Haveri, District Hospital, Pacients, Ambulance, Problem,  
ಹಾವೇರಿ

ಹಾವೇರಿ ಜಿಲ್ಲಾಸ್ಪತ್ರೆಗೆ ಒಂದೇ ಆಂಬುಲೆನ್ಸ್ !; 108 ವಾಹನಕ್ಕೆ ತಾಸುಗಟ್ಟಲೇ ಕಾಯಬೇಕು; ತುರ್ತು ಚಿಕಿತ್ಸಾ ರೋಗಿಗಳು, ಸಂಬಂಧಿಕರ ಪರದಾಟ

ಹಾವೇರಿ: ನಗರದ ಸರ್ಕಾರಿ ಸಾರ್ವಜನಿಕ ಜಿಲ್ಲಾಸ್ಪತ್ರೆಯಲ್ಲಿ ಕೇವಲ ಒಂದು ಆಂಬುಲೆನ್ಸ್ ಇದ್ದು, 108 ಆರೋಗ್ಯ ಕವಚ ಯೋಜನೆ ಎರಡು ಆಂಬುಲೆನ್ಸ್‌ಗಳು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದು, ತುರ್ತು ಚಿಕಿತ್ಸೆ ಅಗತ್ಯವಿರುವ ಬಡ, ಮಧ್ಯಮ ವರ್ಗದ ರೋಗಿಗಳು ಪರದಾಡುವಂತಾಗಿದೆ.
ಜಿಲ್ಲೆಯ ಎಂಟು ತಾಲೂಕುಗಳಿಂದ ಜಿಲ್ಲಾಸ್ಪತ್ರೆಗೆ ನಿತ್ಯವೂ ಸಾವಿರಾರು ರೋಗಿಗಳು ಬರುತ್ತಾರೆ. ಹಾವು ಕಡಿತ, ರಸ್ತೆ ಅಪಘಾತ, ಚಾಕು ಇರಿತ, ಗಲಾಟೆ, ವಿಷ ಸೇವನೆ, ಮತ್ತಿತರ ತೊಂದರೆಗೆ ಒಳಗಾದ ನೂರಾರು ರೋಗಿಗಳು ನಿತ್ಯವೂ ಜಿಲ್ಲಾಸ್ಪತ್ರೆಯ ತುರ್ತು ಚಿಕಿತ್ಸಾ ಘಟಕಕ್ಕೆ ಬರುತ್ತಾರೆ. ಹಳ್ಳಿಗಳು, ಹೋಬಳಿ, ತಾಲೂಕು ಸ್ಥಳದಿಂದ ಜಿಲ್ಲಾಸ್ಪತ್ರೆಗೆ ಬರುತ್ತಾರೆ. ಹೆಚ್ಚಿನ ಚಿಕಿತ್ಸೆಗೆಂದು ಜಿಲ್ಲಾಸ್ಪತ್ರೆ ವೈದ್ಯರ ಸಲಹೆ ಮೇರೆಗೆ ಇಲ್ಲಿಂದ ಹುಬ್ಬಳ್ಳಿಯ ಕಿಮ್ಸ್, ಇತರ ಆಸ್ಪತ್ರೆಗಳಿಗೆ ತೆರಳುತ್ತಾರೆ.
ಆದರೆ, ಜಿಲ್ಲಾಸ್ಪತ್ರೆಯಲ್ಲಿ ಕೇವಲ ಒಂದೇ ಆಂಬುಲೆನ್ಸ್ ಇದೆ. ಇರುವ ಒಂದು ಆಂಬುಲೆನ್ಸ್‌ಗೂ ಹಾವೇರಿಯಿಂದ ಹುಬ್ಬಳ್ಳಿಗೆ ತೆರಳಲು 2,500 ರೂ. ಡೀಸೆಲ್ ಶುಲ್ಕ ಪಡೆಯಲಾಗುತ್ತದೆ. ಎರಡು 108 ಉಚಿತ ಆಂಬುಲೆನ್ಸ್‌ಗಳು ಮಾತ್ರ ಇದ್ದು, ಬಹುತೇಕ ಇವು ಬಿಸಿ ಇರುತ್ತವೆ. 108 ಆಂಬುಲೆನ್ಸ್ ಬೇಕಾದರೆ ರೋಗಿಗಳು ತಾಸುಗಟ್ಟಲೇ ಕಾಯಬೇಕಿದೆ.
ಜಿಲ್ಲಾಸ್ಪತ್ರೆಗೆ ಬಹುತೇಕವಾಗಿ ಕಡು ಬಡವರು, ಕಾರ್ಮಿಕರು, ಕೂಲಿಕಾರರು, ತುರ್ತು ಚಿಕಿತ್ಸೆ ವೇಳೆ ಮಧ್ಯಮ ವರ್ಗದವರು ಬರುತ್ತಾರೆ. ಇಂತಹ ಸಂದರ್ಭದಲ್ಲಿ ಸಕಾಲಕ್ಕೆ ಸರಿಯಾಗಿ ಆಂಬುಲೆನ್ಸ್ ಸೌಲಭ್ಯ ದೊರೆಯುತ್ತಿಲ್ಲ. ಖಾಸಗಿ ಆಂಬುಲೆನ್ಸ್‌ನವರು 3ರಿಂದ 10 ಸಾವಿರ ರೂ.ವರೆಗೆ ಸುಲಿಗೆ ಮಾಡುತ್ತಾರೆ ಎಂಬ ಆರೋಪಗಳಿವೆ.
