police, sammitra  
ಹಾವೇರಿ

ಗಾಂಜಾ ನಶೆ ಇಳಿಸಲು ‘ಸಮ್ಮಿತ್ರ’ ಅಸ್ತ್ರ !; ಎರಡೂವರೆ ತಿಂಗಳಲ್ಲಿ 18 ಡ್ರಗ್ ಸೇವನೆ ಪ್ರಕರಣ ಪತ್ತೆ; ಚಟ ಬಿಡಿಸಲು ತಲಾ ಒಬ್ಬ ಪೊಲೀಸ್ ಕಣ್ಗಾವಲು

ಹಾವೇರಿ: ಜನಸ್ನೇಹಿ ಪೊಲೀಸ್ ಯೋಜನೆಯ ಭಾಗವಾಗಿ ರಾಜ್ಯ ಸರ್ಕಾರ ಗಾಂಜಾ ನಶೆಗೆ ಅಂಟಿಕೊಂಡವರ ನಶೆ ಇಳಿಸಲು ರಾಜ್ಯಾದ್ಯಂತ ‘ಸಮ್ಮಿತ್ರ’ ಯೋಜನೆ ಜಾರಿಗೊಳಿಸಿದ್ದು, ಗಾಂಜಾ ಸೇವನೆ ಚಟಕ್ಕೆ ದಾಸರಾಗಿರುವವನ್ನು ಚಟದಿಂದ ಮುಕ್ತಿ ಕೊಡಿಸಿ ಮೊದಲಿನಂತೆ ಜೀವನ ನಡೆಸಲು ಇಲಾಖೆ ಮುಂದಡಿ ಇಟ್ಟಿದೆ. ಸಮ್ಮಿತ್ರ ಯೋಜನೆಯಡಿ ಗಾಂಜಾ ಸೇರಿದಂತೆ ಇತರ ಮಾದಕ ದ್ರವ್ಯಗಳ ಸೇವನೆಗೆ ಅಂಟಿಕೊಂಡು ಜೀವನ ಹಾಳು ಮಾಡಿಕೊಳ್ಳುತ್ತಿರುವ ಯುವ ಜನಾಂಗವನ್ನು ಸರಿದಾರಿಗೆ ತರುವ ನಿಟ್ಟಿನಲ್ಲಿ ಸರ್ಕಾರ ಈ ಯೋಜನೆ ಜಾರಿಗೊಳಿಸಿದೆ.
ಗಾಂಜಾ ಸಾಗಾಟ ಮತ್ತು ಮಾರಾಟ ಮಾಡುವ ಜಾಲವನ್ನು ಪತ್ತೆಹಚ್ಚಿ ಶಿಕ್ಷೆ ಕೊಡಿಸುವುದು ಒಂದು ಭಾಗವಾದರೆ, ಚಟಕ್ಕೆ ಅಂಟಿಕೊಂಡವರ ಮೇಲೆ ನಿಗಾ ಇಟ್ಟು ಅವರು ಆ ಅಮಲಿನಿಂದ ಹೊರಬರಲು ಸರಿದಾರಿ ತೋರುವ ಸಮ್ಮಿತ್ರ ಯೋಜನೆ ವಿನೂತನ ಪ್ರಯತ್ನವಾಗಿದೆ. ಜಿಲ್ಲೆಯಲ್ಲಿ 2023, 24, 25ರಲ್ಲಿ ಮೂರು ವರ್ಷದಲ್ಲಿ 41 ಜನ ಗಾಂಜಾ ಸೇವನೆ ಪ್ರಕರಣದಲ್ಲಿ ಪತ್ತೆಯಾಗಿದ್ದರು.
2026ರಲ್ಲಿ ಕೇವಲ ಎರಡೂವರೆ ತಿಂಗಳಲ್ಲಿ 18 ಜನ ಗಾಂಜಾ ಸೇವನೆ ಪ್ರಕರಣದಲ್ಲಿ ಪತ್ತೆಯಾಗಿದ್ದಾರೆ. ಹೀಗೆ ಗಾಂಜಾ ಸೇವಿಸುವಾಗ ಪೊಲೀಸರ ಕೈಗೆ ಸಿಕ್ಕಿಬಿದ್ದವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ. ನಂತರ ಅವರು ಜಾಮೀನು ಪಡೆದು ಹೊರಬಂದು ಮತ್ತೆ ಅದೇ ಚಟಕ್ಕೆ ದಾಸರಾಗಿ ಸಮಾಜಕ್ಕೆ ಕಂಟಕ ಆಗಬಾರದು ಎಂಬ ಉದ್ದೇಶದಿಂದ ಗಾಂಜಾ ಸೇವಿಸಿದ ಪ್ರಕರಣದಲ್ಲಿ ಸಿಕ್ಕಿಬಿದ್ದ ಒಬ್ಬ ವ್ಯಕ್ತಿ ಮೇಲೆ ನಿಗಾ ಇಡಲು ಇಲಾಖೆಯಿಂದ ಒಬ್ಬ ಪೊಲೀಸ್ ಕಾನ್‌ಸ್ಟೆಬಲ್ ಅಥವಾ ಹೆಡ್ ಕಾನ್‌ಸ್ಟೆಬಲ್ ನೇಮಿಸಲಾಗಿದೆ.
ಹೀಗೆ ನೇಮಕವಾದ ಪೊಲೀಸ್ ಸಿಬ್ಬಂದಿ ಆರೋಪಿಗಳ ಮೇಲೆ ಕಣ್ಗಾವಲು ಇಡುತ್ತಾರೆ. ಅವರ ಚಲನವಲನ, ದಿನನಿತ್ಯದ ಚಟುವಟಿಕೆಗಳನ್ನು ಗಮನಿಸುತ್ತಾರೆ. ಗಾಂಜಾ ಮಾರಾಟಗಾರರು, ಸೇವನೆಗೆ ಪ್ರಚೋದಿಸುವವರ ಸಂಪರ್ಕಕ್ಕೆ ಬಂದರೆ ಅದನ್ನು ತಪ್ಪಿಸಲು ಬೇಕಾದ ಕ್ರಮಗಳನ್ನು ಲಾಖೆಯ ಮಾರ್ಗದರ್ಶನದಲ್ಲಿ ಮಾಡುತ್ತಾರೆ. ಒಟ್ಟಾರೆ ಆ ವ್ಯಕ್ತಿ ಚಟದಿಂದ ವಿಮುಕ್ತಿ ಪಡೆದು ಆರೋಗ್ಯವಂತ ಪ್ರಜೆ ಆಗುವಂತೆ ಮಾಡುವ ಹೊಣೆಯಲ್ಲಿ ಆ ಸಿಬ್ಬಂದಿಯ ಹೆಗಲಿಗೆ ಇಲಾಖೆ ವಹಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಇಲಾಖೆಯ ಈ ಕಾರ್ಯ ಮೆಚ್ಚುವಂಥದ್ದು. ಆದರೆ, ಪ್ರತಿಯೊಬ್ಬ ಸಿಬ್ಬಂದಿಯೂ ಇದನ್ನು ಅಚ್ಚುಕಟ್ಟಾಗಿ ನಿಷ್ಠಯಿಂದ ನಿರ್ವಹಿಸಿದರೆ, ಗಾಂಜಾ ಸೇರಿದಂತೆ ಮಾದಕ ದ್ರವ್ಯಗಳ ಜಾಲವನ್ನು ಬುಡಸಮೇತ ಕಿತ್ತೆಸೆಯಲೂ ಸಹಕಾರಿ ಆಗುತ್ತದೆ ಎಂಬುದು ಪ್ರಜ್ಞಾವಂತ ನಾಗರಿಕರ ಆಶಯವಾಗಿದೆ.
ಆರೋಗ್ಯ ಇಲಾಖೆ ಸಹಕಾರ
ಕೆಲವರು ಸ್ನೇಹಿತರ ಜತೆಗೆ ಸೇರಿ ಅಥವಾ ಯಾವುದೇ ಸಂದರ್ಭಕ್ಕೆ ಗುರಿಯಾಗಿ ಗಾಂಜಾ ಮತ್ತಿತರ ಮಾದಕ ದ್ರವ್ಯ ಸೇವನೆಗೆ ಮುಂದಾಗುತ್ತಾರೆ. ಇಂಥವರು ಕಂಡುಬಂದ ಕೂಡಲೇ ಜಿಲ್ಲಾಸ್ಪತ್ರೆಗೆ ಕರೆದೊಯ್ದು ಡ್ರಗ್ಸ್ ಸೇವನೆ ಮಾಡಿರುವ ಕುರಿತು ಖಚಿತಪಡಿಸಿಕೊಂಡು ಎನ್‌ಡಿಪಿಎಸ್ 27(ಬಿ) ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗುತ್ತದೆ. ನಂತರ ಅವರ ಮೇಲೆ ನಿಗಾ ಇಡಲು ಓರ್ವ ಪೊಲೀಸ್ ನೇಮಿಸಲಾಗುತ್ತದೆ. ಆರೋಗ್ಯ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆ ಸಹಕಾರದೊಂದಿಗೆ ಡ್ರಗ್ ಸೇವನೆಯಿಂದ ಮುಕ್ತರಾಗಿಸುವ ಕಾರ್ಯ ನಡೆದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
"

ಜನಸ್ನೇಹಿ ಪೊಲೀಸ್ ಭಾಗವಾಗಿ ಈಗಾಗಲೇ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮ ಮಾಡಲಾಗುತ್ತಿದೆ. ಇದರ ಇನ್ನೊಂದು ಭಾಗವೇ ಸಮ್ಮಿತ್ರ ಯೋಜನೆ. ಗಾಂಜಾ ಸೇವನೆ ಮಾಡುವಾಗ ಸಿಕ್ಕ ಜನರ ಮೇಲೆ ನಿಗಾ ಇಡಲು ನಮ್ಮ ಸಿಬ್ಬಂದಿಯನ್ನು ನೇಮಿಸಲಾಗುತ್ತದೆ. ಅವರನ್ನು ಮಾದಕ ವಸ್ತುಗಳ ಸೇವನೆ ಬಿಡಿಸುವ ಹೊಣೆಗಾರಿಕೆಯನ್ನು ಸಿಬ್ಬಂದಿಗೆ ನೀಡಲಾಗಿದೆ.