Haveri, Election Comission, MP Bommai, HK Patil,
ಹಾವೇರಿ: ಮತದಾರರ ಪಟ್ಟಿಯಲ್ಲಿ ಮಾಜಿ ಸಚಿವ, ಶಾಸಕ ಎಚ್.ಕೆ.ಪಾಟೀಲರ ಹೆಸರಲ್ಲಿ ಮೂರು ಕಡೆ ಹೆಸರು ನಮೂದಾಗಿರುವ ಲೋಪಗಳ ಕುರಿತು ಚುನಾವಣಾ ಆಯೋಗದ ಅಧಿಕಾರಿಗಳೇ ಸೂಕ್ತ ಸ್ಪಷ್ಟನೆ ನೀಡಬೇಕು, ಪಟ್ಟಿಯಲ್ಲಿನ ಲೋಪಗಳನ್ನು ಸರಿಪಡಿಸಬೇಕು ಎಂದು ಸಂಸದ ಬಸವರಾಜ ಬೊಮ್ಮಾಯಿ ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಎಚ್.ಕೆ.ಪಾಟೀಲರ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ ಬೊಮ್ಮಾಯಿ, ಗದಗ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಎಚ್.ಕೆ. ಪಾಟೀಲ ಎಂಬ ಹೆಸರು ಮೂರು ಕಡೆ ನಮೂದಾಗಿದೆ ಎಂದು ನಾನು ಹೇಳಿದ್ದೆ. ಮತದಾರರ ಪಟ್ಟಿ ಪರಿಷ್ಕರಣೆ ಸಂದರ್ಭದಲ್ಲಿ ಇದನ್ನು ಪರಿಶೀಲಿಸಬೇಕು ಎಂದು ಕೋರಿದ್ದೆ. ಕೇವಲ ಅವರ ಹೆಸರಷ್ಟೇ ಅಲ್ಲದೇ, ಗದಗದಲ್ಲಿ ಇಂತಹ ಸುಮಾರು 3,000ಕ್ಕೂ ಹೆಚ್ಚು ಹೆಸರುಗಳು ಎರಡು, ಮೂರು ಅಥವಾ ನಾಲ್ಕು ಕಡೆ ಇವೆ. ಇದರ ಪಟ್ಟಿಯನ್ನೂ ಸಹ ನಾವು ನೀಡಿದ್ದೇವೆ ಮತ್ತು ಇದನ್ನು ಪರಿಶೀಲಿಸಬೇಕು ಎಂದು ಒತ್ತಾಯಿಸಿದ್ದೇವೆ ಎಂದರು.
ಎಚ್.ಕೆ.ಪಿ. ಮಾತಿಗೆ ಆಕ್ಷೇಪ :
ಇದನ್ನು ಕೀಳುಮಟ್ಟದ ರಾಜಕಾರಣ ಎಂದು ಅವರು ಕರೆದಿದ್ದಾರೆ. ಆದರೆ, ನಾನು ಯಾವುದೇ ರಾಜಕೀಯ ಮಾತನಾಡಿಲ್ಲ. ಮ್ಯಾಪಿಂಗ್ ಮಾಡಿದಾಗ ಕಂಡುಬಂದ ಲೋಪಗಳನ್ನು ಮಾತ್ರ ಪ್ರಸ್ತಾಪಿಸಿದ್ದೇನೆ. ಇದನ್ನು ಕೀಳುಮಟ್ಟದ ರಾಜಕೀಯ ಎನ್ನುವ ಅವರ ಧೋರಣೆ ಸರಿಯಲ್ಲ. ಅವರು ತಮ್ಮ ಈ ಮಾತನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.
ಒಬ್ಬ ಜನಪ್ರತಿನಿಧಿಯಾಗಿ ಯಾವುದೇ ಒತ್ತಡಕ್ಕೆ ಮಣಿಯದೇ ನನ್ನ ಕರ್ತವ್ಯವನ್ನು ನಾನು ಮಾಡಿದ್ದೇನೆ. ಇದರಲ್ಲಿ ಕ್ಷಮಾಪಣೆ ಕೇಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಲೋಪಗಳಿಗೆ ಸೂಕ್ತ ಸ್ಪಷ್ಟನೆ ನೀಡುವುದನ್ನು ಬಿಟ್ಟು ಈ ರೀತಿ ಮಾತನಾಡುತ್ತಿರುವುದನ್ನು ನೋಡಿದರೆ ಅವರ ರಾಜಕಾರಣವೇ ಕೀಳುಮಟ್ಟಕ್ಕೆ ಹೋಗಿದೆ ಎಂದು ಅನಿಸುತ್ತದೆ. ಇಡೀ ವಿಚಾರದಲ್ಲಿ ಚುನಾವಣಾ ಆಯೋಗವು ಶೀಘ್ರದಲ್ಲೇ ಸ್ಪಷ್ಟನೆ ನೀಡುವುದು ಸೂಕ್ತ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.