ಅಲ್ಪಸಂಖ್ಯಾತರ ಇಲಾಖೆಯಿಂದ ಅಂಜುಮನ್ ಸಂಸ್ಥೆಗೆ ಒಂದು ಆಂಬುಲೆನ್ಸ್ ನೀಡಲಾಗಿದೆ. ಈ ಆಂಬುಲೆನ್ಸ್‌ಗೂ ಶುಲ್ಕ ವಿಧಿಸಲಾಗುತ್ತದೆ. ವಕ್ಫ್ ಬೋರ್ಡ್‌ನಿಂದ ನಿರ್ವಹಣೆ ವೆಚ್ಚ ನೀಡುವುದಿಲ್ಲ. ಹಾಗಾಗಿ, ರೋಗಿಗಳಿಂದಲೇ ಡೀಸೆಲ್ ವೆಚ್ಚ, ಚಾಲಕನ ಶುಲ್ಕ ಪಡೆದು ನಿರ್ವಹಣೆ ಮಾಡಲಾಗುತ್ತಿದೆ ಎಂದು ಅಂಜುಮನ್ ಸಂಸ್ಥೆ ಅಧ್ಯಕ್ಷ ಇರ್ಫಾನ್‌ಖಾನ್ ಪಠಾಣ ತಿಳಿಸಿದ್ದಾರೆ.
ಆಂಬುಲೆನ್ಸ್ ಸಮಸ್ಯೆಯಿಂದ ಜಿಲ್ಲೆಯ ಬಡ ರೋಗಿಗಳು ಹಾಗೂ ಅವರ ಕುಟುಂಬದವರು ರೋಸಿ ಹೋಗಿದ್ದಾರೆ. ಆರೋಗ್ಯ ವ್ಯವಸ್ಥೆಗಾಗಿ ಸರ್ಕಾರ ನೂರಾರು ಕೋಟಿ ಖರ್ಚು ಮಾಡುತ್ತಿದ್ದು, ಕನಿಷ್ಠ ಆಂಬುಲೆನ್ಸ್ ವ್ಯವಸ್ಥೆಯನ್ನೂ ಮಾಡುತ್ತಿಲ್ಲ ಎಂಬುದು ಬೇಸರದ ಸಂಗತಿಯಾಗಿದೆ. ಇನ್ನಾದರೂ ಆರೋಗ್ಯ ಇಲಾಖೆ ಹಾಗೂ ಹಾವೇರಿ ವೈದ್ಯಕೀಯ ವಿಜ್ಞಾನ ಸಂಸ್ಥೆ (ಹಿಮ್ಸ್) ಡೀನ್ ಡಾ.ಪ್ರದೀಪಕುಮಾರ ಮುತುವರ್ಜಿ ವಹಿಸಬೇಕು. ಜಿಲ್ಲಾಸ್ಪತ್ರೆಗೆ ಹೆಚ್ಚುವರಿಯಾಗಿ ಆಂಬುಲೆನ್ಸ್ ಸೇವೆ ನೀಡುವಂತೆ ಸಾರ್ವಜನಿಕರಿಂದ ಆಗ್ರಹ ಕೇಳಿ ಬಂದಿದೆ.
18 ಖಾಸಗಿ ಆಂಬುಲೆನ್ಸ್
ಜಿಲ್ಲಾಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದ ಎದುರು ಕಾಗಿನೆಲೆ ರಸ್ತೆಬದಿಯಲ್ಲಿ ನಿತ್ಯವೂ ಹತ್ತಾರು ಖಾಸಗಿ ಆಂಬುಲೆನ್ಸ್‌ಗಳು ಸರತಿಯಲ್ಲಿ ನಿಂತಿರುತ್ತವೆ. ಜಿಲ್ಲಾಸ್ಪತ್ರೆಯಲ್ಲಿ ಆಂಬುಲೆನ್ಸ್ ಸೌಲಭ್ಯದ ಸಮಸ್ಯೆಯ ಲಾಭ ಪಡೆಯಲು ಹವಣಿಸುವ ಕೆಲ ಖಾಸಗಿ ಆಂಬುಲೆನ್ಸ್‌ಗಳ ಚಾಲಕರು ತುರ್ತು ಚಿಕಿತ್ಸೆಗಾಗಿ ಹುಬ್ಬಳ್ಳಿ, ದಾವಣಗೆರೆ, ಬೆಂಗಳೂರು ತೆರಳುವ ರೋಗಿಗಳ ಕುಟುಂಬದವರಿಂದ ಹೆಚ್ಚುವರಿ ಹಣ ಪಡೆಯುತ್ತಿದ್ದಾರೆ. ಹಾವೇರಿಯಿಂದ ಹುಬ್ಬಳ್ಳಿಗೆ ತೆರಳಲು 3ರಿಂದ 10 ಸಾವಿರ ರೂ.