Haveri, Ex, Freedom Fighters, Meeting,
ಹಾವೇರಿ: ಸ್ವಾತಂತ್ರ್ಯ ಯೋಧರ ಮಕ್ಕಳು ಸಂಕಷ್ಟದಲ್ಲಿದ್ದಾರೆ. ಬೇರೆ ರಾಜ್ಯಗಳಲ್ಲಿನ ಸರ್ಕಾರಗಳು ಅವರಿಗೆ ಕೆಲವು ಸೌಲಭ್ಯ ನೀಡುತ್ತಿವೆ. ನಮ್ಮ ರಾಜ್ಯದಲ್ಲಿ ಮಾತ್ರ ಹಿನ್ನಡೆಯಾಗಿದೆ. ನಾವು ಸಂಘಟಿತರಾಗಿ ಹೋರಾಡಿದಾಗ ಮಾತ್ರ ನಮ್ಮ ಹಕ್ಕುಗಳನ್ನು ಪಡೆಯಲು ಸಾಧ್ಯ ಎಂದು ನವಲಗುಂದದ ಸ್ವಾತಂತ್ರ್ಯ ಹೋರಾಟಗಾರ ಭೀಮಪ್ಪ ಹಡಪದ ಹೇಳಿದರು.
ನಗರದ ವೀರಸೌಧದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರಾಜ್ಯ ಸ್ವಾತಂತ್ರ್ಯ ಹೋರಾಟಗಾರರ ಹಾಗೂ ಉತ್ತರಾಧಿಕಾರಿಗಳ ಸಂಘದ 6ನೇ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಬಹುತೇಕರು ತಮ್ಮ ಕೊನೆಯ ದಿನಗಳನ್ನು ಸಂಕಷ್ಟದಲ್ಲಿಯೇ ಕಳೆದರು. ಅವರ ಮಕ್ಕಳೂ ಕೂಡ ಸಮಸ್ಯೆಗಳಿಂದ ಮುಕ್ತರಾಗದೇ ಉಳಿದರು. ದೇಶಕ್ಕಾಗಿ ಶ್ರಮಿಸಿದ ಮಹನೀಯರ ಮನೆಯ ಮಕ್ಕಳನ್ನು ಸರ್ಕಾರ ನೋಡಿಕೊಳ್ಳಬೇಕಿತ್ತು. ಸರ್ಕಾರಗಳಿಗೆ ಈ ಬಗ್ಗೆ ಪತ್ರ ಬರೆದರೂ ಉಪಯೋಗವಾಗಿಲ್ಲ. ಇದೊಂದು ದುರಂತ. ಈ ಹಿನ್ನೆಲೆಯಲ್ಲಿ ತಾವು ಸಂಘಟಿತರಾಗಿ ಹೋರಾಟ ಮುಂದುವರೆಸಬೇಕು ಎಂದರು.
ಬೆಳಗಾವಿಯ ಸ್ವಾತಂತ್ರ್ಯ ಹೋರಾಟಗಾರ ರಾಜೇಂದ್ರ ಕಲಘಟಗಿ ಮಾತನಾಡಿ, ಜಗದೀಶ ಮಹಾರಾಜಪೇಟೆ ಅವರಿಗೆ ಸಂಘಟನಾ ಶಕ್ತಿ ಇದೆ. ಅವರು ತಮ್ಮೆಲ್ಲರ ಭಾವನೆಗಳನ್ನು ಗೌರವಿಸಿ ಮುಂದೆ ಸಾಗುವರು. ತಾವೆಲ್ಲರೂ ಅವರಿಗೆ ಸಹಕಾರ ನೀಡಿ ಸಂಘದ ಶ್ರೇಯೋಭಿವೃದ್ಧಿಗೆ ಶ್ರಮಿಸಿರಿ ಎಂದರು.
ರಾಜ್ಯ ಸ್ವಾತಂತ್ರ್ಯ ಹೋರಾಟಗಾರರ ಹಾಗೂ ಉತ್ತರಾಧಿಕಾರಿಗಳ ಸಂಘದ ಅಧ್ಯಕ್ಷ ಜಗದೀಶ ಮಹಾರಾಜಪೇಟ ಮಾತನಾಡಿ, ಸಂಘದ ಸರ್ವ ಪದಾಧಿಕಾರಿಗಳು ವಿಶ್ವಾಸದೊಂದಿಗೆ ಸಾಗೋಣ. ನಮ್ಮ ಹಕ್ಕುಗಳನ್ನು ಪಡೆಯಲು ಕಾರ್ಯಕಾರಿಣಿ ಸಭೆಯಲ್ಲಿ ಚರ್ಚಿಸಿ ಹೋರಾಟದ ರೂಪುರೇಷೆ ನಿರ್ಧರಿಸೋಣ. ಈಗಾಗಲೇ ಹಲವು ವರ್ಷಗಳಿಂದ ಹೋರಾಡುತ್ತಿರುವ ನಮಗೆ ನ್ಯಾಯ ಸಿಕ್ಕಿಲ್ಲ. ಎಲ್ಲರೂ ಸೇರಿ ನನ್ನ ಮೇಲೆ ವಿಶ್ವಾಸವಿಟ್ಟು ಅಧ್ಯಕ್ಷರನ್ನಾಗಿ ನೇಮಿಸಿದ್ದೀರಿ. ನಿಮ್ಮ ವಿಶ್ವಾಸಕ್ಕೆ ಚ್ಯುತಿ ಬಾರದಂತೆ ನಡೆಯುತ್ತೇನೆ ಎಂದರು.
ಚಂದ್ರಕಲಾ ಮಾಳಾಪುರ, ಮುರಿಗೆಪ್ಪ ಶೆಟ್ಟರ, ಬಾಬು ರೆಡ್ಡಿ, ಚಾಮರಾಜ ಪಾಟೀಲ, ಜುಬೇದಾ ನಾಯಕ್ ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಮಕ್ಕಳು ಉಪಸ್ಥಿತರಿದ್ದರು.
ಸಭೆಯಲ್ಲಿ ರಾಜ್ಯ ಸ್ವಾತಂತ್ರ್ಯ ಹೋರಾಟಗಾರರ ಹಾಗೂ ಉತ್ತರಾಧಿಕಾರಿಗಳ ಸಂಘದ ನೂತನ ಪದಾಧಿಕಾರಿಗಳ ನೇಮಕ ಜರುಗಿತು. ಅಧ್ಯಕ್ಷರಾಗಿ ಜಗದೀಶ ಮಹಾರಾಜಪೇಟೆ, ಉಪಾಧ್ಯಕ್ಷರಾಗಿ ಬಸವರಾಜ ಹಟ್ಟಿಗೌಡ್ರ, ಪ್ರಧಾನ ಕಾರ್ಯದರ್ಶಿಯಾಗಿ ಶಿವಯೋಗಯ್ಯ ಲೋಕನಗೌಡ್ರ, ಸಹಕಾರ್ಯದರ್ಶಿಯಾಗಿ ಶಕುಂತಲಾ ತಾಳೂರ, ಸಂಘಟನಾ ಕಾರ್ಯದರ್ಶಿಯಾಗಿ ಭರಮಪ್ಪ ತಾವರಗಿ, ಖಜಾಂಚಿಯಾಗಿ ಚಂದ್ರಶೇಖರ ಹಲಗೇರಿ, ಲೆಕ್ಕ ಪರಿಶೋಧಕರಾಗಿ ಸೌಭಾಗ್ಯ ಲೋಕನಗೌಡ್ರ, ಸದಸ್ಯರಾಗಿ ಕಲ್ಲನಗೌಡ ನರೇಂದ್ರ, ಮಲ್ಲಿಕಾರ್ಜುನ ಹಳ್ಳಿಯವರ, ವೀರಣ್ಣ ಮಹಾರಾಜಪೇಟೆ, ಗಂಗಪ್ಪ ಸಂಕಣ್ಣವರ, ಸದಾಶಿವ ಎಚ್.ಎಂ. ಆಯ್ಕೆಯಾದರು.