ಹಾವೇರಿ: ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಜಿಲ್ಲೆಗೆ 15.14 ಲಕ್ಷ ಕ್ವಿಂಟಾಲ್ ಅಕ್ಕಿ ಪೂರೈಕೆ ಮಾಡಲಾಗಿದ್ದು, ಈ ಮೂಲಕ ಅನ್ನಭಾಗ್ಯ ಯೋಜನೆ ಬಡವರ ಹಸಿವು ನೀಗಿಸಿದೆ.
ಕೇಂದ್ರ ಸರ್ಕಾರದಿಂದ 5 ಕೆಜಿ ಹಾಗೂ ರಾಜ್ಯ ಸರ್ಕಾರದ 5 ಕೆಜಿ ಅಕ್ಕಿ ಸೇರಿ ಒಬ್ಬರಿಗೆ 10 ಕೆಜಿ ಅಕ್ಕಿ ವಿತರಣೆ ಮಾಡಲಾಗುತ್ತಿದೆ. ಪ್ರಸಕ್ತ ಆರ್ಥಿಕ ವರ್ಷ 2025-26ರಲ್ಲಿ ಈ ಕುರಿತ ಅಂಕಿ- ಅಂಶಗಳು ಬೆಳಕಿಗೆ ಬಂದಿವೆ. ಒಟ್ಟಾರೆ ಜಿಲ್ಲೆಯ ಫಲಾನುಭವಿಗಳಿಗೆ 15,14,940 ಕ್ವಿಂಟಾಲ್ ಪಡಿತರ ಅಕ್ಕಿ ವಿತರಿಸಲಾಗಿದೆ.
ಜಿಲ್ಲೆಯ ಒಟ್ಟು 16,57,200 ಬಡ ಮತ್ತು ಮಧ್ಯಮ ವರ್ಗದ ಫಲಾನುಭವಿಗಳಿಗೆ ಅನ್ನಭಾಗ್ಯ ಯೋಜನೆಯಡಿ ಅಕ್ಕಿ ವಿತರಣೆ ಸಕಾರಾತ್ಮಕವಾಗಿ ಹಂಚಿಕೆಯಾಗಿದೆ. ಜಿಲ್ಲೆಯ ರಾಣೆಬೆನ್ನೂರ, ಹಾವೇರಿ, ಹಾನಗಲ್ಲ ತಾಲೂಕುಗಳಲ್ಲಿ ಪಡಿತರ ಚೀಟಿದಾರರ ಸಂಖ್ಯೆ ಹೆಚ್ಚಾಗಿರುವ ಕಾರಣ ಈ ತಾಲೂಕುಗಳು ಪಡಿತರ ಅಕ್ಕಿ ವಿತರಣೆ ಸಂಖ್ಯೆಯಲ್ಲಿ ಮೊದಲ ಮೂರು ಸ್ಥಾನ ಪಡೆದಿವೆ. ಶಿಗ್ಗಾಂವಿ, ಸವಣೂರ, ಬ್ಯಾಡಗಿ, ಹಿರೇಕೆರೂರ ಹಾಗೂ ರಟ್ಟೀಹಳ್ಳಿ ತಾಲೂಕುಗಳು ನಂತರದ ಸ್ಥಾನಗಳನ್ನು ಪಡೆದಿವೆ ಎನ್ನುತ್ತವೆ ಆಹಾರ ಇಲಾಖೆ ಅಂಕಿ-ಅಂಶಗಳು.
ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಈ ಯೋಜನೆ ಪರಿಣಾಮಕಾರಿಯಾಗಿ ಜಾರಿಯಾಗುತ್ತಿದ್ದು, ಮಹಿಳೆಯರು ಮತ್ತು ಮಕ್ಕಳ ಪೌಷ್ಠಿಕಾಂಶ ಹೆಚ್ಚಳಕ್ಕೂ ಸಹಕಾರಿಯಾಗಿದೆ. ಕೋವಿಡ್ ನಂತರ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿರುವ ಸಾವಿರಾರು ಬಡ ಕುಟುಂಬಗಳಿಗೆ ಅನ್ನಭಾಗ್ಯ ಯೋಜನೆ ಜೀವನಾಡಿಯಾಗಿ ಪರಿಣಮಿಸಿದೆ.
ಪ್ರತಿ ತಿಂಗಳು ನಿಗಧಿತ ಪ್ರಮಾಣದಲ್ಲಿ ಅರ್ಹ ಫಲಾನುಭವಿಗಳಿಗೆ ಅಕ್ಕಿ ವಿತರಣೆ ಆಗುತ್ತಿದೆ. ಹಲವು ಬಡ ಕುಟುಂಬಗಳ ಜೀವನ ನಿರ್ವಹಣೆ ಹೊರೆ ಕಡಿಮೆ ಮಾಡುತ್ತಿದೆ. ಪರಿಣಾಮ ಬಡವರ ಖರ್ಚು ಕೊಂಚ ಕಡಿಮೆಯಾಗುತ್ತಿದೆ. ಇದರಲ್ಲಿ ಉಳಿತಾಯವಾದ ಹಣವನ್ನು ಮಕ್ಕಳ ಶಿಕ್ಷಣ, ಆರೋಗ್ಯ, ಮತ್ತಿತರ ಅವಶ್ಯಕತೆಗಳಿಗೆ ಬಳಕೆ ಮಾಡುತ್ತಿದ್ದಾರೆ.
