Haveri, Ganajuru, Gold Mining, Deccan, Gold, Company,  
ಹಾವೇರಿ

ಚಿನ್ನದ ನಾಡು ಆಗುತ್ತಾ ಯಾಲಕ್ಕಿ ನಾಡು ?; ಗಣಜೂರ ಸೇರಿ ಜಿಲ್ಲೆಯ ಹಲವೆಡೆ ಚಿನ್ನಕ್ಕಾಗಿ ಶೋಧ ಕಾರ್ಯ; ಡೆಕ್ಕನ್ ಗೋಲ್ಡ್ ಮೈನ್ಸ್ ಕಂಪನಿ ಶತಪ್ರಯತ್ನ

ಹಾವೇರಿ: ಹತ್ತಾರು ವರ್ಷಗಳಿಂದ ಹಲವು ದೊಡ್ಡ ಕಂಪನಿಗಳು ಜಿಲ್ಲೆಯ ಹಲವೆಡೆ ಚಿನ್ನದ ನಿಕ್ಷೇಪಗಳಿಗಾಗಿ ಶೋಧ ಕಾರ್ಯಾಚರಣೆ ನಡೆಸಿದ್ದು, ಗಣಜೂರ ಸೇರಿ, ಕೆಲವೆಡೆ ಚಿನ್ನದ ನಿಕ್ಷೇಪಗಳು ಇರುವ ಕುರುಹುಗಳನ್ನು ಕೆಲ ಕಂಪನಿಗಳು ಪತ್ತೆ ಹಚ್ಚಿವೆ. ಈ ನಿಟ್ಟಿನಲ್ಲಿ ಕಾನೂನಾತ್ಮಕ ತೊಡಕು ನಿವಾರಿಸಿಕೊಂಡು ಚಿನ್ನದ ಭೇಟೆಗೆ ಸಜ್ಜಾಗಲು ಯತ್ನಿಸುತ್ತಿವೆ. ಈ ಸಾಹಸ ಯಶಸ್ವಿಯಾದರೆ ಯಾಲಕ್ಕಿ ನಾಡು ಚಿನ್ನದ ನಾಡು ಆಗುತ್ತದೆ.
ಜಿಲ್ಲೆಯಲ್ಲಿ ಚಿನ್ನದ ನಿಕ್ಷೇಪಕ್ಕಾಗಿ ಹುಡುಕಾಟ ಕಾರ್ಯ 2015ರಿಂದಲೇ ಶುರುವಾಗಿದೆ. ‘ಡೆಕ್ಕನ್ ಗೋಲ್ಡ್ ಮೈನ್ಸ್’ ಕಂಪನಿ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆದು ಹಾವೇರಿ ತಾಲೂಕಿನ ಗಣಜೂರ ಗ್ರಾಮದ ಸರಹದ್ದಿನಿಂದ ನಾಗೇಂದ್ರನಮಟ್ಟಿವರೆಗೆ 72 ಎಕರೆ ಪ್ರದೇಶದಲ್ಲಿ ಸಮೀಕ್ಷೆ ನಡೆಸಿತ್ತು. ಇಲ್ಲಿ ಚಿನ್ನದ ನಿಕ್ಷೇಪ ಇರುವುದನ್ನು ಪತ್ತೆ ಹಚ್ಚಿತ್ತು. ಚಿನ್ನದ ಗಣಿಗಾರಿಕೆಗೆ ಅನುಮತಿ ನೀಡುವಂತೆ ಸಕ್ಷಮ ಪ್ರಾಧಿಕಾರಕ್ಕೆ ಅರ್ಜಿಯನ್ನೂ ಸಲ್ಲಿಸಿತ್ತು. 72 ಎಕರೆ ಪ್ರದೇಶದಲ್ಲಿ 150 ಕಡೆಗಳಲ್ಲಿ ಕೊಳವೆಬಾವಿಗಳನ್ನು ಕೊರೆಸಿದ್ದ ಕಂಪನಿ, ಗಣಿಗಾರಿಕೆಗೆ ಆಯ್ಕೆಯಾದ ಜಮೀನುಗಳ ಮಾಲೀಕರಿಗೆ ಲೀಸ್ ಲೆಕ್ಕದಲ್ಲಿ ಪ್ರತಿ ಎಕರೆಗೆ ವರ್ಷಕ್ಕೆ 40 ಸಾವಿರ ರೂ. ಭೂಬಾಡಿಗೆ ನೀಡುವುದಾಗಿ ಮಾತುಕಡೆ ನಡೆಸಿತ್ತು.