ವರೆಗೆ ಪೀಕುತ್ತಾರೆ ಎಂದು ರೋಗಿಯೊಬ್ಬರ ಸಂಬಂಧಿ ರೇಣುಕಾ ಎಸ್. ಆರೋಪಿಸಿದರು. ಬಡವರಾದ ನಾವು ಇಷ್ಟೊಂದು ಹಣ ಕೊಟ್ಟು ಹೋಗಲು ಸಾಧ್ಯವಿಲ್ಲ. ಉಚಿತ 108 ಆಂಬುಲೆನ್ಸ್‌ಗಾಗಿ ಕಾಯುತ್ತೇವೆ. ನಮ್ಮ ರೋಗಿಯ ಅದೃಷ್ಟ ಇದ್ದರೆ ಬದುಕಲಿ, ಇಲ್ಲದಿದ್ದರೆ ಸಾಯಲಿ ಎಂದು ಕಣ್ಣೀರಿಟ್ಟರು.
ಸಚಿವರು ಹೇಳಿದರೂ ಸೌಲಭ್ಯವಿಲ್ಲ
ಬೆಂಗಳೂರಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಗವರ್ನಿಂಗ್ ಕೌನ್ಸಿಲ್ ಸಭೆಯಲ್ಲಿ ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಕೇವಲ ಒಂದು ಆಂಬುಲೆನ್ಸ್ ಇರುವ ವಿಷಯ ತಿಳಿದು ಹಿಂದಿನ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲರು ಅಚ್ಚರಿಯಾಗಿದ್ದರು. ಹೆಚ್ಚುವರಿ ಮೂರು ಆಂಬುಲೆನ್ಸ್ ಸೌಲಭ್ಯ ಒದಗಿಸಲು ಅಧಿಕಾರಿಗಳಿಗೆ ಸೂಚಿಸಿದ್ದರು. ಕೆಡಿಪಿ ಸಭೆಯಲ್ಲಿ ಹಿಮ್ಸ್ ಆಡಳಿತ ಮಂಡಳಿ ಸದಸ್ಯ ಶಂಕರ ಸುತಾರ ಹೆಚ್ಚುವರಿ ಆಂಬುಲೆನ್ಸ್ ಒದಗಿಸುವಂತೆ ಪತ್ರ ಬರೆದಿದ್ದರು. ಇದಕ್ಕೆ ಶಾಸಕ ರುದ್ರಪ್ಪ ಲಮಾಣಿ ದನಿಗೂಡಿಸಿದ್ದರು. ಆದರೂ, ಈವರೆಗೆ ಈ ಸಮಸ್ಯೆಗೆ ಪರಿಹಾರ ದೊರೆಯದಿರುವುದು ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ.
ಸಮೀಪದ 108 ವಾಹನ ಕಳುಹಿಸಿ
108 ಆರೋಗ್ಯ ಕವಚ ಯೋಜನೆಯ ಅಡಿಯಲ್ಲಿ ಹಾವೇರಿ ಶಹರದ ಜಿಲ್ಲಾಸ್ಪತ್ರೆಗೆ ಎರಡು ಆಂಬುಲೆನ್ಸ್ ನೀಡಲಾಗಿದೆ. ಈ ಮೊದಲು ಹಾವೇರಿ ಸಮೀಪದ ಬಂಕಾಪುರ, ಆಡೂರ, ಬ್ಯಾಡಗಿಯ 108 ಆಂಬುಲೆನ್ಸ್‌ಗಳೂ ಉಚಿತವಾಗಿ ಸೇವೆ ಒದಗಿಸುತ್ತಿದ್ದವು. ವರ್ಷದಿಂದ ಈ ಆಂಬುಲೆನ್ಸ್‌ಗಳು ಸೇವೆ ಒದಗಿಸುತ್ತಿಲ್ಲ. ಇರುವ 2 ಆಂಬುಲೆನ್ಸ್‌ಗಳೂ ಆಗಾಗ ರಿಪೇರಿ ಬರುತ್ತವೆ. ಹಾಗಾಗಿ, ರೋಗಿಗಳು ತಾಸುಗಟ್ಟಲೇ ಕಾಯುವಂತಾಗಿದೆ. ಮೊದಲಿನಂತೆ ಹಾವೇರಿ ಸಮೀಪದ 108 ವಾಹನಗಳನ್ನೂ ಜಿಲ್ಲಾಸ್ಪತ್ರೆಗೆ ಬಳಸಬೇಕು ಎಂಬ ಒತ್ತಾಯವಿದೆ.
"

