Bommai, Reject, Haveri University, Doctorate,  
ಹಾವೇರಿ

ಗೌರವ ಡಾಕ್ಟರೇಟ್ ತಿರಸ್ಕರಿಸಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ

ಹಾವೇರಿ: ಹಾವೇರಿ ವಿಶ್ವವಿದ್ಯಾಲಯವು ತಮ್ಮ ಸಿಂಡಿಕೇಟ್ ಸಭೆಯಲ್ಲಿ ನನಗೆ ಗೌರವ ಡಾಕ್ಟರೇಟ್ ನೀಡಲು ತೀರ್ಮಾನಿಸಿರುವುದಕ್ಕೆ ಕುಲಪತಿಗಳು, ಉಪಕುಲಪತಿಗಳು, ಕುಲಸಚಿವರು ಹಾಗೂ ಸಿಂಡಿಕೇಟ್ ಸದಸ್ಯರಿಗೆ ಹೃತ್ಪೂರ್ವಕ ಕೃತಜ್ಞತೆಗಳು ಮತ್ತು ಧನ್ಯವಾದಗಳನ್ನು ಸಲ್ಲಿಸುವೆ. 
ಆದರೆ, ನಾನು ಗೌರವ ಡಾಕ್ಟರೇಟ್ ಸ್ವೀಕರಿಸುವುದಿಲ್ಲ ಎಂದು ಈಗಾಗಲೇ ಕುಲಪತಿಗಳಿಗೆ ತಿಳಿಸಿದ್ದೇನೆ. ನಾನು ಸಾರ್ವಜನಿಕ ಸೇವೆಯಲ್ಲಿ ಇರುವುದರಿಂದ, ಸಾರ್ವಜನಿಕ ಸೇವೆಗೆ ಯಾವುದೇ ಪ್ರಶಸ್ತಿಯನ್ನು ಅಪೇಕ್ಷಿಸುವುದಿಲ್ಲ. ಸಾರ್ವಜನಿಕ ಸೇವೆಗೆ ಜನರ ಪ್ರೀತಿ ಮತ್ತು ವಿಶ್ವಾಸವೇ ನನಗೆ ಅತ್ಯಂತ ದೊಡ್ಡ ಗೌರವವೆಂದು ಭಾವಿಸುತ್ತೇನೆ. ಆದ್ದರಿಂದ ಗೌರವ ಡಾಕ್ಟರೇಟ್ ಸ್ವೀಕರಿಸುವುದಿಲ್ಲವೆಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಗೌರವ ಡಾಕ್ಟರೇಟ್ ಎಂಬುದು ದೀರ್ಘಕಾಲದಿಂದ ಯಾವುದಾದರೂ ಕ್ಷೇತ್ರದಲ್ಲಿ ವಿಶಿಷ್ಟ ಮತ್ತು ಮಹತ್ತರ ಸೇವೆ ಸಲ್ಲಿಸಿದವರಿಗೆ ನೀಡಬೇಕಾದ ಗೌರವವೆಂಬುದು ನನ್ನ ಅಭಿಪ್ರಾಯ. ಹೀಗಾಗಿ, ಇದನ್ನು ಅಂಥ ಸಾಧಕರಿಗೆ ನೀಡಬೇಕು. ರಾಜಕಾರಣಿಗಳಿಗೆ ಅಥವಾ ಸ್ವಯಂ ಪ್ರೇರಣೆಯಿಂದ ಸಮಾಜ ಸೇವೆಯಲ್ಲಿ ತೊಡಗಿರುವವರಿಗೆ ಗೌರವ ಡಾಕ್ಟರೇಟ್ ನೀಡುವುದು ಸಮಂಜಸವಲ್ಲ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಈ ವಿಷಯದಲ್ಲಿ ಪುನರ್ ವಿಚಾರ ಮಾಡಬೇಕೆಂದು ವಿನಂತಿಸುತ್ತೇನೆ.
ಮತ್ತೊಮ್ಮೆ ವಿನಯಪೂರ್ವಕವಾಗಿ ಗೌರವ ಡಾಕ್ಟರೇಟ್ ಸ್ವೀಕರಿಸುವುದಿಲ್ಲವೆಂದು ತಿಳಿಸುತ್ತ ಹಾವೇರಿ ವಿಶ್ವವಿದ್ಯಾಲಯಕ್ಕೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ಬಸವರಾಜ ಬೊಮ್ಮಾಯಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.