ಹಾವೇರಿ ನಗರದ ಹಾನಗಲ್ಲ ರಸ್ತೆಯಲ್ಲಿ ಕಚೇರಿ ಆರಂಭಿಸಿದ್ದ ಕಂಪನಿಗೆ, ಕೆಲ ಕಾನೂನು ತೊಡಕುಗಳಿಂದ ಚಿನ್ನದ ಗಣಿಗಾರಿಕೆಗೆ ನುಮತಿ ಸಿಕ್ಕಿರಲಿಲ್ಲ. ಹೀಗಾಗಿ, ಅಂದಿನಿಂದಲೇ ಕಾನೂನು ಹೋರಾಟಕ್ಕೆ ಮೊರೆ ಹೋಗಿತ್ತು. ಗಣಜೂರ ಮಾದರಿಯಲ್ಲಿ ಮಹಾರಾಷ್ಟ್ರದ ಗಡ್ಚಿರೋಲಿ ಪ್ರದೇಶದಲ್ಲಿ ಕಬ್ಬಿಣದ ನಿಕ್ಷೇಪ ಪತ್ತೆ ಮಾಡಿ ಗಣಿಗಾರಿಕೆಗೆ ಅರ್ಜಿ ಸಲ್ಲಿಸಿತ್ತು. ಅಲ್ಲಿಯೂ ಅನುಮತಿ ಸಿಕ್ಕಿರಲಿಲ್ಲ. ಇದನ್ನು ಪ್ರಶ್ನಿಸಿ ಕಂಪನಿ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು.
ಮಹಾರಾಷ್ಟ್ರ ಪ್ರಕರಣದ ವಿಚಾರಣೆ ನಡೆಸಿರುವ ನ್ಯಾಯಾಲಯ ಅಧಿಕಾರಿಗಳಿಗೆ ಕೆಲ ನಿರ್ದೇಶನ ನೀಡಿದೆ. ಮಹಾರಾಷ್ಟ್ರದ ಜತೆಗೆ ಕರ್ನಾಟಕದ ಹಾವೇರಿ ಜಿಲ್ಲೆಯ ಗಣಜೂರಿನಲ್ಲಿಯೂ ಚಿನ್ನದ ನಿಕ್ಷೇಪ ಗಣಿಗಾರಿಕೆಗೆ ಡೆಕ್ಕನ್ ಸಂಸ್ಥೆಗೆ ಅವಕಾಶ ಲಭಿಸುವ ಮುನ್ಸೂಚನೆ ಸಿಕ್ಕಿದೆ. ಗಣಜೂರಲ್ಲಿ ಚಿನ್ನದ ಗಣಿಗಾರಿಕೆಗೆ ಸರ್ಕಾರದಿಂದ ಅಧಿಕೃತ ಪರವಾನಗಿ ಸಿಕ್ಕರೆ ಜಿಲ್ಲಾ ಕೇಂದ್ರ ಹಾವೇರಿ ಸೇರಿದಂತೆ ಜಿಲ್ಲೆಯ ಚಿತ್ರಣ ಬದಲಾಗುವ ಸಾಧ್ಯತೆ ದಟ್ಟವಾಗಿದೆ ಎಂಬ ಲೆಕ್ಕಾಚಾರ ಜನಸಾಮಾನ್ಯರ ವಲಯದಲ್ಲಿ ಚರ್ಚೆಯನ್ನು ಹುಟ್ಟಿಹಾಕಿದೆ.
ಎಲ್ಲೆಲ್ಲಿ ನಡೆಯುತ್ತಿದೆ ಹುಡುಕಾಟ ?
ಜಿಲ್ಲೆಯಲ್ಲಿ 2023-24ರಲ್ಲಿ ರಾಣೆಬೆನ್ನೂರ ತಾಲೂಕಿನ ಕಾಕೋಳದಲ್ಲಿ 29 ಎಕರೆ ಪ್ರದೇಶದಲ್ಲಿ ಚಿನ್ನದ ಶೋಧಕ್ಕಾಗಿ ಎಂಇಸಿಎಲ್ ಕಂಪನಿ ಹಾಗೂ ರಟ್ಟಿಹಳ್ಳಿ ತಾಲೂಕಿನ ನಾಗವಂದ ಬಳಿ 177 ಕಿಮೀ ವ್ಯಾಪ್ತಿಯಲ್ಲಿ ಚಿನ್ನ ಮತ್ತು ಇತರ ಖನಿಜಗಳ ನಿಕ್ಷೇಪಕ್ಕಾಗಿ ಶೋಧ ಮಾಡಲು ಕೆಐಒಸಿಎಲ್ ಅನುಮತಿ ಪಡೆದಿದೆ. 2024-25ರಲ್ಲಿ ಬ್ಯಾಡಗಿ ತಾಲೂಕಿನ ಚಿನ್ನಿಕಟ್ಟಿ ಗ್ರಾಮದಲ್ಲಿ 7 ಎಕರೆ ಚಿನ್ನದ ಶೋಧಕ್ಕಾಗಿ ಎಂ/ಎಸ್ ಮೈನಿಂಗ್ ಟೆಕ್ ಕಂಪನಿ ಅನುಮತಿ ಪಡೆದು ಶೋಧ ಕಾರ್ಯ ಆರಂಭಿಸಿದೆ. ಶಂಕ್ರಿಕೊಪ್ಪದಲ್ಲೂ ಚಿನ್ನದ ಶೋಧ ಕಾರ್ಯ ಮುಂದುವರಿದಿದೆ. ಈ ನಡುವೆ ದೆಹಲಿಯ ಕುಂದನ್ ಗೋಲ್ಡ್ ಕಂಪನಿ ರಾಣೆಬೆನ್ನೂರ ತಾಲೂಕಿನ ಜೋಯಿಸರಹರಳಳ್ಳಿ ಸಾಲುಗುಡ್ಡ ಬ್ಲಾಕ್, ಕುಸಗೂರು, ತಿರುಮಲ ದೇವರಕೊಪ್ಪ, ಹಲಗೇರಿ, ಬೆಳಕೇರಿ, ಬೆನಕನಕೊಂಡ, ಗುಡ್ಡದಹೊಸಳ್ಳಿ ಹಾಗೂ ಉಕ್ಕುಂದ ಗ್ರಾಮಗಳಲ್ಲಿ ಚಿನ್ನದ ನಿಕ್ಷೇಪದ ಹುಡುಕಾಟಕ್ಕಾಗಿ ಫೆಬ್ರವರಿ 25, 2026ರಂದು ಸರ್ಕಾರದಿಂದ ಅನುಮತಿ ಪಡೆದಿದೆ.
