Haveri, Gandhipura, Digree College, Kala Utsava,
ಹಾವೇರಿ: ದೂರದರ್ಶನ ಮತ್ತು ಸಿನಿಮಾ ಮಾಧ್ಯಮಗಳು ನಮ್ಮ ಸಾಂಸ್ಕೃತಿಕ ಬದುಕನ್ನು ವಿರೂಪಗೊಳಿಸುತ್ತಿವೆ. ಮನಸ್ಸನ್ನು ವಿಕಾಸಗೊಳಿಸುವ ಬದಲು ವಿಕಾರಗೊಳಿಸುವ ಕಾರ್ಯಕ್ರಮಗಳು, ದೃಶ್ಯ ಮಾಧ್ಯಮದಲ್ಲಿ ಕಂಡುಬರುತ್ತಿರುವುದರಿಂದ ನಮ್ಮ ಸಾಂಸ್ಕೃತಿಕ ಬದುಕು ಮಲಿನವಾಗಿದೆ ಎಂದು ಸಾಹಿತಿ ಹನುಮಂತಗೌಡ ಗೊಲ್ಲರ ಹೇಳಿದರು.
ತಾಲೂಕಿನ ಗಾಂಧಿಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‌ನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕಲಾ ಉತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಒಂದು ಸಮಾಜದ ಅಥವಾ ಒಂದು ದೇಶದ ಸಂಸ್ಕಾರ, ಸಂಸ್ಕೃತಿಯನ್ನು ಅಳಿಯಬೇಕಾದರೆ ಅಲ್ಲಿ ಬೆಳೆದು ಬಂದಿರುವ ಹಾಗೂ ಪ್ರಚಲಿತದಲ್ಲಿರುವ ಕಲೆಗಳಿಂದ ಅಳೆಯಬಹುದು. ಕಲೆಗಳಿಲ್ಲದ ಮನುಷ್ಯನ ಜೀವನ ನೀರಸವಾಗುತ್ತದೆ, ಬೇಸರವಾಗುತ್ತದೆ. ನಮ್ಮ ಕಲೆಗಳಲ್ಲಿ ಸಂತೋಷವಿದೆ, ಸಂದೇಶವಿದೆ, ಆನಂದವಿದೆ, ಸಾಂತ್ವನವಿದೆ. ಕಲೆಗಳು ನಮಗೆ ಮುದ ನೀಡುವುದರ ಜತೆಗೆ ನಮ್ಮ ಜೀವನದ ಗುಣಮಟ್ಟ ಹೆಚ್ಚಿಸುತ್ತವೆ. ಸಾಂಸ್ಕೃತಿಕ ಹವ್ಯಾಸಗಳ ಕೊರತೆಯಿಂದ ವಿದ್ಯಾರ್ಥಿಗಳಲ್ಲಿ ಹಿಂಸಾ ಪ್ರವೃತ್ತಿ ಹೆಚ್ಚುತ್ತಿದೆ ಎಂದರು.
ನಮ್ಮಲ್ಲಿರುವ ಶಕ್ತಿ, ಪ್ರತಿಭೆಗಳನ್ನು ಬಳಸಿಕೊಳ್ಳಬೇಕು, ಬೆಳೆಸಿಕೊಳ್ಳಬೇಕು. ಹಾಡುಗಾರಿಕೆ, ಚಿತ್ರಕಲೆ, ಸಂಗೀತ, ಮುಂತಾದವುಗಳು ಯಾವುದಾದರೂ ಆಗಬಹುದು. ಅದರಲ್ಲಿ ನಾವು ನಾವಾಗಬೇಕೇ ಹೊರತು ಮತ್ತೊಬ್ಬರ ನಕಲಾಗಬಾರದು. ವಿದ್ಯಾರ್ಥಿಗಳು ಕೀಳರಿಮೆ ತೊರೆದು ಬಡತನ, ಅವಮಾನಗಳನ್ನು ಸವಾಲಾಗಿ ತೆಗೆದುಕೊಂಡು ಉತ್ತಮ, ಪ್ರಜ್ಞಾವಂತ ಜವಾಬ್ದಾರಿಯುತ ನಾಗರಿಕರಾಗಬೇಕೆಂದು ಹೇಳಿದರು.
ಕಾಲೇಜ್ ಅಭಿವೃದ್ಧಿ ಸಮಿತಿ ಸದಸ್ಯ ಪದ್ಮರಾಜ ಕಳಸೂರ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಶಿಸ್ತು, ನಿಷ್ಠೆ, ಪ್ರಾಮಾಣಿಕತೆ ಬೆಳೆಸಿಕೊಳ್ಳಬೇಕು. ಕಾಲೇಜ್‌ಗೆ, ಹೆತ್ತವರಿಗೆ ಕೀರ್ತಿ ತರಬೇಕು ಎಂದರು.
ಪ್ರಾಚಾರ್ಯೆ ಡಾ.ಫರ್ಜಾನಾ ಪಠಾಣ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿ ಜೀವನ ಅಮೂಲ್ಯವಾದದ್ದು. ಸಂವಹನ ಕೌಶಲ, ನಾಯಕತ್ವ ಗುಣ, ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು. ಉತ್ತಮ ಹವ್ಯಾಸಗಳನ್ನು ರೂಢಿಸಿಕೊಂಡು ವ್ಯಕ್ತಿತ್ವ ವಿಕಾಸ ಮಾಡಿಕೊಳ್ಳಬೇಕು ಎಂದು ಹೇಳಿದರು.
ವಿದ್ಯಾರ್ಥಿಗಳ ಪರವಾಗಿ ಪ್ರವೀಣ ಹಂಗರಕಟ್ಟಿ ಹಾಗೂ ರೇಣುಕಾ ಅಕ್ಕೂರ ಅನಿಸಿಕೆ ಹಂಚಿಕೊಂಡರು.
ವೇದಿಕೆಯಲ್ಲಿ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ನಿಜಲಿಂಗಪ್ಪ ಬಸೇಗಣ್ಣಿ, ಡಾ.ಜಯದೇವ ಸಿರಳ್ಳಿ, ಡಾ.ಕಿಟ್ಟಪ್ಪ, ನಾಗರಾಜ ಎಚ್, ಮಲ್ಲಿಕಾರ್ಜುನಗೌಡ ಜಿ.ಎಂ., ಆಶಾ ಗುಡಿ, ಮತ್ತಿತರರು ಉಪಸ್ಥಿತರಿದ್ದರು. ಸಾಗರ ಹೊಸಮನಿ ಸ್ವಾಗತಿಸಿದರು, ಸಾವಿತ್ರಿ ಕಲ್ಲನಗೌಡ, ಚೈತನ್ಯ ಕರ್ಜಗಿ ನಿರೂಪಿಸಿದರು. ಕಾವ್ಯಾ ಹಡಪದ ವಂದಿಸಿದರು.
ಸೇನೆಗೆ ಆಯ್ಕೆಯಾದ ವಿದ್ಯಾರ್ಥಿಗಳು
ಭಾರತೀಯ ಸೇನೆಗೆ ಆಯ್ಕೆಯಾಗಿರುವ ಗಾಂಧೀಪುರ ಕಾಲೇಜ್‌ನ ವಿದ್ಯಾರ್ಥಿಗಳಾದ ಮೈಲಾರಿ ಮಲ್ಲಿಗಾರ, ರವಿ ಕುರಿಯವರ ಹಾಗೂ ಬೀರಪ್ಪ ಸೋಮಸುಂದರ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.