- ಮೆಕ್ಕೆಜೋಳಕ್ಕೆ 3 ಸಾವಿರ ರೂ. ದರ ನಿಗದಿಪಡಿಸಲು ಆಗ್ರಹ
- ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಟ್ರಾೃಕ್ಟರ್ ರ‌್ಯಾಲಿ
- ಮೆಕ್ಕೆಜೋಳಕ್ಕೆ ಪ್ರತಿ ಕ್ವಿಂಟಾಲ್‌ಗೆ ಕೇಂದ್ರ ನಿಗದಿಪಡಿಸಿರುವ ಎಂಎಸ್‌ಪಿ ದರ 2,400 ರೂ. ಘೋಷಿಸಬೇಕು
ಹಾವೇರಿ: ಮೆಕ್ಕೆಜೋಳಕ್ಕೆ 3 ಸಾವಿರ ರೂ. ದರ ನಿಗದಿಪಡಿಸಲು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಇಲ್ಲಿನ ಹೊರವಲಯ ಜಿಲ್ಲಾಡಳಿತ ಭವನದ ಎದುರು ರೈತರು ಆರಂಭಿಸಿರುವ ಅಹೋರಾತ್ರಿ ಧರಣಿ ಭಾನುವಾರ ಏಳನೇ ದಿನಕ್ಕೆ ಕಾಲಿಟ್ಟಿದೆ. ಆರನೇ ದಿನ ಶನಿವಾರ ಜಿಲ್ಲೆಯ ನೂರಾರು ರೈತರು ಟ್ರಾೃಕ್ಟರ್ ರ‌್ಯಾಲಿ ಮಾಡುವ ಮೂಲಕ ಪ್ರತಿಭಟನೆಗೆ ಹೊಸ ಸ್ವರೂಪ ನೀಡಿದರು.
ಪ್ರತಿಭಟನೆ ಆರಂಭಿಸಿ ಆರು ದಿನ ಕಳೆದರೂ ಸರ್ಕಾರದಿಂದ ಸ್ಪಂದನೆ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ರೈತರು ದಿನಕ್ಕೊಂದು ಮಾದರಿಯ ಪ್ರತಿಭಟನೆಗೆ ಮುಂದಾಗಿದ್ದಾರೆ. ಶನಿವಾರ ನೂರಾರು ರೈತರು ತಮ್ಮ ಊರುಗಳಿಂದ ಟ್ರಾೃಕ್ಟರ್ ತೆಗೆದುಕೊಂಡು ಬೆಳಗ್ಗೆ ಹಾವೇರಿಯ ತೋಟದ ಯಲ್ಲಾಪುರದಲ್ಲಿ ಜಮಾಯಿಸಿದರು. ಬಳಿಕ ಅಲ್ಲಿಂದ ಹೊಸಮನಿ ಸಿದ್ದಪ್ಪ ವೃತ್ತ, ಜಿಎಚ್ ಕಾಲೇಜ್ ಮಾರ್ಗವಾಗಿ ಟ್ರಾೃಕ್ಟರ್ ರ‌್ಯಾಲಿ ನಡೆಸಿ, ಅಹೋರಾತ್ರಿ ಧರಣಿ ನಿರತ ಸ್ಥಳಕ್ಕೆ ಭೇಟಿ ನೀಡಿದರು. ಹಲವು ಗಂಟೆಗಳ ಕಾಲ ಡಿಸಿ ಕಚೇರಿ ಗೇಟ್ ಹಾಗೂ ರಸ್ತೆ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ವಾಹನ ಸವಾರರು, ಡಿಸಿ ಕಚೇರಿ ಅಧಿಕಾರಿ, ಸಿಬ್ಬಂದಿ ಪರದಾಡಿದರು.