ನಿತ್ಯವೂ ನೂರಾರು ರೋಗಿಗಳು ತುರ್ತು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಆಗಮಿಸುತ್ತಾರೆ. ರಾಜ್ಯ ಸರ್ಕಾರ ರೋಗಿಗಳಿಗೆ ಅಗತ್ಯವಿರುವ ಆಂಬುಲೆನ್ಸ್ ಸೇವೆ ಹೆಚ್ಚಿಸಬೇಕು. ಕನಿಷ್ಠ ಹೆಚ್ಚುವರಿಯಾಗಿ 3 ಆಂಬುಲೆನ್ಸ್ ಜಿಲ್ಲಾಸ್ಪತ್ರೆಗೆ ಕೊಡಬೇಕು. ರೋಗಿಗಳಿಗೆ 24/7, ಉಚಿತ ಸೇವೆ ಆರಂಭಿಸಬೇಕು.

— ಮಂಜುನಾಥ ಮಡಿವಾಳರ, ಸಾಮಾಜಿಕ ಕಾರ್ಯಕರ್ತ, ಹಾವೇರಿ


"

ಜಿಲ್ಲಾಸ್ಪತ್ರೆಯಲ್ಲಿ ಇರುವ 1 ಆಂಬುಲೆನ್ಸ್‌ಗೆ ಆರೋಗ್ಯ ರಕ್ಷಾ ಸಮಿತಿ ಸೂಚನೆ ಮೇರೆಗೆ 2,500 ರೂ. ಶುಲ್ಕ ವಿಧಿಸಲಾಗುತ್ತಿದೆ. ಹೆಚ್ಚುವರಿ ಆಂಬುಲೆನ್ಸ್‌ಗಳ ವ್ಯವಸ್ಥೆ ಮಾಡುವಂತೆ ಆರೋಗ್ಯ ಇಲಾಖೆ ಹಾಗೂ ಹಿಮ್ಸ್ ನಿರ್ದೇಶಕರಿಗೆ ಮನವಿ ಮಾಡಲಾಗಿದೆ. ಸ್ಥಳೀಯ ಶಾಸಕ ರುದ್ರಪ್ಪ ಲಮಾಣಿ ಅವರಿಗೂ ಕೇಳಿದ್ದೇವೆ.

— ಡಾ.ಪಿ.ಆರ್.ಹಾವನೂರ, ಜಿಲ್ಲಾ ಶಸ್ತ್ರ ಚಿಕಿತ್ಸಕ