Haveri, Farmers, El Nino, Effect, Rain, Agri,
ಹಾವೇರಿ: ಜೂನ್ ಆರಂಭದಲ್ಲಿ ಅಬ್ಬರಿಸಿ ಬೊಬ್ಬಿರಿದಿದ್ದ ಮುಂಗಾರು ಮಳೆ, ಎಲ್‌ನಿನೊ ಎಫೆಕ್ಟ್‌ನಿಂದ ಕಣ್ಮರೆಯಾಗಿದ್ದು, ಅನ್ನದಾತ ಮಳೆಗಾಗಿ ಕಾಯುತ್ತ ಆಕಾಶದತ್ತ ಮುಖ ಮಾಡಿದ್ದಾನೆ. ಮುಂಗಾರು ಬಿತ್ತನೆಗಾಗಿ ಹಗಲು, ರಾತ್ರಿ ನಿದ್ದೆಗೆಟ್ಟು ಸಾಲ ಮಾಡಿ ಬೀಜ, ಗೊಬ್ಬರ, ಡೀಸೆಲ್, ಇತರ ಸಾಮಗ್ರ ಸಂಗ್ರಹಿಸಿ ಇಟ್ಟಿದ್ದ ರೈತ ಇದೀಗ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾನೆ.
ಜಿಲ್ಲೆಯಲ್ಲಿ ಮಾರ್ಚ್ 1ರಿಂದ ಮೇ 31ರವರೆಗೆ ಮುಂಗಾರು ಪೂರ್ವ ಮಳೆ ವಾಡಿಕೆಗಿಂತ ಹೆಚ್ಚಾಗಿ ಸುರಿದಿತ್ತು. 119 ಮಿ.ಮೀ. ವಾಡಿಕೆಗಿಂತ ಹೆಚ್ಚಾಗಿ 150 ಮಿ.ಮೀ. ಮಳೆ ಸುರಿದಿತ್ತು. ಆದರೆ, ಜೂನ್‌ನಲ್ಲಿ ಮಳೆರಾಯ ಕಾಣೆಯಾಗಿದ್ದಾನೆ. ಜೂನ್ 1ರಿಂದ 15ರವರೆಗೆ 57 ಮಿ.ಮೀ. ವಾಡಿಕೆ ಮಳೆ ಆಗಬೇಕಿತ್ತು. ಆದರೆ, ಕೇವಲ 29 ಮಿ.ಮೀ. ಮಳೆ ಮಾತ್ರ ಸುರಿಯುವ ಮೂಲಕ ಶೇ.48ರಷ್ಟು ಮಳೆ ಕೊರತೆ ಉಂಟಾಗಿದೆ.
ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಈವರೆಗೆ ಶೇ.68.55ರಷ್ಟು ಬಿತ್ತನೆ ಕಾರ್ಯ ಪೂರ್ಣಗೊಂಡಿದ್ದು, ಶೇ.32ರಷ್ಟು ಪ್ರದೇಶದಲ್ಲಿ ಬಿತ್ತನೆ ಮಾಡಬೇಕಿದೆ. 3,28,956 ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದ್ದು, ಈವರೆಗೆ 2,25,511 ಹೆಕ್ಟೇರ್ ಮಾತ್ರ ಬಿತ್ತನೆ ಕಾರ್ಯ ಮುಕ್ತಾಯಗೊಂಡಿದೆ. ದ್ವಿದಳ ಮತ್ತು ಎಣ್ಣೆ ಕಾಳುಗಳಾದ ಸೋಯಾಬೀನ್, ಮೆಕ್ಕೆಜೋಳ, ಭತ್ತ, ಜೋಳ, ರಾಗಿ, ತೊಗರಿ, ಉದ್ದು, ಹೆಸರು, ಅಲಸಂದೆ, ಶೇಂಗಾ, ಸೂರ್ಯಕಾಂತಿ, ಸೇರಿದಂತೆ ವಿವಿಧ ಬೀಜಗಳನ್ನು ಬಿತ್ತನೆ ಮಾಡಿ, ಮಳೆಗಾಗಿ ಕಾಯುತ್ತಿದ್ದಾರೆ.
