ಸವಣೂರಿನಲ್ಲಿ ಏರ್ಪಡಿಸಿರುವ ಹಾವೇರಿ ಜಿಲ್ಲಾ 15ನೇ ಕನ್ನಡ ಸಾಹಿತ್ಯ ಸಮ್ಮೇಳನ ಆಮಂತ್ರಣ ಪತ್ರಿಕೆಯನ್ನು ಶಿಗ್ಗಾಂವಿಯಲ್ಲಿ ಶನಿವಾರ ಶಾಸಕ ಯಾಸೀರಖಾನ್ ಪಠಾಣ ಬಿಡುಗಡೆಗೊಳಿಸಿದರು. ಪ್ರಭು ಅರಗೋಳ, ಸಿ.ಎನ್.ಪಾಟೀಲ, ರಮೇಶ ಹರಿಜನ, ಎಂ.ಜೆ. ಮುಲ್ಲಾ, ಗುಡ್ಡಪ್ಪ ಜಲದಿ, ಮಹೇಶ ಅಪ್ಪಣ್ಣನವರ ಹಾಗೂ ಇತರರು ಇದ್ದರು. 
ಹಾವೇರಿ

ಸಮ್ಮೇಳನ ಅರ್ಥಪೂರ್ಣ ಆಚರಣೆಗೆ ಸಿದ್ಧತೆ ಮಾಡಿಕೊಳ್ಳಿ

ಸವಣೂರ: ಸವಣೂರಿನಲ್ಲಿ ಜ. 24 ಹಾಗೂ 25ರಂದು ಏರ್ಪಡಿಸಿರುವ ಹಾವೇರಿ ಜಿಲ್ಲಾ 15ನೇ ಕನ್ನಡ ಸಾಹಿತ್ಯ ಸಮ್ಮೇಳನ ಅರ್ಥಪೂರ್ಣವಾಗಿ ಜರುಗಿಸಲು ಸರ್ವ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಶಾಸಕ ಯಾಸೀರಖಾನ್ ಪಠಾಣ ತಿಳಿಸಿದರು.
ಶಿಗ್ಗಾಂವಿಯಲ್ಲಿ ಶನಿವಾರ 15ನೇ ಕನ್ನಡ ಜಿಲ್ಲಾ ಸಮ್ಮೇಳನ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಕನ್ನಡ ಮನಸುಗಳು ಒಂದಾಗಿ ತಾಯಿ ಭುವನೇಶ್ವರಿ ತೇರು ಏಳೆಯಲು ಸಿದ್ಧರಾಗಿ. ಎರಡು ದಿನಗಳ ಕಾಲ ಜರುಗುವ ಕನ್ನಡ ಹಬ್ಬವನ್ನು ಮನೆಮಂದಿಯಲ್ಲರೂ ಕೂಡಿ ಆಚರಿಸುವಂತಹ ವಾತಾವರಣ ನಿರ್ಮಿಸಲಾಗಿದೆ. ಆದ್ದರಿಂದ, ಪಾಲಕರು ಮಕ್ಕಳೊಂದಿಗೆ ಆಗಮಿಸಿ, ಮಕ್ಕಳಲ್ಲಿ ನಾಡು, ನುಡಿ ಹಾಗೂ ಜಲದ ಕುರಿತು ಜಾಗೃತಿ ಮೂಡಿಸಲು ಮುಂದಾಗಬೇಕು ಎಂದರು.
ಕಸಾಪ ಜಿಲ್ಲಾ ಕಾರ್ಯದರ್ಶಿ ಪ್ರಭು ಅರಗೋಳ ಪ್ರಾಸ್ತಾವಿಕವಾಗಿ ಮಾತನಾಡಿ, ಎರಡು ದಿನಗಳ ಕಾಲ ಸಮ್ಮೇಳನ ಸಭಾಂಗಣದಲ್ಲಿ ಹಮ್ಮಿಕೊಂಡಿರುವ ಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸನ್ಮಾನ ಕುರಿತು ವಿವರಿಸಿದರು. ಕಸಾಪ ತಾಲೂಕು ಅಧ್ಯಕ್ಷ ಸಿ.ಎನ್.ಪಾಟೀಲ ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ ಹರಿಜನ, ಪ್ರಮುಖರಾದ ಎಂ.ಜೆ. ಮುಲ್ಲಾ, ಗುಡ್ಡಪ್ಪ ಜಲದಿ, ಮಹೇಶ ಅಪ್ಪಣ್ಣನವರ, ಮೌಲಾಸಾಬ್ ಹೊಂಬರಡಿ, ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳು ಹಾಗೂ ಇತರರು ಪಾಲ್ಗೊಂಡಿದ್ದರು.