ ಪರಿತ್ತಿನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಂಗಯ್ಯ ಕುಲಕರ್ಣಿ ಮಾತನಾಡಿ, ಶ್ರೀಮಠದ ಶಾಲೆಯಲ್ಲಿ ಗುಣಮಟ್ಟದ ಜತೆಗೆ ಸಂಸ್ಕಾರಯುತ ಶಿಕ್ಷಣ ನೀಡಲಾಗುತ್ತಿದೆ ಎಂದರು.
ವೇದಮೂರ್ತಿ ಶಂಕ್ರಯ್ಯ ಶಾಸ್ತ್ರೀ ನೇತೃತ್ವದಲ್ಲಿ ವಿಘ್ನ ನಿವಾರಕ ಗಣಪತಿಯ ಹಾಗೂ ವಿದ್ಯಾ ದೇವತೆ ಸರಸ್ವತಿ ಪೂಜೆ ಜರುಗಿತು.ನಂತರ ಶ್ರೀಗಳಿಂದ ಹಾಗೂ ಪಾಲಕರಿಂದ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಲಾಯಿತು. ಮಕ್ಕಳಿಗೆ ಸಿಹಿ ವಿತರಿಸಲಾಯಿತು.
ಮುಖ್ಯೋಪಾಧ್ಯಾಯ ಶಂಕರ ಅಕ್ಕಸಾಲಿ ಸ್ವಾಗತಿಸಿದರು. ಶಿಕ್ಷಕಿ ರಶ್ಮಿ ಕುಲಕರ್ಣಿ ಪ್ರಾರ್ಥಿಸಿದರು. ಶಿಕ್ಷಕಿ ಪೂಜಾ ಮಹಾರಾಜಪೇಟ ನಿರೂಪಿಸಿದರು. ಶಿಕ್ಷಕಿ ಗೌರಮ್ಮ ಲೋಕಾಪುರ ವಂದಿಸಿದರು. ಪಾಲಕರು, ಮಕ್ಕಳು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.