ಸರ್ಕಾರ ಮೆಕ್ಕೆಜೋಳಕ್ಕೆ ಪ್ರತಿ ಕ್ವಿಂಟಾಲ್‌ಗೆ ಕೇಂದ್ರ ನಿಗದಿಪಡಿಸಿರುವ ಎಂಎಸ್‌ಪಿ ದರ 2,400 ರೂ.ಗೆ ರಾಜ್ಯದ ಸಹಾಯಧನ 600 ಸೇರಿಸಿ ಒಟ್ಟು 3,000 ರೂ. ಕನಿಷ್ಠ ಬೆಂಬಲ ಬೆಲೆ ಘೋಷಿಸಬೇಕು. ಜತೆಗೆ ಕೂಡಲೇ ಎಲ್ಲೆಡೆ ಖರೀದಿ ಕೇಂದ್ರಗಳಲ್ಲಿ ತೆರೆದು ಮೆಕ್ಕೆಜೋಳ ಖರೀದಿಸಬೇಕು. ಬೇಡಿಕೆ ಈಡೇರುವವರೆಗೆ ಹೋರಾಟ ನಿಲ್ಲದು. ಜಿಲ್ಲೆಗೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಬೇಡ್ತಿ-ವರದಾ ನದಿ ಜೋಡಣೆ ಅನುಷ್ಠಾನಕ್ಕೆ ತರಬೇಕು. ಅತಿವೃಷ್ಟಿಯಿಂದಾದ ರೈತರಿಗೆ ಬೆಳೆ ಹಾನಿ ಪರಿಹಾರ, ಬೆಳೆ ವಿಮೆ ಪರಿಹಾರ ನೀಡಬೇಕೆಂದು ರೈತರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಅಶೋಕ ಬಣಕಾರ, ಉಮೇಶ ರುದ್ರದೇವರಮಠ, ವಸಂತ ಕನ್ನಮ್ಮನವರ, ಜಾನ್ ಪುನೀತ, ಸಿದ್ದಲಿಂಗಪ್ಪ ಬಳ್ಳಾರಿ, ರುದ್ರಗೌಡ ಕಾಡನಗೌಡ್ರ, ಶಿವಯೋಗಿ ಹೊಸಗೌಡ್ರ, ಶಿವಬಸಪ್ಪ ಗೋವಿ, ದಿಳ್ಳೆಪ್ಪ ಮಣ್ಣೂರ, ಮುತ್ತಪ್ಪ ಗುಡಗೇರಿ, ಎಚ್.ಎಚ್.ಮುಲ್ಲಾ, ಮರಿಗೌಡ ಪಾಟಿಲ, ರಾಜು ತರ್ಲಗಟ್ಟ, ಪ್ರಭುಗೌಡ ಪ್ಯಾಟಿ, ಈರಣ್ಣ ಚಕ್ರಸಾಲಿ, ಇತರರಿದ್ದರು.
ಜಿಲ್ಲೆಯಲ್ಲಿ ಆರು ಜನ ಕಾಂಗ್ರೆಸ್ ಶಾಸಕರಿದ್ದರೂ ಒಬ್ಬರೂ ರೈತರ ಧರಣಿ ಸ್ಥಳಕ್ಕೆ ಬಂದು ಸಮಸ್ಯೆ ಆಲಿಸಿಲ್ಲ. ಕೇಂದ್ರದ ಎಂಎಸ್‌ಪಿ ದರದ ಅನ್ವಯ 2,400 ರೂ.ನಂತೆ ಮೆಕ್ಕೆಜೋಳ ಖರೀದಿಸುವುದಾಗಿ ರಾಜ್ಯ ಸರ್ಕಾರ ಘೋಷಿಸಿದೆ. ಆದರೆ, ರೈತರು ಮೆಕ್ಕೆಜೋಳ ಎಲ್ಲಿ ಮಾರಾಟ ಮಾಡಬೇಕು ? ಒಬ್ಬರಿಂದ ಎಷ್ಟು ಖರೀದಿಸುತ್ತಾರೆ ? ಎಂಬುದನ್ನು ಹೇಳಿಲ್ಲ. ಜತೆಗೆ ಬೆಳೆಹಾನಿ ಪರಿಹಾರ ಎಲ್ಲರಿಗೂ ಜಮೆ ಆಗಿಲ್ಲ. ಈ ಬಗ್ಗೆ ಸರ್ಕಾರ ಮತ್ತು ಜಿಲ್ಲೆಯ ಶಾಸಕರು ಸ್ಪಷ್ಟಪಡಿಸಬೇಕು.