Child Rights  
ಹಾವೇರಿ

ಮಕ್ಕಳ ರಕ್ಷಣಾ ಆಯೋಗದಿಂದ ದೂರು; ಜಿಲ್ಲಾಸ್ಪತ್ರೆಯ ಕಾರಿಡಾರ್‌ನಲ್ಲಿ ಹೆರಿಗೆ, ಶಿಶು ಸಾವು ಪ್ರಕರಣ

ಹಾವೇರಿ: ಜಿಲ್ಲಾಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿ ನಿರ್ಲಕ್ಷ್ಯದಿಂದ ಹಾಸಿಗೆ ಸಿಗದೇ ಆಸ್ಪತ್ರೆ ಕಾರಿಡಾರ್‌ನಲ್ಲೇ ಮಹಿಳೆಯೊಬ್ಬರಿಗೆ ಹೆರಿಗೆಯಾಗಿ, ಶಿಶು ಮೃತಪಟ್ಟ ಘಟನೆ ಕುರಿತು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಬುಧವಾರ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದೆ.
ರಾಣೆಬೆನ್ನೂರ ತಾಲೂಕಿನ ಕಾಕೋಳ ಗ್ರಾಮದ ರೂಪಾ ಎಂಬುವರಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಹೀಗಾಗಿ, ಅವರ ಕುಟುಂಬದವರು ಜಿಲ್ಲಾಸ್ಪತ್ರೆಯ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ಧಾವಿಸಿದ್ದರು. ಆದರೆ, ರೂಪಾ ಅವರಿಗೆ ಆಸ್ಪತ್ರೆ ಸಿಬ್ಬಂದಿ ಬೆಡ್ ವ್ಯವಸ್ಥೆ ಮಾಡಿರಲಿಲ್ಲ.
ರೂಪಾ ಶೌಚಕ್ಕೆ ಹೋಗುವಾಗ ಮಾರ್ಗಮಧ್ಯೆ ಕಾರಿಡಾರ್‌ನಲ್ಲೇ ಹೆರಿಗೆ ಸಂಭವಿಸಿ, ಮಗು ಜನಿಸಿತ್ತು. ಮಗು ನೆಲದ ಮೇಲೆ ಬಿದ್ದು, ತಲೆಗೆ ಪೆಟ್ಟಾಗಿ ಮೃತಪಟ್ಟಿದೆ. ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿ ನಿರ್ಲಕ್ಷೃವೇ ಇದಕ್ಕೆ ಕಾರಣ ಎಂದು ರೂಪಾಳ ಕುಟುಂಬಸ್ಥರು ಆರೋಪಿಸಿದ್ದರು. ಸಮಯಕ್ಕೆ ಸರಿಯಾಗಿ ಸೂಕ್ತ ವ್ಯವಸ್ಥೆ ಕಲ್ಪಿಸಿದ್ದರೆ ಈ ದುರ್ಘಟನೆ ಸಂಭವಿಸುತ್ತಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಈ ಕುರಿತು ದಿನಪತ್ರಿಕೆಗಳಲ್ಲಿ ವರದಿ ಪ್ರಕಟವಾಗಿತ್ತು. ಈ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತ ದೂರು ದಾಖಲಿಸಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಸೂಕ್ತ ಪರಿಶೀಲನೆ ನಡೆಸಿ ಶಿಶುವಿನ ಮರಣಕ್ಕೆ ಕಾರಣವಾದ ವೈದ್ಯರು, ಸಿಬ್ಬಂದಿ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು. ಈ ಕುರಿತು 3 ದಿನದೊಳಗೆ ವರದಿ ನೀಡುವಂತೆ ಹಾವೇರಿ ಜಿಲ್ಲಾಧಿಕಾರಿಯವರಿಗೆ ಸೂಚಿಸಿರುವುದಾಗಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ ಕೋಸಂಬೆ ‘ವಿಜಯವಾಣಿ’ಗೆ ತಿಳಿಸಿದ್ದಾರೆ.