ಹಾವೇರಿ: ಮುಂಗಾರು ಹಂಗಾಮಿನ ಸಿದ್ಧತೆ ಮಾಡಿಕೊಂಡಿರುವ ಜಿಲ್ಲೆಯ ರೈತರು ಸರ್ಕಾರದಿಂದ ವಿತರಿಸುವ ಸಬ್ಸಿಡಿ ಬೀಜ, ಗೊಬ್ಬರಕ್ಕಾಗಿ ಮುಗಿಬಿದ್ದಿದ್ದಾರೆ. ಕೊಲ್ಲಿ ರಾಷ್ಟ್ರಗಳ ಯುದ್ಧ ಭೀತಿ ನಡುವೆ ಗೊಬ್ಬರದ ಅಭಾವದ ವದಂತಿಯೂ ಹರಡಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ರೈತ ಸಂಪರ್ಕ ಕೇಂದ್ರಗಳಲ್ಲಿ ಬೀಜ, ಗೊಬ್ಬರಕ್ಕಾಗಿ ನೂಕುನುಗ್ಗಲು ಉಂಟಾಗಿದೆ.
ಬುಧವಾರ ಶಿಗ್ಗಾಂವಿ ತಾಲೂಕಿನ ಬಂಕಾಪುರದಲ್ಲಿ ಬೀಜ ವಿತರಣೆ ಕೇಂದ್ರದಲ್ಲಿ ಗದ್ದಲ ಉಂಟಾಗಿ, ವಿತರಣೆಯನ್ನೇ ಸ್ಥಗಿತಗೊಳಿಸಲಾಯಿತು. ಗುರುವಾರ ಹಾವೇರಿ, ಕರ್ಜಗಿ ರೈತ ಸಂಪರ್ಕ ಕೇಂದ್ರಗಳಲ್ಲಿ ರೈತರು ಬೀಜ ಖರೀದಿಗಾಗಿ ಹರಸಾಹಸ ಪಟ್ಟರು. ಬೆಳಗ್ಗೆ 5 ಗಂಟೆಯಿಂದಲೇ ಸರದಿ ಸಾಲಿನಲ್ಲಿ ರೈತರು ನಿಂತಿದ್ದರು. ಇದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು. ಹತ್ತಾರು ಪೊಲೀಸರು ಭದ್ರತೆ ಕೈಗೊಂಡಿದ್ದರಾದರೂ ರೈತರನ್ನು ನಿಯಂತ್ರಿಸಲು ಹರಸಾಹಸ ಪಟ್ಟರು. ರೈತ ಸಂಪರ್ಕ ಕೇಂದ್ರದಲ್ಲಿ ಬೀಜ ವಿತರಣೆಗೆ ಎರಡು ಕೌಂಟರ್ ವ್ಯವಸ್ಥೆ ಮಾಡಬೇಕು. ಕುಡಿಯುವ ನೀರು, ನೆರಳಿನ ವ್ಯವಸ್ಥೆ ಮಾಡಬೇಕು ಎಂದು ರೈತರು ಆಗ್ರಹಿಸಿದ್ದಾರೆ. ಎಲ್ಲ ರಸಗೊಬ್ಬರ 50 ಕೆಜಿ ಪಾಕೆಟ್ ಬರುತ್ತವೆ. ಕೊಲ್ಲಿ ರಾಷ್ಟ್ರಗಳ ಯುದ್ಧದ ಪರಿಣಾಮ ಪೆಟ್ರೋಲಿಂಯ ಉತ್ಪನ್ನಗಳ ಕಚ್ಚಾ ವಸ್ತುಗಳಿಂದ ತಯಾರಾಗುವ ರಸಗೊಬ್ಬರಗಳ ಅಭಾವ ಉಂಟಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ರೈತರು