ಮುಂಗಾರು ಹಂಗಾಮಿಗಾಗಿ ರೈತರು ಮೇನಲ್ಲಿ ಸಾಲ ಮಾಡಿ ಬೀಜ, ಗೊಬ್ಬರ, ಡೀಸೆಲ್ ಮತ್ತಿತರ ಸಾಮಗ್ರಿಗಳನ್ನು ಸಂಗ್ರಹಿಸಿ ಇಟ್ಟುಕೊಂಡಿದ್ದರು. ಜೂನ್ ಆರಂಭದಲ್ಲಿ ಮಳೆ ಬೀಳುತ್ತಿದ್ದಂತೆ ಬಿತ್ತನೆ ಆರಂಭಿಸಿದರು. ಆದರೆ, ಒಂದು ವಾರದಿಂದ ಈಚೆಗೆ ಮಳೆರಾಯ ಕೈಕೊಟ್ಟಿದ್ದಾನೆ. ಹೀಗಾಗಿ, ಬಿತ್ತಿರುವ ಬೀಜಗಳು ಮೊಳಕೆ ಒಡೆದು ಸಸಿಯಾಗಿದ್ದು, ಮಳೆಗಾಗಿ ಕಾದು ಕುಳಿತಿವೆ. ಹಲವೆಡೆ ಸಸಿಗಳು ಬತ್ತಿ ಹೋಗುವ ಆತಂಕ ರೈತರಲ್ಲಿ ಶುರುವಾಗಿದೆ.
ಜಿಲ್ಲೆಯ ನಾಲ್ಕು ನದಿಗಳಲ್ಲಿ ನೀರಿನ ಹರಿವು ಕಡಿಮೆಯಾಗುತ್ತಿದ್ದು, ಮುಂಗಾರು ಮಳೆ ಕೈಕೊಟ್ಟರೆ ಇರುವ ನೀರೂ ಬತ್ತಿ ಕುಡಿಯುವ ನೀರಿಗೂ ಕೊರತೆ ಉಂಟಾಗಿ, ಬರಗಾಲ ಎದುರಾಗುವ ಭೀತಿ ರೈತರಲ್ಲಿ ಮೂಡಿದೆ. ಸರ್ಕಾರ ಹಾಗೂ ಜಿಲ್ಲಾಡಳಿತ, ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಈಗಿನಿಂದಲೇ ಈ ಕುರಿತು ಅಗತ್ಯ ಸಿದ್ಧತೆ ಕೈಗೊಳ್ಳಬೇಕು ಎಂಬುದು ರೈತರ ಆಗ್ರಹವಾಗಿದೆ.
ರಸಗೊಬ್ಬರ, ಬಿತ್ತನೆ ಬೀಜ ವಿತರಣೆ
ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ ಜಿಲ್ಲೆಗೆ 65,658 ಮೆಟ್ರಿಕ್ ಟನ್ ಯೂರಿಯಾ ಗೊಬ್ಬರಕ್ಕೆ ಬೇಡಿಕೆಯಿದೆ. ಈವರೆಗೆ ಆರಂಭಿಕ ಶಿಲ್ಕು ಮತ್ತು ಸರಬರಾಜು ಸೇರಿದಂತೆ 31,518 ಮೆಟ್ರಿಕ್ ಟನ್ ದಾಸ್ತಾನು ಆಗಿದೆ. ಈಗಾಗಲೇ 19,717 ಮೆ.ಟ. ಹಂಚಿಕೆ ಮಾಡಲಾಗಿದ್ದು, 11,801 ಮೆ.ಟ. ಬಾಕಿ ಉಳಿದಿದೆ. ಡಿಎಪಿ 14,803 ಮೆ.ಟ., ಎಂಒಪಿ 1,240, ಕಾಂಪ್ಲೆಕ್ಸ್ 28,132 ಮೆ.ಟ. ಗೊಬ್ಬರ ಜಿಲ್ಲೆಗೆ ಸರಬರಾಜಾಗಿದೆ. ಯೂರಿಯಾ ಮತ್ತು ಡಿಎಪಿ ಗೊಬ್ಬರದ ಕೊರತೆ ರೈತರಲ್ಲಿ ಕಾಡುತ್ತಿದೆ.