ಷೇರಿನ ಬೆಲೆ ದಿಢೀರ್ ಏರಿಕೆ
ಮಹಾರಾಷ್ಟ್ರದ ಕಬ್ಬಿಣ ಗಣಿಗಾರಿಕೆ ಪ್ರಕರಣದಲ್ಲಿ ಸ್ರುಪ್ರೀಂಕೋರ್ಟ್ ತೀರ್ಪು ಬರುತ್ತಿದ್ದಂತೆ ಡೆಕ್ಕನ್ ಗೋಲ್ಡ್ ಮೈನ್ಸ್ ಕಂಪನಿಯು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ(ಸೆಬಿ)ಗೆ ಪತ್ರ ಬರೆದಿದೆ. ಇದರಲ್ಲಿ ಹಾವೇರಿ ಗಣಜೂರ ಚಿನ್ನದ ನಿಕ್ಷೇಪದ ಬಗ್ಗೆಯೂ ಪ್ರಸ್ತಾಪಿಸಿದೆ. ಹೀಗಾಗಿ, ಈ ಕಂಪನಿಯ ಷೇರಿನ ಬೆಲೆ ದಿಢೀರ್ ಆಗಿ ಏರಿಕೆಯಾಗಿದ್ದು ಕಂಡು ಬಂದಿದೆ ಎನ್ನಲಾಗಿದೆ.
ಹೀಗಿರುತ್ತೆ ಮೈನಿಂಗ್ ಪ್ರಕ್ರಿಯೆ
ಚಿನ್ನ ಅಥವಾ ಯಾವುದೇ ಖನಿಜಗಳ ನಿಕ್ಷೇಪಗಳಲ್ಲಿ ಗಣಿಗಾರಿಕೆ ಮಾಡಲು ಅನುಮತಿ ಪಡೆಯುವುದು ಅಷ್ಟು ಸುಲಭವಲ್ಲ. ಇದು ಅತ್ಯಂತ ಸುದೀರ್ಘವಾದ ಪ್ರಕ್ರಿಯೆಯಾಗಿರುತ್ತದೆ. ಚಿನ್ನ ಅಥವಾ ಇತರ ಖನಿಜಗಳ ನಿಕ್ಷೇಪಗಳು ಇರುವ ಕುರಿತು ಶೋಧಕ್ಕಾಗಿ ಕಂಪನಿಗಳು ಮೊದಲು ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಭೂವೈಜ್ಞಾನಿಕ ಸಮೀಕ್ಷೆ (ಜಿಯಾಲಜಿಕಲ್ ಸರ್ವೇ)ಗೆ ಅನುಮತಿ ಪಡೆಯುತ್ತವೆ. ನಂತರ ಅಲ್ಲಿ ವೈಜ್ಞಾನಿಕ ಮಾದರಿಯಲ್ಲಿ ಶೋಧ ಕಾರ್ಯ ನಡೆಸಬೇಕು. ಆ ಭಾಗದ ಮಣ್ಣು, ನೀರಿನ ಗುಣಧರ್ಮ, ಯಾವ ಬಗೆಯ ಸಸ್ಯಗಳು ಬೆಳೆಯುತ್ತವೆ ಎಂಬಿತ್ಯಾದಿ ಅಂಶಗಳ ಕೂಲಂಕಷ ಅಧ್ಯಯನ ಮಾಡಲಾಗುತ್ತದೆ. ನಿಕ್ಷೇಪ ಕಂಡು ಬಂದಲ್ಲಿ ಸಾಕ್ಷಿ ಸಮೇತ ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ನಂತರ ಸರ್ಕಾರ ಖಚಿತಪಡಿಸಿಕೊಂಡು ಅರ್ಹವಾಗಿದ್ದಲ್ಲಿ ಅದೇ ಕಂಪನಿಗೆ ಗಣಿಗಾರಿಕೆಗೆ ಅನುಮತಿ ನೀಡುತ್ತದೆ. ಇಲ್ಲವೇ ಹರಾಜು ಪ್ರಕ್ರಿಯೆ ನಡೆಸುತ್ತದೆ. ಈ ಎಲ್ಲ ಪ್ರಕ್ರಿಯೆಗಳು ಮುಗಿಯಲು ವರ್ಷಗಟ್ಟಲೇ ಸಮಯ ಬೇಕಾಗುತ್ತದೆ ಎನ್ನುತ್ತಾರೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ನವೀನ ಪಿ.ಎಸ್..
"