ಹೆಚ್ಚಿನ ದಾಸ್ತಾನಿಗೆ ಮುಗಿಬಿದ್ದಿದ್ದಾರೆ. ಬೀಜ, ಗೊಬ್ಬರದ ಅಗತ್ಯ ದಾಸ್ತಾನು ಇದೆ ಯಾವುದೇ ಆತಂಕವಿಲ್ಲ ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಗಳು. ಕಳೆದ ವರ್ಷಕ್ಕಿಂತ ಈ ವರ್ಷ ಸೋಯಾಬೀನ್ ಬೀಜಕ್ಕೆ ಬೇಡಿಕೆ ಹೆಚ್ಚಾಗಿದೆ. ಮೆಕ್ಕೆಜೋಳ ಉತ್ಪಾದನಾ ವೆಚ್ಚ ಹೆಚ್ಚಳ, ದರ ಸಮರ, ಇತರ ಕಾರಣಗಳಿಂದ ಸೋಯಾಬೀನ್ ಬಿತ್ತನೆಗೆ ರೈತರು ಒಲವು ತೋರುತ್ತಿದ್ದಾರೆ. ಹಾವೇರಿ ತಾಲೂಕಿನಲ್ಲಿ 3,800 ಹೆಕ್ಟೇರ್ ಸೋಯಾಬೀನ್ ಬಿತ್ತನೆ ನಿರೀಕ್ಷೆ ಇದೆ. ಸದ್ಯಕ್ಕೆ 1,280 ಕ್ವಿಂಟಾಲ್ ಬೀಜ ದಾಸ್ತಾನಿದೆ ಎಂದು ವೀರಭದ್ರಪ್ಪ ತಿಳಿಸಿದ್ದಾರೆ.
ಯೂರಿಯಾ ಯಥೇಚ್ಚವಾಗಿ ಬಳಸುವುದರಿಂದ ವಾತಾವರಣ ಕಲುಷಿತವಾಗುತ್ತದೆ. ಹಾಗಾಗಿ, ಯೂರಿಯಾ ಬಳಕೆ ಕಡಿಮೆ ಮಾಡಿ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಈ ಬೆನ್ನಲ್ಲೇ ಯೂರಿಯಾ ವಿತರಣೆಗೆ ರೈತರಿಗೆ ಎಫ್‌ಐಡಿ ಕಡ್ಡಾಯಗೊಳಿಸಲಾಗಿದೆ. 50 ಕೆಜಿ ಇದ್ದ ಯೂರಿಯಾ ಚೀಲವನ್ನು 45ಕ್ಕೆ ಇಳಿಸಲಾಗಿದೆ. ನಮ್ಮಲ್ಲಿ ಯೂರಿಯಾ ಬಳಕೆ ಹೆಚ್ಚಾಗಿದೆ. ಯಥೇಚ್ಚವಾಗಿ ಬಳಸಿದರೆ ಮಣ್ಣಿಗೆ ಹಾನಿ ಆಗುತ್ತಿದೆ. ಗಾಳಿಯಲ್ಲಿ ಆವಿಯಾಗುತ್ತದೆ. ನೀರಿನಲ್ಲಿ ಮಿಶ್ರಣ. ಬೆಳವಣಿಗೆ ಹಂತದಲ್ಲಿ ಮಾತ್ರ ಬಳಸಬೇಕು. ಧರತಿ ಮಾ ಕಾಬಚಾವೋ ಅಭಿಯಾನದಡಿ ಭೂಮಿಗೆ ಆಗುತ್ತಿರುವ ಹಾನಿ ಕುರಿತು ರೈತರಿಗೆ ಜಾಗೃತಿ ಮೂಡಿಸುತ್ತಿದ್ದೇವೆ ಎಂದು ಕೃಷಿ ಎಡಿ ವೀರಭದ್ರಪ್ಪ ಎಚ್. ತಿಳಿಸಿದ್ದಾರೆ.
