ಹಾವೇರಿ: ನಗರದಲ್ಲಿ ಬೀದಿನಾಯಿ ದಾಳಿ ತಪ್ಪಿಸಲು ಕೊನೆಗೂ ಹಾವೇರಿ ನಗರಸಭೆ ಇದೇ ಮೊದಲ ಬಾರಿಗೆ ಸಂತಾನಹರಣ ಚಿಕಿತ್ಸೆಗೆ ಮುಂದಾಗಿದೆ. ಜನರ ಒತ್ತಾಯಕ್ಕೆ ಮಣಿದು ಬೀದಿ ನಾಯಿಗಳಿಗೆ ಕಡಿವಾಣ ಹಾಕುವ ಪ್ರಯತ್ನಕ್ಕೆ ನಗರಸಭೆ ಕೈಹಾಕಿದ್ದು, ಡಿ.19ರ ಶುಕ್ರವಾರ ನಗರಸಭೆಯಿಂದ ಅಧಿಕೃತ ಚಾಲನೆ ಸಿಗಲಿದೆ.
ಬೀದಿನಾಯಿಗಳ ಸಂತಾನಹರಣ ಶಸ್ತಚಿಕಿತ್ಸೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಆದೇಶದನ್ವಯ ಇದೇ ಪ್ರಥಮ ಬಾರಿಗೆ ಹಾವೇರಿ ನಗರದ ಗುತ್ತಲ ರಸ್ತೆಯ ಎಪಿಎಂಸಿ ಆವರಣದಲ್ಲಿ ಡಿ.19ರಂದು ಬೆಳಗ್ಗೆ 10 ಗಂಟೆಗೆ ನಗರಸಭೆ ಆಳಿತಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಬೀದಿನಾಯಿಗಳ ಸಂತಾನಹರಣ ಶಸ್ತಚಿಕಿತ್ಸಾ ಘಟಕ, ಆಶ್ರಯ ತಾಣಗಳ ಉದ್ಘಾಟನೆ ನಡೆಯಲಿದೆ.
ಬೀದಿನಾಯಿಗಳ ಸಂತಾನಹರಣ ಶಸ್ತಚಿಕಿತ್ಸೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಆದೇಶದನ್ವಯ ನಗರಸಭೆಯಿಂದ ಮೊದಲ ಬಾರಿಗೆ ಬೀದಿನಾಯಿಗಳನ್ನು ಹಿಡಿಯುವ ಕಾರ್ಯಾಚರಣೆ ನಡೆಸಲು ಮುಂದಾಗಿದೆ. ಬೀದಿನಾಯಿಗಳ ಸಂತಾನಹರಣ ಶಸ್ತಚಿಕಿತ್ಸೆಯನ್ನು ಪಶು ಇಲಾಖೆಯ ವೈದ್ಯಾಧಿಕಾರಿಗಳಿಂದ ಮಾಡಿಸಿ ಆ ಬೀದಿನಾಯಿಗಳನ್ನು ಶಸ್ತಚಿಕಿತ್ಸೆ ನಂತರ 3 ದಿನಗಳ ಕಾಲ ಶುಶ್ರೂಷೆ ಮಾಡಿ ನಂತರ ಹಿಡಿದ ಜಾಗೆಯಲ್ಲಿ ಬಿಡಲಾಗುವುದು, ಎಬಿಸಿ ನಿಯಮ ಅನುಷ್ಠಾನಗೊಳಿಸಲು ಕಡ್ಡಾಯವಾಗಿ ಖಾಸಗಿ ಹಾಗೂ ಸರ್ಕಾರಿ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ಕ್ರೀಡಾ ಸಂಕಿರ್ಣ ಬಸ್ ನಿಲ್ದಾಣಗಳು, ರೇಲ್ವೆ ನಿಲ್ದಾಣಗಳ ನಾಯಿಗಳಿಗೆ ಹಾಗೂ ಆಕ್ರಮಣಕಾರಿ ನಾಯಿಗಳನ್ನು ಹುಚ್ಚು ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ಮತ್ತು ರೇಬಿಸ್ ಲಸಿಕೆ ಹಾಕಿಸಿ ಖಾಯಂ ವಾಸವಿರಲು ಆಶ್ರಯತಾಣಗಳನ್ನು ನಿರ್ಮಾಣ ಮಾಡುವುದು ಎಂದು ನಗರಸಭೆ ಪೌರಾಯುಕ್ತ ಎಚ್.ಕಾಂತರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.