Ex Minister, BC Patil 
ಹಾವೇರಿ

ಶಿಕ್ಷಕನ ಮೇಲಿನ ಹಲ್ಲೆ ಕೇಸ್ ಸಿಐಡಿಗೆ ಒಪ್ಪಿಸಿ; ಸರ್ಕಾರಕ್ಕೆ ಮಾಜಿ ಸಚಿವ ಬಿ.ಸಿ.ಪಾಟೀಲ ಆಗ್ರಹ; ಜಿಲ್ಲೆಯಲ್ಲಿ ಮಟ್ಕಾ, ಗಾಂಜಾ, ಇಸ್ಪೀಟ್ ಹಾವಳಿ ವಿಪರೀತ

ಪ್ರಮುಖ ಮುಖ್ಯಾಂಶಗಳು

  • ಸವಣೂರ ಶಿಕ್ಷಕನಿಗೆ ಚಪ್ಪಲಿ ಹಾರ ಹಾಕಿ, ಥಳಿಸಿದ ಘಟನೆ ಖಂಡನಾರ್ಹವಾದದ್ದು.
  • ಸ್ಥಳೀಯ ಪೊಲೀಸರನ್ನು ಹೊರಗಿಟ್ಟು ಸಿಐಡಿ ಪೊಲೀಸರಿಂದ ನಿಷ್ಪಕ್ಷವಾಗಿ ತನಿಖೆ ನಡೆಸಿ
  • ಮಾಜಿ ಸಚಿವ ಬಿ.ಸಿ. ಪಾಟೀಲ ಆಗ್ರಹ
ಹಾವೇರಿ: ಸವಣೂರ ಪಟ್ಟಣದ ಉರ್ದು ಶಾಲೆಯ ಶಿಕ್ಷಕನಿಗೆ ಚಪ್ಪಲಿ ಹಾರ ಹಾಕಿ, ಥಳಿಸಿದ ಘಟನೆ ಖಂಡನಾರ್ಹವಾದದ್ದು. ಕಾನೂನು ಕೈಗೆತ್ತಿಕೊಳ್ಳಲು ಯಾರಿಗೂ ಅಧಿಕಾರ ಇಲ್ಲ, ಸ್ಥಳೀಯ ಪೊಲೀಸರನ್ನು ಹೊರಗಿಟ್ಟು ಸಿಐಡಿ ಪೊಲೀಸರಿಂದ ನಿಷ್ಪಕ್ಷವಾಗಿ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಆಗ್ರಹಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಶಿಕ್ಷಕನಿಗೆ ಹಲ್ಲೆ ಪ್ರಕರಣದಲ್ಲಿ ಸರ್ಕಾರ ಬೇಜವಾಬ್ದಾರಿಯಿಂದ ಕೆಲಸ ಮಾಡಿದರೆ ಮುಂದೆ ದೊಡ್ಡ ತಪ್ಪು ನಡೆಯುತ್ತದೆ. ಜಿಲ್ಲೆಯಲ್ಲಿ ಇಸ್ಪಿಟ್, ಮಟ್ಕಾ ಹಾವಳಿ, ಗಾಂಜಾ ಮಾರಾಟ ವಿಪರೀತವಾಗಿದೆ. ಜಿಲ್ಲಾ ಪೊಲೀಸ್ ಇಲಾಖೆ ನಿರ್ಲಿಪ್ತವಾಗಿದೆ. ಸಣ್ಣಪುಟ್ಟ ಪ್ರಕರಣಗಳಿಗೂ ಎಫ್‌ಐಆರ್ ದಾಖಲಿಸಲು ಪ್ರಭಾವ ಬೀರುವುದು ಅನಿವಾರ್ಯ ಎಂಬಂತಾಗಿದೆ ಎಂದರು.
ಬೆಳಗಾವಿ ಅಧಿವೇಶನದಲ್ಲಿ ನಡೆಯುತ್ತಿರುವ ಸಿಎಂ ಕುರ್ಚಿ ಚರ್ಚೆ ಕುರಿತು ಪ್ರತಿಕ್ರಿಯಿಸಿದ ಅವರು, ಸಿಎಂ ಕುರ್ಚಿ ಅಲುಗಾಡುತ್ತಿದೆ. ಕುರ್ಚಿಯ ಕ್ರಾಂತಿ ನಡೆಯುತ್ತಿದೆ. ನಾಲ್ಕೈದು ತಿಂಗಳಿಂದ ಸರ್ಕಾರ ಸಂಪೂರ್ಣ ಸತ್ತು ಹೋಗಿದೆ. ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ, ಯಾವ ಅಧಿಕಾರಿಗಳು ಮಂತ್ರಿಗಳ ಮಾತು ಕೇಳುತ್ತಿಲ್ಲ. ಇದೊಂದು ಬ್ರೇಕ್ ಪಾಸ್ಟ್, ನಾಟಿಕೋಳಿ ಸರ್ಕಾರ ಎಂದು ವ್ಯಂಗ್ಯವಾಡಿದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ನಮ್ಮ ಸರ್ಕಾರ ಮೇಲೆ ಶೇ.40 ಕಮೀಷನ್ ಸರ್ಕಾರ ಎಂದು ಕಾಂಗ್ರೆಸ್ಸಿಗರು ಸುಳ್ಳು ಆರೋಪ ಮಾಡಿದ್ದರು. ಇವತ್ತು ಅದೇ ಗುತ್ತಿಗೆದಾರರು ಸ್ವಯಂಪ್ರೇರಣೆಯಿಂದ ಈ ಸರ್ಕಾರದಲ್ಲಿ ಶೇ.60 ಕಮೀಷನ್ ದಂಧೆ ನಡೆಯುತ್ತಿದೆ ಎಂದು ಹೇಳುತ್ತಿದ್ದಾರೆ. ಈ ಸರ್ಕಾರ ಸಂಪೂರ್ಣ ಭ್ರಷ್ಟಾಚಾರದಲ್ಲಿ ಮುಳುಗಿದೆ. ಯಥಾ ರಾಜಾ, ಥತಾ ಪ್ರಜಾ ಎಂಬಂತೆ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತಲ್ಲೀನರಾಗಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿಗೆ ಬರಬೇಕಾದರೆ ಮುಂದೆ ಸಿಎಂ ಸ್ಥಾನ ಕೊಡಬೇಕೆಂದು ಯತ್ನಾಳ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಯತ್ನಾಳ 2028ಕ್ಕೆ ನಾನೇ ಸಿಎಂ ಎಂದು ಹೇಳುತ್ತಿದ್ದಾರೆ. ಅವರು ಯಾವ ಪಕ್ಷದಿಂದ ಸಿಎಂ ಆಗ್ತಾರೆ, ಯತ್ನಾಳ ದಿನಾ ಒಂದು ಹೇಳುತ್ತಾರೆ. ಅದಕ್ಕೆ ಮಹತ್ವ ಕೊಡುವುದು ಸರಿಯಲ್ಲ, ಯತ್ನಾಳ ಬಹಳ ವಿಶೇಷವೇನೂ ಅಲ್ಲ, ಅವರೂ ಒಬ್ಬ ಶಾಸಕರಷ್ಟೇ. ಪ್ರತಿದಿನ ಬಾಯಿಗೆ ಬಂದಂತೆ ಬೈಯ್ಯೋದು ಸರಿನಾ ಎಂದರು.
ಬಿಜೆಪಿಯ ರಸ್ತೆ ಗ್ಯಾರಂಟಿ ಕೊಡಿ ಎಂಬ ಅಭಿಯಾನಕ್ಕೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ರೈತರಿಗೆ ಆತ್ಮಹತ್ಯೆ ಗ್ಯಾರಂಟಿ ಕೊಟ್ಟಿದೆ. ಈ ಸರ್ಕಾರ ಬಂದ ಮೇಲೆ ಹೆಚ್ಚು ರೈತರ ಆತ್ಮಹತ್ಯೆಯಾಗಿದೆ. ಅತ್ಯಾಚಾರ ಗ್ಯಾರಂಟಿ ಕೊಟ್ಟಿದ್ದಾರೆ. ಸರ್ಕಾರದ ವೈಪಲ್ಯಗಳನ್ನ ಜನರಿಗೆ ನಾವೇ ತಿಳಿಸುತ್ತೇವೆ ಎಂದರು.