ಕಾಂಪ್ಲೆಕ್ಸ್ ರಸಗೊಬ್ಬರದ ದರ ಹೆಚ್ಚಾಗಿದೆ. 1,425ರಿಂದ 17,00 ರೂ.ವರೆಗೆ ಇದ್ದ ದರ 1,700ರಿಂದ 2,000 ರೂ.ವರೆಗೆ ದರ ಹೆಚ್ಚಳವಾಗಿದೆ. ಯೂರಿಯಾ ಗೊಬ್ಬರದ ದರ2,840 ರೂ. ಇದ್ದು, ಸರ್ಕಾರ 14,90 ರೂ. ಸಬ್ಸಿಡಿ ನೀಡುತ್ತದೆ. ರೈತರು 1,350 ರೂ. ನೀಡಬೇಕಾಗುತ್ತದೆ. ಡಿಎಪಿ ಗೊಬ್ಬರ ಕೊರತೆ ಇದೆ. ಪರ್ಯಾಯವಾಗಿ ಕಾಂಪ್ಲೆಕ್ಸ್ ರಸಗೊಬ್ಬರ ಬಳಸಬಹುದು. ಆದರೆ, ಇದರ ದರ ಹೆಚ್ಚಿರುವ ಕಾರಣ ಸಮಸ್ಯೆ ಆಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
"
ರೈತರು ಯಾವುದೇ ಗೊಂದಲ ಪಡುವುದು ಬೇಡ. ಬೀಜ ಹಾಗೂ ಗೊಬ್ಬರದ ಅಗತ್ಯ ದಾಸ್ತಾನು ಇದೆ. ಇನ್ನೂ ಹೆಚ್ಚಿನ ಸರಬರಾಜು ಹಂತ ಹಂತವಾಗಿ ಆಗುತ್ತದೆ. ಮೇ ತಿಂಗಳಲ್ಲಿ ಬಿತ್ತನೆ ಮಾಡುವುದು ಬೇಡ. ಜೂನ್ ಮೊದಲ ವಾರದಲ್ಲಿ ಮುಂಗಾರು ಆರಂಭವಾಗುವ ಸಾಧ್ಯತೆ ಇದ್ದು, ಆ ವೇಳೆಯಲ್ಲೇ ಬಿತ್ತನೆ ಮಾಡಿದರೆ ಸೂಕ್ತ.
— ವೀರಭದ್ರಪ್ಪ ಎಚ್., ಸಹಾಯಕ ನಿರ್ದೇಶಕ, ಕೃಷಿ ಇಲಾಖೆ, ಹಾವೇರಿ
"
ಹಾವೇರಿಯಲ್ಲಿ ಈ ಹಿಂದೆ ಗೊಬ್ಬರಕ್ಕಾಗಿ ಗೋಲಿಬಾರ್ ನಡೆದಿದೆ. ಸಮಸ್ಯೆ ಆಗದಂತೆ ಕೃಷಿ ಇಲಾಖೆ ಮುನ್ನೆಚ್ಚರಿಕೆ ವಹಿಸಬೇಕು. ಅಗತ್ಯ ದಾಸ್ತಾನು ಸಂಗ್ರಹಿಸಬೇಕು. ಹಾವೇರಿ ತಾಲೂಕಿಗೆ ಕನಿಷ್ಠ 5,000 ಕ್ವಿಂಟಲ್ ಸೋಯಾಬೀನ್ ಬೀಜ ಬೇಕು. ಆದರೆ, ಸಾವಿರ ಕ್ವಿಂಟಾಲ್ ಮಾತ್ರ ದಾಸ್ತಾನು ಇದೆ. ಅಗತ್ಯ ದಾಸ್ತಾನು ಮಾಡಬೇಕು. ಒಂದು ಎಕರೆಗೆ ಕನಿಷ್ಠ 2ರಿಂದ 3 ಚೀಲ ಯೂರಿಯಾ ಕೊಡಬೇಕು. ಬೀಜ ವಿತರಿಸಲು ಕೌಂಟರ್ ಹೆಚ್ಚಿಸಬೇಕು. ನೀರು, ನೆರಳಿನ ವ್ಯವಸ್ಥೆ ಮಾಡಬೇಕು.
— ನಾಗರಾಜ ಕೋಟಿಬಾಗರ, ಕಬ್ಬೂರ ರೈತ ಹಾಗೂ ಮೆಹಬೂಬಸಾಬ ಹಿರೇಮನಿ, ದೇವಿಹೊಸೂರ ರೈತ