ಪಾರದರ್ಶಕ ವಿತರಣೆ
ಡಿಜಿಟಲ್ ರೇಷನ್ ಕಾರ್ಡ್ ವ್ಯವಸ್ಥೆ, ಪಾರದರ್ಶಕ ವಿತರಣೆ ಕ್ರಮ, ನ್ಯಾಯ ಬೆಲೆ ಅಂಗಡಿಗಳ ಸಿಬ್ಬಂದಿ ಫಲಾನುವಿಗಳ ಹೆಬ್ಬೆಟ್ಟು ಅಚ್ಚು ಪಡೆದು ರೇಷನ್ ವಿತರಿಸುತ್ತಿದ್ದಾರೆ. ಜತೆಗೆ ರೇಷನ್ ಪಡೆಯದ ಫಲಾನುಭವಿಗಳಿಗೆ ನ್ಯಾಯಬೆಲೆ ಅಂಗಡಿಕಾರರೇ ಕರೆ ಮಾಡಿ ಕರೆಸಿ ರೇಷನ್ ವಿತರಿಸುತ್ತಿದ್ದಾರೆ. ಇಂತಹ ಹಲವು ಪಾರದರ್ಶಕ ಅನುಕ್ರಮಗಳನ್ನು ಆಹಾರ ಇಲಾಖೆ ಕೈಗೊಂಡ ಪರಿಣಾಮ ಪಡಿತರ ಅಕ್ಕಿ ಫಲಾನುಭವಿಗಳ ಕೈಸೇರುತ್ತಿದೆ. ಆದರೆ, ಅಕ್ರಮ ಪಡಿತರ ಅಕ್ಕಿ ದಂಧೆಕೋರರು ಹಲವು ಅಡ್ಡದಾರಿ ಮೂಲಕ ದಂಧೆಯನ್ನು ಜೀವಂತವಾಗಿ ಇಟ್ಟಿದ್ದಾರೆ. ಇದಕ್ಕೂ ಇಲಾಖೆ ಸೂಕ್ತ ಕ್ರಮ ಜರುಗಿಸಬೇಕಿದೆ.
"
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಬಿಪಿಎಲ್ ಕಾರ್ಡ್‌ದಾರರಿಗೆ ಒಬ್ಬರಿಗೆ ತಲಾ 10 ಕೆಜಿ ಅಕ್ಕಿ ವಿತರಿಸಲಾಗುತ್ತಿದೆ. ಈ ಯೋಜನೆಯಿಂದ ಸಾವಿರಾರು ಬಡವರ ಹಸಿವು ನೀಗುತ್ತಿದೆ. ಫಲಾನುಭವಿಗಳ ಅನುಭವ ಮತ್ತು ಯೋಜನೆ ಸಾಮಾಜಿಕ ಪರಿಣಾಮಗಳನ್ನು ಬೆಳಕಿಗೆ ತಂದು ಯೋಜನೆ ಅನುಷ್ಠಾನದಲ್ಲಿ ಮತ್ತಷ್ಟು ಪರಿಣಾಮಕಾರಿ ಆಗುವಂತೆ ಯೋಜನೆ ರೂಪಿಸಲಾಗುವುದು. ಇದಕ್ಕೆ ಸಾರ್ವಜನಿಕರ ಸಹಕಾರವೂ ಅಗತ್ಯವಾಗಿದೆ.
— ಮಂಜುನಾಥ ಡಿ.ಜೆ., ಉಪನಿರ್ದೇಶಕ, ಆಹಾರ ಇಲಾಖೆ
2025 26ರಲ್ಲಿ ಸರಬರಾಜಾದ ಅಂಕಿ- ಅಂಶ (ಕ್ವಿಂಟಾಲ್‌ಗಳಲ್ಲಿ)
ತಾಲೂಕು ರಾಜ್ಯ ಸರ್ಕಾರದಿಂದ 5 ಕೆಜಿ ಕೇಂದ್ರ ಸರ್ಕಾರದಿಂದ 5 ಕೆಜಿ ಒಟ್ಟು 10 ಕೆಜಿ ಅಕ್ಕಿ ವಿವರ
ರಾಣೆಬೆನ್ನೂರ 1,48,570 1,42,000 2,90,570
ಹಾವೇರಿ 1,36,860 1,28,290 2,65,150
ಹಾನಗಲ್ಲ 1,17,530 1,15,780 2,33,310
ಶಿಗ್ಗಾಂವಿ 95,250 89,480 1,84,730
ಸವಣೂರ 89,300 85,360 1,74,660
ಬ್ಯಾಡಗಿ 76,720 79,070 1,55,790
ಹಿರೇಕೆರೂರ 54,480 53,420 1,07,900
ರಟ್ಟೀಹಳ್ಳಿ 51,920 50,910 1,02,830
----------------------------------------------------------------
ಒಟ್ಟು 7,70,630 7,44,310 15,14,940