ಬಿತ್ತನೆ ಬೀಜ ಈಗಾಗಲೇ ಬಹುತೇಕ ಸರಬರಾಜು ಮಾಡಲಾಗಿದ್ದು, ಈ ಬಾರಿ ರೈತರು ಮೆಕ್ಕೆಜೋಳಕ್ಕಿಂತ ಸೋಯಾಬೀನ್‌ನತ್ತ ಹೆಚ್ಚು ಮುಖ ಮಾಡಿದ್ದಾರೆ. 12,267 ಕ್ವಿಂಟಾಲ್ ಸೋಯಾಬೀನ್ ಬೀಜ ವಿತರಿಸಲಾಗಿದೆ. ಮೆಕ್ಕೆಜೋಳ 2,947, ಶೇಂಗಾ 684, ಭತ್ತ 613, ತೊಗರಿ ಬೀಜ 336 ಕ್ವಿಂಟಾಲ್ ವಿತರಣೆ ಮಾಡಲಾಗಿದೆ ಎಂದು ಕೃಷಿ ಇಲಾಖೆ ಅಂಕಿ-ಅಂಶಗಳು ತಿಳಿಸಿವೆ.
ತಾಲೂಕುವಾರು ಮಳೆ ವಿವರ (ಜ.1ರಿಂದ ಜೂ.15ರವರೆಗೆ)
ತಾಲೂಕು ವಾಡಿಕೆ ಮಳೆ ವಾಸ್ತವ ಮಳೆ ಕೊರತೆ/ ಹೆಚ್ಚುವರಿ
------------------------------------------------------------------------------------
"
ಕೋಟ್: ಈ ಸಲ ಎಲ್‌ನಿನೊ ಎಫೆಕ್ಟ್‌ನಿಂದ ಮಳೆ ಕೊರತೆ ಸಾಧ್ಯತೆ ಇದೆ. ಮೇ 20ರ ನಂತರ ಮಳೆ ಬರುವ ಸೂಚನೆ ಇದೆ. ದೊಡ್ಡ ಮಳೆ ಆಗಿ ತೇವಾಂಶ ಇದ್ದರೆ ಮಾತ್ರ ಬಿತ್ತನೆ ಕಾರ್ಯ ಮಾಡಬೇಕು. ಈಗಾಗಲೇ ಬಿತ್ತನೆ ಮಾಡಿರುವ ರೈತರು, ನೀರಿನ ಲಭ್ಯತೆ ಇರುವರು, ಸ್ಪ್ರಿಂಕ್ಲರ್ ಮೂಲಕ ಬೆಳೆಗಳಿಗೆ ನೀರು ಹಾಯಿಸಬೇಕು. ಕುಂಟೆ ಹೊಡೆಯಬೇಕು. ಕೀಟಬಾಧೆ ಬಂದರೆ ರೈತ ಸಂಪರ್ಕ ಕೇಂದ್ರದಿಂದ ಕೀಟನಾಶಕ ಪಡೆದು ಸಿಂಪಡಿಸಬೇಕು.
— ಡಾ.ಕೆ.ಮಲ್ಲಿಕಾರ್ಜುನ, ಜಂಟಿ ನಿರ್ದೇಶಕ, ಕೃಷಿ ಇಲಾಖೆ
"
ಈ ಬಾರಿ ಎಲ್ ನಿನೊ ಪರಿಣಾಮ ಮಳೆ ಕಡಿಮೆಯಾಗುವ ಸಾಧ್ಯತೆ ಇದ್ದು, ಅತಿವೃಷ್ಟಿ ಭೀತಿ ಎದುರಾಗಿದೆ. ಜಿಲ್ಲಾಡಳಿತ ಹಾಗೂ ಸರ್ಕಾರ ಈಗಿನಿಂದಲೇ ಅಗತ್ಯ ತಯಾರಿ ಮಾಡಿಕೊಳ್ಳಬೇಕು. ರೈತರ ನೆರವಿಗೆ ಧಾವಿಸಬೇಕು. ಅಗತ್ಯ ಸಲಹೆ, ಸೂಚನೆ, ಪರಿಹಾರ ನೀಡಿ ರೈತರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕು.
— ಭುವನೇಶ್ವರ ಶಿಡ್ಲಾಪುರ, ಜಿಲ್ಲಾಧ್ಯಕ್ಷ, ರಾಜ್ಯ ಕಬ್ಬು ಬೆಳೆಗಾರರ ಸಂಘ