Haveri, Ex Minister, BC Patil, About, CJP, 
ಹಾವೇರಿ

ಸಿಎಂ ಡಿ.ಕೆ.ಶಿವಕುಮಾರ ರಾಜೀನಾಮೆ ನೀಡಲಿ; ಮಾಜಿ ಸಚಿವ ಬಿ.ಸಿ.ಪಾಟೀಲ ಆಗ್ರಹ

ಹಾವೇರಿ: ರಾಜ್ಯದ ಕೆಪಿಎಸ್‌ಸಿಯಲ್ಲಿ ದೊಡ್ಡ ಕರ್ಮಕಾಂಡ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ರಾಜೀನಾಮೆ ನೀಡಬೇಕು ಎಂದು ಮಾಜಿ ಕೃಷಿ ಸಚಿವ ಬಿ.ಸಿ.ಪಾಟೀಲ ಆಗ್ರಹಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿವಿಧ ರಾಜ್ಯಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಗಲಿ ಯಾವ ಕಾಂಗ್ರೆಸ್ ನಾಯಕರೂ ಹೇಳಿಕೆ ಕೊಡುತ್ತಿಲ್ಲ. ಅದನ್ನು ಬಿಟ್ಟು ವಿಶ್ವ ನಾಯಕ ನರೇಂದ್ರ ಮೋದಿಯವರ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಕಾಂಗ್ರೆಸ್‌ನವರಿಗೆ ನೇರವಾಗಿ ಹೋರಾಟ ಮಾಡಲಿಕ್ಕೆ ಬರಲ್ಲ, ದೇಶದ್ರೋಹಿಗಳು, ಭಯೋತ್ಪಾದಕರಿಂದ ಕಟ್ಟಿದ ‘ಜಿರಳೆ ಪಕ್ಷ’ವನ್ನು ಮುಂದಿಟ್ಟುಕೊಂಡು ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ, ಜಾರ್ಖಂಡ, ತೆಲಂಗಾಣ, ತಮಿಳುನಾಡು, ಪಶ್ಚಿಮಬಂಗಾಳ, ಕರ್ನಾಟಕ, ಕೇರಳ ಹೀಗೆ ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳು ಆಡಳಿತದಲ್ಲಿರುವ ರಾಜ್ಯಗಳಲ್ಲೂ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ. ಅಲ್ಲಿಯೂ ರಾಜೀನಾಮೆ ಕೊಟ್ಟಿದ್ದೀರಾ ಎಂದು ಪ್ರಶ್ನಿಸಿದರು.
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಬಗ್ಗೆ ಈಗಾಗಲೇ ಪ್ರಧಾನಿ ನರೇಂದ್ರ ಮೋದಿಯವರು ಪ್ರತಿಕ್ರಿಯಿಸಿದ್ದಾರೆ. ನಾವು ಯುವಕರ ಪರ ಇದ್ದೇವೆ. ಯುವ ಜನತೆಯ ಭವಿಷ್ಯ ಹಾಳಾಗಲು ಬಿಡುವುದಿಲ್ಲ. ಆರೋಪಿತರನ್ನು ಈಗಾಗಲೇ ಅರೆಸ್ಟ್ ಮಾಡಲಾಗಿದೆ. ಮರು ಪರೀಕ್ಷೆ ನಡೆಸುವ ಮೂಲಕ ಯಾವ ವಿದ್ಯಾರ್ಥಿಗೂ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ಕೊಟ್ಟಿದೆ ಎಂದು ಹೇಳಿದರು.
ರಾಜ್ಯ ಸರ್ಕಾರದ ಖರ್ಚಿನಲ್ಲಿ ಸಿಎಂ, ಶಾಸಕರು ಸ್ವಂತ ವಿಮಾನ ಮಾಡಿಕೊಂಡು ದೆಹಲಿಗೆ ಹೋಗಿ ಪ್ರಧಾನಿಯವರ ಮನೆ ಮುಂದೆ ಪ್ರತಿಭಟನೆ ಮಾಡಿದರು. ಸಂಪುಟ ವಿಸ್ತರಣೆ ನೆಪದಲ್ಲಿ ಜನಸಾಮಾನ್ಯರ ದುಡ್ಡನ್ನು ದುಂದು ವೆಚ್ಚ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.