Haveri, Farmers, KOF, Soyabeen, Seeds,  
ಹಾವೇರಿ

ಬೀಜ ಸಿಗದೇ ಬರಿಗೈಲಿ ವಾಪಸಾದ ರೈತರು; ಆಡಳಿತ ಮಂಡಳಿ ವಿರುದ್ಧ ಅನ್ನದಾತನ ಆಕ್ರೋಶ

ಹಾವೇರಿ: ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಉಚಿತವಾಗಿ ಸೋಯಾಬೀನ್ ಬಿತ್ತನೆ ಬೀಜ ವಿತರಿಸುವ ಪ್ರಕ್ರಿಯೆಯನ್ನು ಬುಧವಾರ ಬಂದ್ ಮಾಡಲಾಗಿತ್ತು, ಪರಿಣಾಮ ಬೀಜಕ್ಕಾಗಿ ಆಗಮಿಸಿದ್ದ ನೂರಾರು ರೈತರು ಬೀಜ ಸಿಗದೇ ಬರಿಗೈಲಿ ವಾಪಸಾದರು.
ಕರ್ನಾಟಕ ಬೀಜ ನಿಗಮದಿಂದ ಪ್ರಾದೇಶಿಕ ಎಣ್ಣೆ ಬೀಜ ಬೆಳೆಗಾರರ ಸಹಕಾರಿ ಸಂಘಗಳ ಒಕ್ಕೂಟ ನಿಯಮಿತ ಜಿಲ್ಲಾ ಕಚೇರಿ ಮೂಲಕ ಸೋಮವಾರದಿಂದ ಉಚಿತವಾಗಿ ಬೀಜ ವಿತರಿಸಲಾಗುತ್ತಿತ್ತು. ಸೋಮವಾರ ಮಧ್ಯರಾತ್ರಿವರೆಗೆ ಬೀಜ ವಿತರಿಸಲಾಗಿತ್ತು. ಮಂಗಳವಾರವೂ ರೈತರ ಸಂಖ್ಯೆ ಹೆಚ್ಚಾಗಿ, ಪ್ರತಿಭಟನೆಯೂ ನಡೆದಿತ್ತು.
ಬುಧವಾರ ಬೀಜ ಖಾಲಿ ಆಗಿದ್ದರಿಂದ ಆಡಳಿತ ಮಂಡಳಿಯವರು ರೈತರಿಗೆ ಆಧಾರ್ ಕಾರ್ಡ್, ಪಹಣಿ ವಾಪಸ್ ಕೊಟ್ಟರು. ಇದನ್ನು ವಿರೋಧ ವ್ಯಕ್ತಪಡಿಸಿದ ರೈತರು, ಸೋಯಾಬೀನ್ ಬೀಜ ನೀಡುವುದಾಗಿ ಹೇಳಿ ಆಧಾರ್ ಕಾರ್ಡ್ ಹಾಗೂ ಪಹಣಿ ಪಡೆಯಲಾಗಿತ್ತು. ಆದರೆ, ಈಗ ಏಕೆ ಬೀಜ ಕೊಡುತ್ತಿಲ್ಲ. ಹೆಚ್ಚಿನ ರೈತರಿಗೆ ಬೀಜ ತಲುಪಿಲ್ಲ. ಅಷ್ಟರಲ್ಲೇ ಬೀಜ ಖಾಲಿ ಹೇಗಾಯಿತು ಎಂದು ಪ್ರಶ್ನಿಸಿದರು. ಇದೇ ವಿಚಾರವಾಗಿ ಮಾತಿನ ಚಕಮಕಿಯೂ ನಡೆಯಿತು.
ಸ್ಥಳದಲ್ಲಿ ಭದ್ರತೆ ಕೈಗೊಂಡಿದ್ದ ಪೊಲೀಸರು ಬುಧವಾರ ಬೆಳಗ್ಗೆಯಿಂದಲೇ ಗೋದಾಮು ಬಳಿ ರೈತರನ್ನು ಸಮಾಧಾನಪಡಿಸಿದರು. ರೈತರು ಆಧಾರ್, ಪಹಣಿ ಪಡೆದು ತೆರಳುವಂತೆ ಮನವೊಲಿಸಿದರು.
ಅನ್ನದಾತನ ಆಕ್ರೋಶ
ಬೀಜಗಳು ಖಾಲಿ ಆಗಿವೆ ಎಂಬ ಕಾರಣ ನೀಡಿ ಬುಧವಾರದಿಂದಲೇ ಬೀಜ ವಿತರಣೆಯನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಮೂರ್ನಾಲ್ಕು ದಿನಗಳಿಂದ ಬೀಜಕ್ಕಾಗಿ ಸರದಿಯಲ್ಲಿ ನಿಲ್ಲುತ್ತಿದ್ದ ರೈತರು, ತಮ್ಮ ಆಧಾರ್‌ಕಾರ್ಡ್ ಹಾಗೂ ಪಹಣಿ ಪ್ರತಿಯನ್ನು ನೀಡಿದ್ದರು. ಬುಧವಾರ ಬೀಜ ವಿತರಣೆ ಸ್ಥಗಿತಗೊಳಿಸಿದ ಅಧಿಕಾರಿಗಳು, ರೈತರಿಗೆ ಆಧಾರ್ ಕಾರ್ಡ್ ಹಾಗೂ ಪಹಣಿ ಪ್ರತಿಯನ್ನು ವಾಪಸ್ ನೀಡಿದರು. ಬೀಜಕ್ಕಾಗಿ ಗೋದಾಮಿಗೆ ಬಂದಿದ್ದ ರೈತರು, ಆಡಳಿತ ಮಂಡಳಿ ವಿರುದ್ಧ ಆಕ್ರೋಶ ಹೊರಹಾಕಿದರು.