ಮಾಜಿ ಶಾಸಕ ಅರುಣಕುಮಾರ ಪೂಜಾರ, ಬಸವರಾಜ ಅರಬಗೊಂಡ, ನಾಗೇಂದ್ರ ಕಟಕೋಳ, ಸುರೇಶ ಹೊಸಮನಿ, ವೆಂಕಟೇಶ ನಾರಾಯಣಿ, ರಾಜಶೇಖರ ಕಟ್ಟೇಗೌಡ್ರ, ಎಂ.ಎಸ್.ಪಾಟೀಲ, ಲಲಿತಾ ಗುಂಡೇನಹಳ್ಳಿ ಇತರರಿದ್ದರು.
ಆಸ್ಪತ್ರೆಗಳು ಕೆಳದರ್ಜೆಗೆ
ಮಾಸೂರು, ಕೋಡ, ರಟ್ಟಿಹಳ್ಳಿಯ ಸರ್ಕಾರಿ ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸುವ ಬದಲು ಸರ್ಕಾರ ಕೆಳದರ್ಜೆಗೆ ಇಳಿಸಲು ಹೊರಟಿದೆ. ನಾನು ಶಾಸಕನಾಗಿದ್ದಾಗ ಮಾಸೂರು ಆಸ್ಪತ್ರೆಯನ್ನು 32 ಬೆಡ್‌ಗೆ ಮೇಲ್ದರ್ಜೆಗೆ ಏರಿಸಿದ್ದೆ. ರಟ್ಟಿಹಳ್ಳಿ ಆಸ್ಪತ್ರೆಯನ್ನು 100ಬೆಡ್‌ಗೆ ಮೇಲ್ದರ್ಜೆಗೆ ಏರಿಸಿದ್ದೆ. ಇಲ್ಲಿ ಹೆರಿಗೆಗಳು ಆಗುತ್ತಿಲ್ಲ ಎಂಬ ಕಾರಣವೊಡ್ಡಿ ಕೆಳದರ್ಜೆಗೆ ಇಳಿಸಲು ಸರ್ಕಾರ ನಿರ್ಧರಿಸಿದೆ. ಹೆರಿಗೆ ಆಗಬೇಕಾದರೆ ಸರಿಯಾದ ವೈದ್ಯರು, ಸೌಲಭ್ಯ ಬೇಕಾಗುತ್ತೆ. ಆದರೆ, ವೈದ್ಯರು, ಸೌಲಭ್ಯಗಳನ್ನೇ ಕೊಟ್ಟಿಲ್ಲ, ಹೀಗೆ ರಾಜ್ಯದಲ್ಲಿ 242 ಆಸ್ಪತ್ರೆಗಳನ್ನು ಕೆಳದರ್ಜೆಗೆ ಇಳಿಸಲು ಸರ್ಕಾರ ಮುಂದಾಗಿದೆ. ಇದರಿಂದ ಸರ್ಕಾರಕ್ಕೆ 1,500 ಕೋಟಿ ರೂ., ಉಳಿತಾಯ ಆಗುತ್ತೆ ಎಂಬ ಲೆಕ್ಕ ಹಾಕಿದ್ದಾರೆ. ಇದಕ್ಕಿಂತ ದುರಂತ ಇನ್ನೊಂದಿಲ್ಲ. ಕ್ಷೇತ್ರದ ಶಾಸಕರು ಇದರ ಬಗ್ಗೆ ಚಕಾರ ಎತ್ತುತ್ತಿಲ್ಲ, ಇದು ಸರ್ಕಾರದ ದಿವಾಳಿಯಾಗಿರುವುದರ ಸೂಚಕ ಎಂದು ಬಿ.ಸಿ.ಪಾಟೀಲ ಆಕ್ರೋಶ ಹೊರಹಾಕಿದರು.