Haveri, Dwadasha JyotirLinga, Annapurneshwari, Temple, Adhika Masa, Pooja,  
ಹಾವೇರಿ

ಅಧಿಕ ಮಾಸ ಅತ್ಯಂತ ಪವಿತ್ರವಾದುದು; ಭಕ್ತಿ, ದಾನ, ಧರ್ಮಾಚರಣೆಗೆ ಶ್ರೇಷ್ಠ ಸಮಯ * ಹರಸೂರು ಬಣ್ಣದಮಠದ ಶ್ರೀ ಹೇಳಿಕೆ

ಹಾವೇರಿ: ಹಿಂದೂ ಧರ್ಮದಲ್ಲಿ ವಿಶೇಷ ಮಹತ್ವ ಪಡೆದಿರುವ ಅಧಿಕ ಮಾಸವು ಭಕ್ತಿ, ಧರ್ಮ ಮತ್ತು ಸತ್ಕಾರ್ಯಗಳಿಗೆ ಮೀಸಲಾದ ಪವಿತ್ರ ಕಾಲವಾಗಿದೆ. ಸುಮಾರು ಮೂರು ವರ್ಷಗಳಿಗೊಮ್ಮೆ ಬರುವ ಈ ಮಾಸವನ್ನು ಪುರುಷೋತ್ತಮ ಮಾಸ ಎಂತಲೂ ಕರೆಯಲಾಗುತ್ತದೆ. ಸೂರ್ಯ ಮತ್ತು ಚಂದ್ರಮಾನ ಪಂಚಾಂಗಗಳ ಸಮನ್ವಯಕ್ಕಾಗಿ ಅಧಿಕ ಮಾಸವನ್ನು ಸೇರಿಸಲಾಗುತ್ತದೆ ಎಂದು ಹರಸೂರು ಬಣ್ಣದಮಠದ ಶ್ರೀ ಅಭಿನವರುದ್ರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಇಲ್ಲಿನ ಬಸವೇಶ್ವರನಗರ ಮಹಿಳಾ ನಾಗರಿಕ ವೇದಿಕೆ ವತಿಯಿಂದ ದ್ವಾದಶ ಜ್ಯೋತಿರ್ಲಿಂಗ, ಗಣೇಶ ಹಾಗೂ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಅಧಿಕಮಾಸದ ಪ್ರಯುಕ್ತ ಮಂಗಳವಾರ ಆಯೋಜಿಸಿದ್ದ ಮಹಿಳೆಯರಿಗೆ ಉಡಿ ತುಂಬುವ ಮತ್ತು ಬಾಗಿನ ಅರ್ಪಿಸುವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಅಧಿಕ ಮಾಸದಲ್ಲಿ ಭಕ್ತರು ದೇವರ ಆರಾಧನೆ, ಜಪ, ತಪ, ಧ್ಯಾನ, ಪಾರಾಯಣ ಹಾಗೂ ದಾನ-ಧರ್ಮಗಳಲ್ಲಿ ತೊಡಗಿಸಿಕೊಳ್ಳಬೇಕು. ಈ ಮಾಸದಲ್ಲಿ ದೈವ ಸಹಸ್ರನಾಮ, ಪುರಾಣ, ಪುಣ್ಯಕಥೆಗಳ ಪಠಣಕ್ಕೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದ್ದು, ಅನ್ನದಾನ, ವಸ್ತದಾನ, ಗೋಸೇವೆ, ಸೇರಿದಂತೆ ವಿವಿಧ ಪುಣ್ಯಕಾರ್ಯಗಳನ್ನು ಕೈಗೊಳ್ಳುವುದರಿಂದ ವಿಶೇಷ ಫಲ ದೊರೆಯುತ್ತದೆ ಎಂಬ ನಂಬಿಕೆ ಇದೆ ಎಂದರು.
ಅಧಿಕ ಮಾಸವು ಮಾನವನಿಗೆ ಆತ್ಮಾವಲೋಕನ, ಸದಾಚಾರ, ಪರೋಪಕಾರ ಮತ್ತು ಭಗವಂತನ ಮೇಲಿನ ಭಕ್ತಿಯನ್ನು ವೃದ್ಧಿಸುವ ಸಂದೇಶವನ್ನು ನೀಡುತ್ತದೆ. ಧರ್ಮಮಾರ್ಗದಲ್ಲಿ ಸಾಗುತ್ತ ಸಮಾಜದ ಒಳಿತಿಗಾಗಿ ಕಾರ್ಯನಿರ್ವಹಿಸುವಂತೆ ಪ್ರೇರೇಪಿಸುವ ಈ ಪವಿತ್ರ ಮಾಸವು ಭಾರತೀಯ ಸಂಸ್ಕೃತಿಯ ಆಧ್ಯಾತ್ಮಿಕ ಮೌಲ್ಯಗಳನ್ನು ಬಲಪಡಿಸುತ್ತದೆ. ಆದ್ದರಿಂದ ಸರ್ವರೂ ಧರ್ಮ ಮಾರ್ಗದಲ್ಲಿ ಸಾಗಿ ಪುಣ್ಯ ಸಂಪಾದಿಸಬೇಕು ಎಂದರು.
ಹರಸೂರ ಬಣ್ಣದ ಮಠದ ಮಹಿಳಾ ವೇದಿಕೆ ಅಧ್ಯಕ್ಷೆ ಪುಷ್ಪಾವತಿ ಹೊಸೂರ ಮಹಿಳೆಯರಿಗೆ ಬಾಗೀನ ಉಡುಗೊರೆ ಅರ್ಪಿಸಿದರು. ಕಾರ್ಯಕ್ರಮದ ನಂತರ ಪ್ರಸಾದ ವಿತರಿಸಲಾಯಿತು.
ಸಮಾರಂಭದಲ್ಲಿ ಶೋಭಾತಾಯಿ ಮಾಗಾವಿ, ಮಹಿಳಾ ವೇದಿಕೆ ಅಧ್ಯಕ್ಷೆ ಶಶಿಕಲಾ ಮಠದ, ಮತ್ತಿತರರು ಉಪಸ್ಥಿತರಿದ್ದರು. ಸರೋಜಿನಿ ಬನ್ನೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಮಮತಾ ಹಿಂಚಿಗೇರಿ ಪರಿಚಯಿಸಿದರು. ಲತಾ ಹಳಕೊಪ್ಪ ನಿರೂಪಿಸಿದರು. ಸರೋಜಾ ಬಣಕಾರ ವಂದಿಸಿದರು. ವೇದಿಕೆಯ ಎಲ್ಲ ಸದಸ್ಯರು, ದೇವಸ್ಥಾನ ಸಮಿತಿ ಪದಾಧಿಕಾರಿಗಳು, ಭಕ್ತರು ಪಾಲ್ಗೊಂಡಿದ್ದರು.