ಜಿಲ್ಲೆಯಲ್ಲಿ ಚಿನ್ನದ ನಿಕ್ಷೇಪಕ್ಕಾಗಿ ಹಲವೆಡೆ ಶೋಧ ಕಾರ್ಯಾಚರಣೆ ನಡೆದಿದೆ. ಆದರೆ, ಖಚಿತವಾಗಿ ಗಣಿಗಾರಿಕೆಗೆ ಈವರೆಗೆ ಯಾರೊಬ್ಬರಿಗೂ ಅನುಮತಿ ನೀಡಲಾಗಿಲ್ಲ. ಇನ್ನೂ ಪ್ರಾಥಮಿಕ ಶೋಧದ ಹಂತದಲ್ಲಿವೆ. ಚಿನ್ನದ ಗಣಿಗಾರಿಕೆಗೆ ಹಲವು ಕಾನೂನು ಪ್ರಕ್ರಿಯೆಗಳು ಇರುತ್ತವೆ. ಸುಲಭದಲ್ಲಿ ಅನುಮತಿ, ಲೈಸನ್ಸ್ ಸಿಗುವುದಿಲ್ಲ. ಗಣಜೂರ ಚಿನ್ನದ ಗಣಿಗಾರಿಕೆ ಕುರಿತು ಇಲಾಖೆಯಿಂದ ಇನ್ನೂ ನಿರ್ದೇಶನ ಬಂದಿಲ್ಲ.

— ನವೀನ ಪಿ.ಎಸ್., ಹಿರಿಯ ಭೂವಿಜ್ಞಾನಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ

"

ಚಿನ್ನದ ಗಣಿಗಾರಿಕೆ ಆರಂಭಿಸುವುದಾಗಿ 14, 15 ವರ್ಷಗಳ ಹಿಂದೆ ಡೆಕ್ಕನ್ ಕಂಪನಿಯವರು ಗಣಜೂರಿಗೆ ಬಂದು ಚಿನ್ನದ ನಿಕ್ಷೇಪಕ್ಕಾಗಿ ಹುಡುಕಾಟ ಶುರು ಮಾಡಿದ್ದರು. ಲೀಸ್ ಕುರಿತು ಕೆಲ ರೈತರೊಂದಿಗೆ ಮಾತುಕತೆಯನ್ನೂ ಮಾಡಿದ್ದರು. ನಂತರ ಹಲವು ವರ್ಷಗಳಿಂದ ಯಾರೂ ಈ ಕಡೆ ಬಂದಿಲ್ಲ.

— ಬಸವರಾಜ ಗಡೇಕಾರ, ಗಣಜೂರ ರೈತ