Haveri, District Court, Fake Bomb, Mail,
ಹಾವೇರಿ: ನಗರದ ಹಳೆಯ ಪಿ.ಬಿ. ರಸ್ತೆಯಲ್ಲಿನ ಜಿಲ್ಲಾ ನ್ಯಾಯಾಲಯದಲ್ಲಿ ಬಾಂಬ್ ಇಡಲಾಗಿದೆ ಎಂಬ ಬೆದರಿಕೆ ಮೇಲ್ ಸಂದೇಶ ಒಂದು ಸೋಮವಾರ ನ್ಯಾಯಾಲಯಕ್ಕೆ ಬಂದಿತ್ತು. ಇದರಿಂದ ಕೋರ್ಟ್ ಆವರಣದಲ್ಲಿ ಕೆಲಕಾಲ ಭಯದ ವಾತಾವರಣ ಸೃಷ್ಟಿಯಾಗಿತ್ತು. ವಕೀಲರು, ಕಕ್ಷಿದಾರರು ಹಾಗೂ ಕೋರ್ಟ್ ಸಿಬ್ಬಂದಿ ಕೋರ್ಟ್ ಕಲಾಪಗಳನ್ನು ಬಿಟ್ಟು ಹೊರಗೆ ಓಡಿ ಬಂದರು.
ಮಧ್ಯಾಹ್ನ 2-15ಕ್ಕೆ ಬಾಂಬ್ ಸ್ಪೋಟ ಮಾಡುವುದಾಗಿ ದುಷ್ಕರ್ಮಿಗಳು ಬೆದರಿಕೆ ಸಂದೇಶ ಕಳುಹಿಸಿದ್ದರು. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಹಾವೇರಿ ಶಹರ ಠಾಣೆ ಇನ್‌ಸ್ಪೆಕ್ಟರ್ ಮೋತಿಲಾಲ ಪವಾರ, ಸಿಬ್ಬಂದಿ, ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನ ದಳದ ಸಿಬ್ಬಂದಿ ಧಾವಿಸಿ ಪರಿಶೀಲಿಸಿದರು. ಕೋರ್ಟ್ ಆವರಣ, ಬೇಸ್‌ಮೆಂಟ್, ಕಾರ್, ಬೈಕ್ ಪಾರ್ಕಿಂಗ್ ಸ್ಥಳ ಸೇರಿದಂತೆ ಎಲ್ಲೆಡೆ ಪರಿಶೀಲನೆ ನಡೆಸಿದರು.
ಕೋರ್ಟ್ ಹೊರಗಡೆ ನೂರಾರು ವಕೀಲರು, ಸಾರ್ವಜನಿಕರು ಜಮಾಯಿಸಿದ್ದರು. ಸ್ಪೋಟಕ ವಸ್ತುಗಳು ಏನೂ ಸಿಗದ ಹಿನ್ನೆಲೆಯಲ್ಲಿ ಇದೊಂದು ಹುಸಿ ಬಾಂಬ್ ಬೆದರಿಕೆ ಸಂದೇಶ ಎಂದು ಮತ್ತೆ ಕಲಾಪಗಳನ್ನು ಆರಂಭಿಸಲಾಯಿತು ಎಂದು ಪೊಲೀಸರು ತಿಳಿಸಿದರು.
ಹಾವೇರಿ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಫೆಬ್ರವರಿ 16ರಂದು ಇದೇ ರೀತಿ ಹುಸಿ ಬೆದರಿಕೆ ಮೇಲ್ ಬಂದಿತ್ತು. ಎರಡನೇ ಬಾರಿ ಇಂತಹ ಘಟನೆ ನಡೆದಿದ್ದು, ಇದರಿಂದ ಸಾರ್ವಜನಿಕರಲ್ಲಿ ಆತಂಕ ಮೂಡಿದೆ. ಇಂತಹ ಘಟನೆ ಮರುಕಳಿಸದಂತೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದರು.